ಕರ್ನಾಟಕ

ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅಯ್ಕೆಯಾದ ಮೊದಲ ಭಾರತೀಯ “ಮಹಿಳಾ ಸ್ಟ್ರಿಂಟರ್” ದುತೀ ಚಾಂದ್

Pinterest LinkedIn Tumblr

Dutee-Chand_reyo-olipic

ನವದೆಹಲಿ, ಜೂ.27:  ಹಲವು ಸವಾಲುಗಳ ನಡುವೆಯೂ ಧೃತಿಗೆಡದೆ ತನ್ನ ಪ್ರಯತ್ನವನ್ನು ಮುಂದುವರೆಸಿದ್ದ ಒಡಿಶಾ ಮೂಲದ ಓಟಗಾರ್ತಿ ದುತೀ ಚಾಂದ್ ಕಡೆಗೂ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಗಳಿಸಿದ್ದಾರೆ.

ಕಜಾಕಿಸ್ತಾನದ ಅಲ್ಮಾಟಿಯಲ್ಲಿ ನಡೆದ 26ನೇ ಜಿ. ಕೊಸಾನೊವ್ ಸ್ಮಾರಕ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯನ್ನು 11.30 ಸೆ.ಗಳಲ್ಲಿ ಕ್ರಮಿಸಿದ ದುತೀ ಚಾಂದ್ ರಿಯೋ ಕೂಟಕ್ಕೆ ನಿಗದಿಗೊಳಿಸಿದ್ದ 11.32 ಸೆಕೆಂಡ್’ಗಳ ಕಾಲಮಿತಿಯನ್ನು ಮೆಟ್ಟಿನಿಂತರು. ಇದರೊಂದಿಗೆ ದುತೀ ಬರೋಬ್ಬರಿ 36 ವರ್ಷಗಳ ನಂತರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಸ್ಟ್ರಿಂಟರ್ ಎನಿಸಿಕೊಂಡರು.

ಮಾಜಿ ಅಥ್ಲೀಟ್ ಪಿ.ಟಿ. ಉಷಾ 1980ರ ಮಾಸ್ಕೋ ಒಲಿಂಪಿಕ್ಸ್ ಕೂಟದಲ್ಲಿ ಮಹಿಳೆಯರ 100 ಮೀ. ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಂದ ಹಾಗೆ ಏಪ್ರಿಲ್ನಲ್ಲಿ ನಡೆದಿದ್ದ ರಿಯೋ ಕೂಟಕ್ಕಾಗಿನ ಫೆಡರೇಷನ್ ಕಪ್ ಸ್ಪರ್ಧಾವಳಿಯಲ್ಲಿ ಕೇವಲ 0.01 ಸೆಕೆಂಡ್’ನಿಂದ ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಗಿದ್ದ ದುತೀ, ತನಗೆ ಸರ್ಕಾರ ವಿದೇಶದಲ್ಲಿ ಇನ್ನೂ ಹೆಚ್ಚಿನ ತರಬೇತಿಗೆ ಅವಕಾಶ ಮಾಡಿಕೊಡಲಿಲ್ಲ ಎಂದು ದೂರಿದ್ದರು.

”ರಿಯೋ ಕೂಟಕ್ಕೆ ಅರ್ಹತೆ ಗಳಿಸುವಂತೆ ನನಗಾಗಿ ದೇವರಲ್ಲಿ ಮೊರೆಯಿಟ್ಟ ಭಾರತದ ಎಲ್ಲಾ ಜನತೆಗೂ ನಾನು ಕೃತಜ್ಞಳಾಗಿದ್ದೇನೆ. ‘ನಿಮ್ಮ ಹಾರೈಕೆ ಇಂಥದ್ದೊಂದು ಸಾಧನೆಗೆ ನೆರವಾಗಿದೆ’ ಎಂದಿರುವ ದುತೀ, ಪುಲ್ಲೇಲ ಗೋಪಿಚಂದ್ ಅಕಾಡೆಮಿ ಮತ್ತು ಕೆಐಐಟಿ ವಿವಿ ನೀಡಿದ ಎಲ್ಲ ಬಗೆಯ ಬೆಂಬಲವನ್ನೂ ಈ ಸಂದರ್ಭದಲ್ಲಿ ವಿನಮ್ರತೆಯಿಂದ ಸ್ಮರಿಸ ಬಯಸುತ್ತೇನೆ” ಎಂದೂ ತಿಳಿಸಿದ್ದಾರೆ.

ಏತನ್ಮಧ್ಯೆ ದುತೀ ಚಾಂದ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವುದರೊಂದಿಗೆ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಪ್ರತಿನಿಧಿಸಲಿರುವ ಭಾರತದ ಕ್ರೀಡಾಪಟುಗಳ ಸಂಖ್ಯೆ 99ಕ್ಕೆ ಏರಿದಂತಾಗಿದೆ. ಒಲಿಂಪಿಕ್ಸ್ ಚರಿತ್ರೆಯಲ್ಲಿ ಮೊಟ್ಟಮೊದಲ ಬಾರಿಗೆ ಭಾರತದಿಂದ ಗರಿಷ್ಠ ಮಟ್ಟದ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ.

Comments are closed.