ಕರ್ನಾಟಕ

ಮೈಸೂರು ಮಹಾರಾಜನ ವಿವಾಹ ಶಾಸ್ತ್ರಗಳ ಹಾಗೂ ಭೋಜನೆಗಳ ವಿಶೇಷತೆಯ ವಿವರ

Pinterest LinkedIn Tumblr

mysore_king_marrig

ಮೈಸೂರು, ಜೂ.27 :  ಮೈಸೂರು ಮಹಾರಾಜ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಸಿಂಗ್ ಅವರ ಇ0ದು ವಿವಾಹವೂ ಅರಮನೆಯ ಕಲ್ಯಾಣ ಮಂಟಪದಲ್ಲಿ 9.05ರಿಂದ 9.30ರವರೆಗೆ ಕರ್ಕಾಟಕ ಲಗ್ನ ಸಾವಿತ್ರಿ ಮಹೂರ್ತದಲ್ಲಿ ನಡೆಯಲಿದೆ.

ಸಂಜೆ ಉರುತೆನೆ ಉಯ್ಯಾಲೆ ಶಾಸ್ತ್ರ ನಡೆಯಲಿದ್ದು, ಸಂಜೆ ನಾಗವಲ್ಲಿ ಶಾಸ್ತ್ರ ಸಹ ನಡೆಯಲಿದೆ. ಇಲ್ಲಿ ತ್ರಿಷಿಕಾ ಕುಮಾರಿ ಸಿಂಗ್ಗೆ ಎರಡನೇ ತಾಳಿಧಾರಣೆ ನಡೆಯುತ್ತದೆ. ಇದು ಒಡೆಯರ್ ಕುಟುಂಬದಲ್ಲಿ ಇರುವ ವಿಶಿಷ್ಟ ಆಚರಣೆಯಾಗಿದ್ದು, ಮದುವೆಯಾದ ತ್ರಿಷಿಕಾ ಕುಮಾರಿಗೆ ಯದುವೀರ್ ಬೆಳಗ್ಗೆ ಒಂದು ತಾಳಿ ಧಾರಣೆ ಮಾಡಿದರೆ, ಸಂಜೆ ನಾಗವಲ್ಲಿ ಶಾಸ್ತ್ರದ ಮೂಲಕ ಮತ್ತೊಂದು ದೇವರ ತಾಳಿ ಧಾರಣೆ ಮಾಡುವ ಮೂಲಕ ಎರಡೆರಡು ತಾಳಿ ಧಾರಣೆ ಸಂಪ್ರದಾಯ ಜಾರಿಯಲ್ಲಿದೆ.

ಆರತಕ್ಷತೆ : ಜೂ.28ರಂದು ಅರಮನೆಯ ದರ್ಬಾರ್ ಹಾಲ್ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂ.29ರಂದು ಸಾರ್ವಜನಿಕರ ದರ್ಶನಕ್ಕೆ ಆರತಕ್ಷತೆ ಕಾರ್ಯಕ್ರಮವಿದ್ದು, ಯದುವೀರ್ ಕಾರಿನಲ್ಲಿ ಅರಮನೆಯ ಸುತ್ತ ಒಂದು ಸುತ್ತು ಹಾಕಿಸಲಿದ್ದಾರೆ. ಜು.2ರಂದು ಬೆಂಗಳೂರು ಅರಮನೆಯಲ್ಲಿ ಆರತಕ್ಷತೆ ನಡೆಯಲಿದೆ.

ರಾಜಮಾತೆಯೇ ಡಿಸೈನ್ ಮಾಡಿದ ಧಿರಿಸು: ವಿವಾಹದ ಐದೂ ದಿನಗಳು ಹಿಂದಿನ ಮಹಾರಾಜರು ಧರಿಸುತ್ತಿದ್ದ ಅಂಗರಕ (ಲಾಂಗ್ಕೋಟ್) ವನ್ನು ಯದುವೀರ್ ಧರಿಸಲಿದ್ದು, ಸ್ವತಃ ಫ್ಯಾಷನ್ ಡಿಸೈನರ್ ಆಗಿರುವ ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ಸಿದ್ಧವಾಗಿವೆ. ಯದುವೀರ್ಗೆ ಈ ಕೋಟ್ ತುಂಬ ಇಷ್ಟವಾಗಿದೆ ಎನ್ನಲಾಗಿದೆ. ಧಾರೆ ದಿನ ವಿಶೇಷವಾಗಿ ಸಿದ್ಧವಾಗಿರುವ ಈ ಅಂಗರಕ ಲಾಂಗ್ಕೋಟ್ ಧರಿಸಲಿದ್ದಾರೆ.

