ಕರ್ನಾಟಕ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನಗರದ ಮೊದಲ ಕ್ಯಾಬ್ ಚಾಲಕಿ

Pinterest LinkedIn Tumblr

suicide_hanging_youth

ಬೆಂಗಳೂರು: ಸಿಲಿಕಾನ್ ಸಿಟಿ ಮೊದಲ ಮಹಿಳಾ ಕ್ಯಾಬ್ ಚಾಲಕಿ ಎಂದೇ ಖ್ಯಾತಿ ಪಡೆದಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಶರಣಾಗಿರುವ ಘಟನೆ ಬಳ್ಳಾರಿ ರಸ್ತೆಯ ನಾಗಶೆಟ್ಟಿಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಭಾರತಿ (39) ಆತ್ಮಹತ್ಯೆ ಶರಣಾದ ನಗರದ ಮೊದಲ ಮಹಿಳಾ ಕ್ಯಾಬ್ ಚಾಲಕಿ. ಆಂಧ್ರಪ್ರದೇಶದ ಮೂಲದವರಾಗಿರುವ ಭಾರತಿಯವರು ಕಳೆದ 10 ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು. ಜೀವನಾಧಾರಕ್ಕಾಗಿ ಕ್ಯಾಬ್ ಚಾಲನೆಯನ್ನು ವೃತ್ತಿಪರವಾಗಿ ತೆಗೆದುಕೊಂಡಿದ್ದರು.

ನಗರದಲ್ಲಿ ಉಬರ್ ಸಂಸ್ಥೆಯವರು ಆ್ಯಪ್ ಆಧಾರಿತ ಕ್ಯಾಬ್ ಸೇವೆ ಆರಂಭಿಸಿದಾಗ ಮೊದಲ ಮಹಿಳಾ ಚಾಲಕಿಯಾಗಿ ಭಾರತಿ ಕೆಲಸಕ್ಕೆ ಸೇರಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ಭಾರತಿ ಅವರು ಸೋಮವಾರ ರಾತ್ರಿ ತಮ್ಮ ಮನೆಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.

ನೆರೆಮನೆಯವರು ರಾತ್ರಿ 8.30ರ ಸುಮಾರಿಗೆ ಮನೆಗೆ ಹೋಗಾದ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭಾರತಿ ಅವರ ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಭಾರತಿ ಅವರ ಆತ್ಮಹತ್ಯೆಗೆ ಪ್ರಮುಖ ಕಾರಣ ಈ ವರೆಗೂ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.