ಬೆಂಗಳೂರು: ಈ ನಗರ ಅತಿ ವೇಗದಲ್ಲಿ ಬೆಳೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸುತ್ತಿದೆ. ನಗರದ ಅಭಿವೃದ್ಧಿಗೆ ಉದ್ದಿಮೆಗಳೂ ತಮ್ಮದೇ ಕೊಡುಗೆ ನೀಡಿವೆ. ಗಲ್ಲಿಗಲ್ಲಿಗೂ ನಿತ್ಯೂ ಒಂದೊಂದು ಉದ್ಯಮಗಳು ಆರಂಭವಾಗುತ್ತಿವೆ. ಆದರೆ, ಹೀಗೆ ಆರಂಭವಾಗುತ್ತಿರುವ ಉದ್ದಿಮೆಗಳಲ್ಲಿ ಎಷ್ಟು ಉದ್ದಿಮೆಗಳು ಬಿಬಿಎಂಪಿಯ ಪರವಾನಗಿ ಪಡೆದಿವೆ? ಹೌದು ಇಂಥ ಪ್ರಶ್ನೆ ಉದ್ಭವವಾಗಲು ಕಾರಣವಿದೆ. ನಗರದಲ್ಲಿ ಪರವಾನಗಿ ಪಡೆದಿರುವ ಉದ್ದಿಮೆಗಳ ಸಂಖ್ಯೆ ಕೇವಲ 42 ಸಾವಿರ ಮಾತ್ರ! ಆದರೆ, ನಿಜವಾಗಿಯೂ ನಗರದಲ್ಲಿ ಅಸ್ತಿತ್ವದಲ್ಲಿರುವ ಉದ್ದಿಮೆಗಳ ಸಂಖ್ಯೆ ಬರೋಬ್ಬರಿ 4.50 ಲಕ್ಷ!
ಇದು ಆಶ್ಚರ್ಯವಾದರೂ ಸತ್ಯ. ಬಿಬಿಎಂಪಿ ದಾಖಲೆಗಳ ಪ್ರಕಾರ 42 ಸಾವಿರ ಉದ್ದಿಮೆಗಳು ಮಾತ್ರ ಪರವಾನಗಿ ಪಡೆದಿವೆ. ಆದರೆ, ಬೆಸ್ಕಾಂ, ಜಲಮಂಡಳಿಗಳ ದಾಖಲೆಗಳು ಹೇಳುವ ಪ್ರಕಾರ ೪.೫೦ ಲಕ್ಷ ಉದ್ದಿಮೆಗಳು ನಗರದಲ್ಲಿವೆ.
ನಗರದ ವ್ಯಾಪ್ತಿಯಲ್ಲಿರುವ ಲಕ್ಷಾಂತರ ಉದ್ದಿಮೆಗಳಿಗೆ ಟ್ರೇಡ್ ಲೈಸೆನ್ಸ್ (ವ್ಯಾಪಾರ ಪರವಾನಗಿ) ನೀಡಲು ಬಿಬಿಎಂಪಿ ವಿಫಲವಾಗಿರುವುದು ಇದರಿಂದ ತಿಳಿಯುತ್ತಿದೆ. ಈವರೆಗೆ ಆಸ್ತಿ ತೆರಿಗೆ ಸಂಗ್ರಹ ಮಾಡಲು ಹಿಂದೇಟು ಹಾಕುತ್ತಿದ್ದ ಪಾಲಿಕೆ ಅಧಿಕಾರಿಗಳು ವ್ಯಾಪಾರ ಪರವಾನಗಿ ನೀಡವಲ್ಲಿಯೂ ಅಲಕ್ಷ್ಯ ತೋರಿದ್ದಾರೆ. ಪರವಾನಗಿ ಪಡೆಯದ ಈ ಉದ್ದಿಮೆಗಳಿಂದ ಪಾಲಿಕೆಗೆ ಅಪಾರ ಪ್ರಮಾಣದ ತೆರಿಗೆ , ಆಧಾಯ ಸೋರಿಕೆಯಾಗುತ್ತಿದೆ.
ನಗರದಲ್ಲಿ ಯಾವುದೇ ವ್ಯಾಪಾರ, ವ್ಯವಹಾರ ನಡೆಸುವವರು ಪಾಲಿಕೆಯಿಂದ ಕಡ್ಡಾಯವಾಗಿ ಉದ್ದಿಮೆ ಪರವಾನಗಿ ಪಡೆಯಬೇಕು. ಆದರೆ ನಗರದಲ್ಲಿನ ಲಕ್ಷಾಂತರ ಉದ್ದಿಮೆಗಳು ಇಂದಿಗೂ ಪರವಾನಗಿ ಪಡೆದಿಲ್ಲ. ಹೋಟೆಲ್, ಸಣ್ಣ ಕಾರ್ಖಾನೆ, ಮನರಂಜನಾ ತಾಣಗಳು ಸೇರಿದಂತೆ ವಾಣಿಜ್ಯ ವ್ಯವಹಾರ ನಡೆಸುವ ಸಣ್ಣ-ದೊಡ್ಡ ಉದ್ದಿಮೆಗಳ ಸಂಖ್ಯೆ ಏರುತ್ತಲೇ ಇದೆ. ಆದರೆ ಬಿಬಿಎಂಪಿಗೆ ಪರವಾನಗಿ ನೀಡಿ ತೆರಿಗೆ ವಸೂಲಿ ಮಾಡುವ ಕಾರ್ಯಕ್ಕೆ ಮಾತ್ರ ಮುಂದಾಗಿಲ್ಲ.
ವರ್ಷಕ್ಕೆ ಸರಾಸರಿ 3 ಸಾವಿರ ಮಾತ್ರ: ನಗರದಲ್ಲಿ ಪ್ರತಿವರ್ಷ ಸಾವಿರಾರು ಉದ್ದಿಮೆಗಳು ಆರಂಭವಾಗುತ್ತಿವೆಯಾದರೂ ಪಾಲಿಕೆಯಿಂದ ಪರವಾನಗಿ ಪಡೆಯುತ್ತಿರುವುದು ಸರಾಸರಿ 3 ಸಾವಿರ ಉದ್ದಿಮೆಗಳು ಮಾತ್ರ. ಇದರಿಂದ ಪಾಲಿಕೆಗೆ ವ್ಯಾಪಾರ ಪರವಾನಗಿಯಿಂದ ವಾರ್ಷಿಕ ಸಂಗ್ರಹವಾಗುತ್ತಿರುವ ಆದಾಯ ₹20 ಕೋಟಿ ಮಾತ್ರ.

Comments are closed.