ಆರು ದಿನ ಭೂರಿ ಭೋಜನ: ಪ್ರತಿದಿನ ಎರಡು ಸಿಹಿ ಪಾಯಸ, ಎರಡು ತರಹದ ಪಲ್ಯ, ರಸಂ, ಸಾಂಬಾರ್ ಸೇರಿದಂತೆ ವಿಶೇಷ ಭೋಜನಗಳ ಮೆನ್ಯೂ ಸಿದ್ಧವಾಗಿದೆ. ಬಂದ ಎಲ್ಲರಿಗೂ ವಿಶಾಲವಾದ ರಾಜಸ್ಥಾನ ಶೈಲಿಯ ವಾಟರ್ ಪ್ರೂಫ್ ಶಾಮಿಯಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಭರ್ಜರಿ ಭೋಜನೆಯ ವಿವರ:
ಮೈಸೂರು ಮಹಾರಾಜರ ಮದುವೆಯಂದ ಮೇಲೆ ಭೋಜನವು ರಾಯಲ್ ಆಗಿಯೇ ಇರಬೇಕು, ಹೊಸ ರುಚಿಗೆ ಫೇಮಸ್ ಆದ ಮತ್ತು ಹಲವು ಹೊಸ ಖಾದ್ಯಗಳ ಪರಿಚಯಕ್ಕೆ ಕಾರಣವಾದ ಮೈಸೂರು ಅರಮನೆಯಲ್ಲಿ ಮಹಾರಾಜರ ಮದುವೆಯ ಸಡಗರದೊಂದಿಗೆ ರಾಯಲ್ ಭೋಜನದ ಪರಿವಳವು ಹರಿದಾಡುತ್ತಿದೆ.

ಮಧ್ಯಾಹ್ನ 12.30ಕ್ಕೆ ಭೋಜನ ವ್ಯವಸ್ಥೆ ಮಾಡಲಾಗಿದ್ದು, ಸೋಮವಾರ ಬೆಳಿಗ್ಗೆ 9.35ಕ್ಕೆ ಮುಹೂರ್ತ ಮುಗಿಯಲಿದ್ದು, ಬೆಳಿಗ್ಗೆ ಸುಮಾರು 400 ಮಂದಿಗೆ ಉಪಾಹಾರ ಸಿದ್ಧಪಡಿಸಲಾಗುತ್ತಿದೆ. ಕಾಶಿ ಹಲ್ವಾ, ಉಪ್ಪಿಟ್ಟು, ಚಟ್ನಿ, ತಟ್ಲೆ ಇಡ್ಲಿ, ಈರುಳ್ಳಿ ದೋಸೆ ಬಡಿಸಲಾಗುತ್ತದೆ.

ಮಧ್ಯಾಹ್ನ 12.30ರಿಂದ ಭೋಜನ ಶುರುವಾಗಲಿದೆ. ಭಕ್ಷ್ಯ ಪಟ್ಟಿಯಲ್ಲಿ ದಕ್ಷಿಣ ಭಾರತ ಶೈಲಿಯ ತಿನಿಸುಗಳಿಗೆ ಆದ್ಯತೆ ನೀಡಲಾಗಿದೆ.

ಸುಮಾರು 800 ಮಂದಿಗೆ ಭೋಜನ ಸಿದ್ಧಪಡಿಸಲಾಗುತ್ತಿದೆ. ಹೆಸರುಬೇಳೆ, ಕಡಲೆಬೇಳೆ ಕೋಸುಂಬರಿ, ಶಾವಿಗೆ, ಒಣ ಹಣ್ಣಿನ ಗೊಜ್ಜು, ಮಾವಿನಕಾಯಿ ಚಟ್ನಿ, ಆಲೂಗಡ್ಡೆ ಪಲ್ಯ, ಬೀನ್ಸ್ ಪಲ್ಯ, ಅಂಬೊಡೆ, ಬಾದಾಮಿ ಪಾಯಸ, ಬಿಸಿಬೇಳೆಬಾತ್, ಅಕ್ಕಿ ರೊಟ್ಟಿ, ಚನಾ ಮಸಾಲ, ಅನ್ನ, ಮಜ್ಜಿಗೆ ಬಡಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Comments are closed.