ಹೈದ್ರಾಬಾದ್,ಜೂನ್.20 : ಟಾಲಿವುಡ್‌ನಲ್ಲೊಂದು ಪ್ರೇಮ ಪ್ರಕರಣ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದೊಂದು ರೂಮರ್ ಎನ್ನುವಂತೆ ಬೆಂಗಳೂರಿನಲ್ಲಿರುವ ಗಾಂಧಿನಗರದಂತೆ ಹೈದರಬಾದ್ನಲ್ಲಿರುವ ಕೃಷ್ಣಾನಗರ್‌ನಲ್ಲಿ ಹರಿದಾಡುತ್ತಿದ್ದರೂ ಇತ್ತೀಚೆಗಷ್ಟೆ ಇದು ನಿಜ ಆಗುವ ಬೆಳವಣಿಗೆಗಳು ನಡೆದಿವೆಯಂತೆ.
ಹೌದು, ಈ ಅಂತೆ ಕಂತೆಗಳನ್ನು ಪುಷ್ಟೀಕರಿಸುವಂತೆ ಆ ಹೀರೋ ತಾಯಿಯೇ ಆ ನಾಯಕಿ ಮನೆಗೆ ಹೋಗಿ ಬಂದಿದ್ದಾರಂತೆ. ಅಂದಹಾಗೆ ಆ ಹೀರೋ ನಾಗಚೈತನ್ಯ. ಆ ನಾಯಕಿ ಸಮಂತಾ. ಚೆನ್ನೈನಲ್ಲಿರುವ ಸಮಂತಾಳ ಮನೆಗೆ ಹೋಗಿದ್ದು ನಟ ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ. ಹಾಗೆ ನೋಡಿದರೆ ನಾಗಚೈತನ್ಯ ಪ್ರೇಮಕತೆಗೆ ತಮ್ಮ ತಂದೆ ನಾಗಾರ್ಜುನಾ ಅವರೇ ವಿಲನ್ ಆಗುತ್ತಾರೆಂಬ ಸೂಚನೆಗಳನ್ನು ಮೊದಲೇ ತಿಳಿದ ನಾಗ್, ತಮ್ಮ ಪ್ರೀತಿಗೆ ತಾಯಿಯನ್ನು ರಾಯಬಾರಿಯನ್ನಾಗಿ ಮಾಡಿಕೊಂಡಿದ್ದಾರಂತೆ.
ಈ ನಿಟ್ಟಿನಲ್ಲಿ ಲಕ್ಷ್ಮಿ ದಗ್ಗುಬಾಟಿ ಅವರನ್ನು ಚೆನ್ನೈನಲ್ಲಿರುವ ಸಮಂತಾ ಅವರ ಮನೆಗೆ ಕಳುಹಿಸಿದ್ದು, ಒಂದು ದಿನಾ ಪೂರ್ತಿ ಲಕ್ಷ್ಮಿ ದಗ್ಗುಬಾಟಿ ಸಮಂತಾ ಮನೆಯಲ್ಲಿ ಕಾಲ ಕಳೆದಿದ್ದಾರೆ.
ಸಮಂತಾಳನ್ನು ಭೇಟಿ ಮಾಡಿದ ನಂತರ ‘ನಾಗಚೈತನ್ಯ ಹಾಗೂ ಸಮಂತಾ ಇಬ್ಬರು ಮದುವೆ ಆಗುವುದಕ್ಕೆ ನನಗೆ ಯಾವ ಅಭ್ಯಂತರವೂ ಇಲ್ಲ’ ಎಂದು ಲಕ್ಷ್ಮಿ ದಗ್ಗುಬಾಟಿ ಹೇಳಿರುವುದು ಟಾಲಿವುಡ್ನ ಹಾಟ್ ಟಾಪಿಕ್ ಆಗಿದೆ. ಆದರೆ, ಲಕ್ಷ್ಮಿ ದಗ್ಗುಬಾಟಿಯಿಂದ ದೂರವಾಗಿ ಅಮಲಾ ಜತೆಗೆ ಸಂಸಾರ ನಡೆಸುತ್ತಿರುವ ನಾಗಾರ್ಜುನಾ, ಮೊದಲ ಪತ್ನಿ ಲಕ್ಷ್ಮಿ ದಗ್ಗುಬಾಟಿಯ ಮಾತಿಗೆ ಬೆಲೆ ಕೊಟ್ಟು ಮಗನ ಪ್ರೀತಿಯನ್ನು ಮದುವೆ ತನಕ ಕರೆದುಕೊಂಡು ಹೋಗುತ್ತಾರೆಯೇ? ಎನ್ನುವ ಭವಿಷ್ಯದ ಪ್ರಶ್ನೆಗೆ ಕೃಷ್ಣಾನಗರದಲ್ಲೂ ಉತ್ತರ ಸಿಗುತ್ತಿಲ್ಲ. ಆದರೆ, ಇದು ನಿಜ ಅಂತ ಹೇಳಬೇಕಾದ ಸಮಂತಾ ಮಾತ್ರ ‘ನೋ ಕಾಮೆಂಟ್ಸ್’ ಅನ್ನುತ್ತಿದ್ದಾರೆ.

Comments are closed.