
ಬೆಂಗಳೂರು: ಮಗನೇ ತಂದೆಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೋರಮಂಗಲ 4ನೇ ಹಂತದ 3ನೇ ಕ್ರಾಸ್‌ನ ಶ್ರೀನಿವಾಗಿಲು ಗ್ರಾಮದ ನಿವಾಸಿ ನಿವೃತ್ತ ಯೋಧ ಗೌತಮ್ ಅಲಿಯಾಸ್ ಗೌತಮಯ್ಯ(72) ಕೊಲೆಯಾದ ದುರ್ದೈವಿ. ಎಂಇಜಿ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಅರ್ಧಕ್ಕೆ ಬಿಟ್ಟು ಬಂದು ಶ್ರೀನಿವಾಗಿಲು ಗ್ರಾಮದಲ್ಲಿ ತಮ್ಮ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಾಸವಾಗಿದ್ದರು.
ನಿನ್ನೆ ಮೊದಲ ಮಗ ಹಾಗೂ 3ನೇ ಮಗನೊಂದಿಗೆ ತಾಯಿ ಸಂಬಂಧಿಕರ ಮದುವೆಗೆ ಹೋಗಿದ್ದರು. ಈ ವೇಳೆ ಗೌತಮ್ ಮನೆಯಲ್ಲಿ ಒಬ್ಬರೇ ಇದ್ದಾಗ ಹೊರಗೆ ಹೋಗಿದ್ದ 2ನೇ ಮಗ ಕಿರಣ್‌ಕುಮಾರ್ ಮನೆಗೆ ಬಂದ. ನಂತರ ತಂದೆ ಜೊತೆ ವಿನಾಕಾರಣ ಜಗಳ ತೆಗೆದು ನನಗೆ ಮಾಟ ಮಾಡಿಸುತ್ತೀಯಾ ಎಂದು ಅವರ ಮೇಲೆ ಕಿಡಿಕಾರಿದ್ದಾನೆ. ತಕ್ಷಣ ಗೌತಮ್ ಅವರು ಪತ್ನಿಗೆ ಮೊಬೈಲ್‌ಗೆ ಕರೆ ಮಾಡಿ ಕಿರಣ್ ನನ್ನ ಜೊತೆ ಜಗಳವಾಡುತ್ತಿದ್ದಾನೆ ಮನೆಗೆ ಬೇಗ ಬನ್ನಿ ಎಂದು ತಿಳಿಸಿದ್ದಾರೆ.
ಈ ನಡುವೆ ತಂದೆ-ಮಗನ ಮಧ್ಯೆ ಜಗಳ ತಾರಕಕ್ಕೇರಿದಾಗ ಕಿರಣ್‌ಕುಮಾರ್ ಮನೆಯಲ್ಲಿದ್ದ ಮಾಂಸ ಕತ್ತರಿಸುವ ಮಚ್ಚಿನಿಂದ ತಲೆಗೆ ಹೊಡೆದು, ಕುತ್ತಿಗೆ ಕೊಯ್ದು ಪರಾರಿಯಾಗಿದ್ದನು. ಇವರ ಮನೆಯಿಂದ ಚೀರಾಟ ಕೇಳಿ ನೆರೆಹೊರೆಯವರು ಬರುವಷ್ಟರಲ್ಲಿ ಗೌತಮ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಅಷ್ಟರಲ್ಲಿ ಮದುವೆಗೆ ಹೋಗಿದ್ದ ಪತ್ನಿ ಹಾಗೂ ಇಬ್ಬರು ಮಕ್ಕಳು ಮನೆಗೆ ವಾಪಸ್ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೋರಿಂಗ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಕಿರಣ್‌ಕುಮಾರ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Comments are closed.