ne
ತೀರ್ಥಹಳ್ಳಿ: ರಾಜ್ಯ ಸಚಿವ ಸಂಪುಟ ಪುನರ್ರಚನೆ ಪ್ರಕ್ರಿಯೆ ನಡುವೆಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಶನಿವಾರ ಸರ್ಕಾರಿ ವಾಹನ, ಬೆಂಗಾವಲು ಪಡೆ ಸಿಬ್ಬಂದಿ ವಾಪಸು ಕಳುಹಿಸಿ ಸ್ವಗ್ರಾಮವಾದ ತಾಲ್ಲೂಕಿನ ಕಿಮ್ಮನೆಗೆ ತೆರಳಿದರು.
ತೀರ್ಥಹಳ್ಳಿಗೆ ಬೆಳಿಗ್ಗೆ 11 ಗಂಟೆಗೆ ಬಂದ ರತ್ನಾಕರ ನಂತರ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದರು. ಮಧ್ಯಾಹ್ನದ ಹೊತ್ತಿಗೆ ಸರ್ಕಾರಿ ವಾಹನ ಹಾಗೂ ಬೆಂಗಾವಲು ಪಡೆಯನ್ನು ವಾಪಸ್ ಹೋಗುವಂತೆ ಸೂಚಿಸಿದರು. ನಂತರ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ಕಿಮ್ಮನೆ ಅವರು, ‘ಈಗ ಬೆಂಗಾವಲಿನ ಅಗತ್ಯವಿಲ್ಲ. ಇಷ್ಟು ದಿನ ತಮ್ಮೊಂದಿಗೆ ಕರ್ತವ್ಯ ನಿರ್ವಹಿಸಿದ್ದಕ್ಕೆ ಕೃತಜ್ಞತೆ’ ಎಂದು ಹೇಳಿ ಖಾಸಗಿ ವಾಹನದಲ್ಲಿ ತೆರಳಿದರು.
‘ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದರೆ ಅದನ್ನು ವಿರೋಧಿಸಲು ನಾನ್ಯಾರು? ಕಾಗೋಡು ತಿಮ್ಮಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಅದಕ್ಕಿಂತ ಸಂತೋಷ ಬೇರೊಂದಿಲ್ಲ’ ಎಂದರು.
ಅಧಿಕಾರ ಉಳಿಸಿಕೊಳ್ಳಲುಶಕ್ತನೂ ಅಲ್ಲ, ಆಸಕ್ತನೂ ಅಲ್ಲ! : ರಾಜ್ಯ ಸಚಿವ ಸಂಪುಟ ಪುನರ್ ರಚನೆ, ವಿಸ್ತರಣೆ ಕುರಿತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬಿಚ್ಚು ನುಡಿಗಳನ್ನು ಕಿಮ್ಮನೆ ಹಂಚಿಕೊಂಡಿದ್ದಾರೆ.
‘ಯೌವನದ ದಿನಗಳಿಂದ ನಾನು ಸಾರ್ವಜನಿಕ ಜೀವನದಲ್ಲಿ ಇದ್ದೆ. ವಕೀಲಿ ಕೆಲಸ ಮಾಡುತ್ತಿದ್ದಾಗಲೂ ಆ ವೃತ್ತಿಯನ್ನು ಲಾಭದಾಯಕ ಎಂದು ಪರಿಗಣಿಸಿಲ್ಲ ಎಂದು ಸಹೋದ್ಯೋಗಿಗಳು, ಸ್ನೇಹಿತರು ಸ್ನೇಹದಿಂದ ಗದರಿಸಿದ್ದರು. ಹೋರಾಟದಿಂದ ರಾಜಕಾರಣ ಮಾಡಿದೆ. ರಾಜಕಾರಣದಲ್ಲಿದ್ದು ಹೋರಾಟ ಮಾಡಿದ್ದೆ. ಅಧಿಕಾರಕ್ಕೆ ಪಕ್ಷಾತೀತವಾಗಿ ನ್ಯಾಯ ಒದಗಿಸಲು ಪ್ರಯತ್ನ ಮಾಡಿದ್ದೇನೆ.
ವಿರೋಧಿ ಮಿತ್ರರು ನನ್ನನ್ನು ಇನ್‌ಶರ್ಟ್, ವೈಟ್ ಕಾಲರ್ ರಾಜಕಾರಣಿ ಎಂದು ರಾಜಕೀಯವಾಗಿ ಗದರಿದ್ದರು. ಹೋರಾಟ ಮಾಡಿ ಗೆದ್ದೆ. ಗೆದ್ದು ಹೋರಾಟ ಮಾಡಿದೆ. ಯಾರ ಕೈಯಲ್ಲೂ ಹೇಳಿಸದೇ ಲಾಬಿ ಮಾಡದೇ ಅಧಿಕಾರ ಬಂದಿತು. ಲಾಬಿಯಿಂದ ಅಧಿಕಾರ ಉಳಿಸಿಕೊಳ್ಳಲು ನಾನು ಶಕ್ತನೂ ಅಲ್ಲ, ಆಸಕ್ತನೂ ಅಲ್ಲ. ನಾನು ಶಿಸ್ತಿನ ಕಾರ್ಯಕರ್ತ. ನೀಡಿದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಸ್ಥಾನಮಾನಗಳು ಗೂಟದ ಕಾರಿನಲ್ಲಿ ಇದೆ ಎಂಬ ನಂಬಿಕೆ ಇಲ್ಲ’ ಎಂದು ಬರೆದುಕೊಂಡಿದ್ದಾರೆ.
Comments are closed.