
ಬೆಂಗಳೂರು:ಉದ್ಯಾನನಗರಿಯಲ್ಲಿ ಸೋಮವಾರ ಮಳೆಯ ಬೆನ್ನೇರಿಬಂದ ಬಿರುಗಾಳಿಯ ಆರ್ಭಟಕ್ಕೆ ಮೂವರು ಬಲಿಯಾಗಿದ್ದಾರೆ. ಮಲ್ಲೇಶ್ವರ ಮತ್ತು ವಿವೇಕನಗರದಲ್ಲಿ ರಸ್ತೆಬದಿಯ ಮರಗಳು ಬಿದ್ದು 3 ವರ್ಷದ ಬಾಲಕ ಮತ್ತು ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಪೂರೈಕೆ ಗುತ್ತಿಗೆದಾರ ಮೃತಪಟ್ಟಿದ್ದಾರೆ. ನಂದಿನಿ ಲೇಔಟ್ನಲ್ಲಿ ವಿದ್ಯುತ್ ಪ್ರವಹಿಸಿ ಮತ್ತೊಬ್ಬ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 12 ಗಂಟೆಗೆ ಭಾರಿ ಗಾಳಿಸಹಿತ ಸುರಿದ ಮಳೆಗೆ ನಗರದಾದ್ಯಂತ 30ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಬೈಕ್, ಕಾರಿನ ಮೇಲೆ ಬಿದ್ದ ಮರ: ಮಧ್ಯಾಹ್ನ 1.30ರಲ್ಲಿ ಮಲ್ಲೇಶ್ವರ 18ನೇ ಕ್ರಾಸ್ನಲ್ಲಿದ್ದ 40 ವರ್ಷದ ಹಳೆಯ ಆಕಾಶ ಮಲ್ಲಿಗೆ ಮರ ಬೈಕ್ ಹಾಗೂ ಕಾರಿನ ಮೇಲೆ ಬಿದ್ದಿದೆ. ಬೈಕ್ನಲ್ಲಿ ಸಂಚರಿಸುತ್ತಿದ್ದ ಫಿರೋಜ್(40) ಸ್ಥಳದಲ್ಲೇ ಮೃತಪಟ್ಟರೆ, ಅಲ್ತಾಫ್(48) ಹಾಗೂ ಕಾರಿನಲ್ಲಿದ್ದ ಸ್ವಾಮಿ (30) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗಾವರ ನಿವಾಸಿ ಫಿರೋಜ್, ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಒದಗಿಸುವ ಗುತ್ತಿಗೆದಾರ. 6 ತಿಂಗಳಿನ ಕೆಲಸದ ಹಣ ಪಡೆಯಲು ಸ್ನೇಹಿತ ಅಲ್ತಾಫ್ ಜತೆ ಮಲ್ಲೇಶ್ವರದ ಬಿಇಒ ಕಚೇರಿಗೆ ಭೇಟಿ ನೀಡಿ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಆಟವಾಡುತ್ತಿದ್ದ ಬಾಲಕ ಸಾವು
ಮಧ್ಯಾಹ್ನ 12.30ರಲ್ಲಿ ವಿವೇಕನಗರ 7ನೇ ಮುಖ್ಯರಸ್ತೆಯಲ್ಲಿ ಆಟವಾಡುತ್ತಿದ್ದ ಜೀವನ್ (3) ಮೇಲೆ ಮರದ ರೆಂಬೆ ಬಿದ್ದು ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ತಂದೆ ಕುಮಾರ್ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದಾರೆ. ಇದ್ದೊಬ್ಬ ಮಗನನ್ನು ಕಳಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
2 ವರ್ಷಗಳಲ್ಲಿ ನಾಲ್ವರ ಸಾವು
ಕಳೆದ ವರ್ಷವೂ ಇದೇ ರೀತಿ ಮಳೆಗೆ ಮರ ಬಿದ್ದು ಇಬ್ಬರು ಮೃತಪಟ್ಟಿದ್ದರು. ಆನೇಪಾಳ್ಯ ಬಸ್ ನಿಲ್ದಾಣದ ಬಳಿ ಮನೆಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದವರ ಮೇಲೆ ಭಾರಿ ಗಾತ್ರದ ಮರ ಬಿದ್ದು, ಒಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದರು. ಆಡುಗೋಡಿ ಸಿಎಆರ್ ಪೊಲೀಸ್ ಕ್ವಾಟ್ರರ್ಸ್ನಲ್ಲಿ ಒಣಗಿದ್ದ ಮರದ ರೆಂಬೆ ಬಿದ್ದು ಪುಟ್ಟರಂಗಪ್ಪ (80) ಎಂಬುವರು ಮೃತಪಟ್ಟಿದ್ದರು.
