ಮಂಗಳೂರು, ಜೂನ್ 27: ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನದ ಅಭಿವೃದ್ಧಿಗಾಗಿ ಸರ್ಕಾರವು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಯ ರೂಪುರೇಷೆ ತಯಾರಿಸಲು ಪ್ರತ್ಯೇಕವಾದ ಸಮಿತಿಯನ್ನು ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಅನುದಾನವನ್ನು ಬಿಡುಗಡೆ ಮಾಡಿದ್ದು, ಬಾಲವನದಲ್ಲಿರುವ ಕಾರಂತರ ಮನೆಯ ದುರಸ್ತಿಗೂ 29 ಲಕ್ಷ ರೂ. ಬಿಡುಗಡೆಯಾಗಿದೆ.
ಶಿವರಾಮ ಕಾರಂತರ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತದೆ. 1 ಕೋಟಿ ಮೊತ್ತದಲ್ಲಿ ಯಾವ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ತೀರ್ಮಾನಿಸಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಕಾರಂತರ ಮಕ್ಕಳಾದ ಉಲ್ಲಾಸ್ ಕಾರಂತ, ಕ್ಷಮಾ ರಾವ್ ಹಾಗೂ ವಿವೇಕ ರೈ ಅವರಿದ್ದಾರೆ.
ಈ ಸಮಿತಿಯು ಶೀಘ್ರವೇ ಸಭೆ ನಡೆಸಿ ಕಾಮಗಾರಿಯ ಮುಂದಿನ ಸ್ವರೂಪವನ್ನು ನಿರ್ಧರಿಸಲಿದೆ ಎಂದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ. ಶಿವರಾಮ ಕಾರಂತರ ಕರ್ಮಭೂಮಿಯೇ ಬಾಲವನ. ಪುತ್ತೂರಿನ ಕಾರಂತ ಬಾಲವನ ಕಲಾ ಗ್ಯಾಲರಿ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ನಾಟ್ಯ ಶಾಲೆ, ರಂಗ ಮಂದಿರ, ಆಟದ ಮೈದಾನ, ಈಜುಕೊಳವನ್ನು ಮುಂತಾದವುಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.

Comments are closed.