ಫಿರೋಜ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ
ಮೃತ ಫಿರೋಜ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಅದರೊಂದಿಗೆ ಗಂಭೀರ ಗಾಯಗಳಾಗಿರುವಮತ್ತಿಬ್ಬರ ಚಿಕಿತ್ಸಾ ವೆಚ್ಚ ಭರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
20 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ
ತಜ್ಞರ ಪ್ರಕಾರ ಮಳೆಗಿಂತ ಗಾಳಿಯ ಪ್ರಭಾವ ಹೆಚ್ಚಾಗಿದ್ದರಿಂದಾಗಿ ಮರಗಳು ಹೆಚ್ಚು ಬಿದ್ದಿವೆ. ಸೋಮವಾರ ಮಧ್ಯಾಹ್ನದ ವೇಳೆಗೆ 20 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ ಎಂದು ತಿಳಿಸಿದ್ದಾರೆ.
ವಿದ್ಯುತ್ ಶಾಕ್ನಿಂದ ಪಾದಚಾರಿ ಸಾವು
ನಂದಿನಿ ಲೇಔಟ್ನಲ್ಲಿ ಮಾರಪ್ಪನಪಾಳ್ಯದ ಪ್ರಭಾಕರ್ (38) ಎಂಬುವರು ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ. ಬಿಬಿಎಂಪಿ ಹೈಮಾಸ್ಟ್ ದೀಪಕ್ಕಾಗಿ ಬೆಸ್ಕಾಂ ವಿದ್ಯುತ್ ಮಾರ್ಗದಿಂದ ಸಂಪರ್ಕ ಪಡೆಯಲಾಗಿತ್ತು. ಸಂಪರ್ಕದಲ್ಲಿನ ದೋಷದಿಂದ ಮಳೆಗೆ ಗ್ರೌಂಡ್ ಆಗಿದೆ. ಅದೇ ಮಾರ್ಗದಲ್ಲಿ ನಡೆದು ಬಂದ ಪ್ರಭಾಕರ್ ಅವರಿಗೆ ಶಾಕ್ ಹೊಡೆದು ಕುಸಿದು ಬಿದ್ದಿದ್ದಾರೆ. ಕೂಡಲೇ ಫೋರ್ಟಿಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ. ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಬಿಎಂಪಿ ಬೀದಿ ದೀಪಗಳ ನಿರ್ವಹಣೆ ಗುತ್ತಿಗೆದಾರರನ್ನು ಪರವಾನಗಿ ಸಮೇತ ಮಂಗಳವಾರ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ ಎಂದು ಸ್ಥಳೀಯ ಎಇಇ ದೊಡ್ಡಮುನಿ ತಿಳಿಸಿದ್ದಾರೆ.
ಒಂದೇ ದಿನ 30ಕ್ಕೂ ಹೆಚ್ಚು ಮರಗಳು ಧರೆಗೆ
ನಗರದಾದ್ಯಂತ 30ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಜೀವನಬಿಮಾನಗರ, ಮಹಾಲಕ್ಷ್ಮೀಪುರ, ರಿಚ್ವುಂಡ್ ವೃತ್ತ, ಲಗ್ಗೆರೆ ರಿಂಗ್ರೋಡ್, ಬಾಣಸವಾಡಿ, ಇಂದಿರಾನಗರ, ಜೆ.ಪಿ.ನಗರ, ಚಿನ್ನಸ್ವಾಮಿ ಕ್ರೀಡಾಂಗಣ, ಇಟ್ಟಮಡು, ಭೈರಸಂದ್ರ, ಹಳೆಯ ವಿಮಾನ ನಿಲ್ದಾಣ ರಸ್ತೆ, ಎಚ್ಎಸ್ಆರ್ ಲೇಔಟ್, ಕೆಂಪೇಗೌಡನಗರ, ದೊಮ್ಮಲೂರು, ಪ್ರೇಮ್ಗರಗಳಲ್ಲಿ ತಲಾ 1 ಮರ, ಕೋರಮಂಗಲ, ಜಯನಗರದಲ್ಲಿ ತಲಾ 4 ಹಾಗೂ ವಿಜಯನಗರದಲ್ಲಿ 2 ಮರಗಳು ಬಿದ್ದಿವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ಪಾಲಿಕೆ ಅರಣ್ಯ ವಿಭಾಗದ ಸಿಬ್ಬಂದಿ ಮರ ತೆರವಿಗೆ ಹರಸಾಹಸಪಟ್ಟರು.
Comments are closed.