ಕರ್ನಾಟಕ

ಇಂಗ್ಲಿಷ್ ಏಕಾಧಿಪತ್ಯಕ್ಕೆ ಸಂಸ್ಕೃತ ಅಂಕುಶ

Pinterest LinkedIn Tumblr

englishಬೆಂಗಳೂರು, ಜೂ.೧೬: ಸಂಸ್ಕೃತದಲ್ಲಿ ಅಪಾರ ಜ್ಞಾನ ಭಂಡಾರವಿದ್ದು, ಇಂಗ್ಲಿಷ್ ಭಾಷೆಯ ಏಕಾಧಿಪತ್ಯ ಕೊನೆಗೊಳಿಸಲು ದೇಶೀಯ ಮೂಲವಾದ ಸಂಸ್ಕೃತ ಭಾಷೆಯ ಸಹಾಯ ಪಡೆಯುವುದು ಅಗತ್ಯವಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
ನಗರದಲ್ಲಿಂದು ನಡೆದ ಕರ್ನಾಟಕ ಸಂಸ್ಕೃತ ವಿಙಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಹಾಗೂ ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೦ ವರ್ಷಗಳ ಹಿಂದೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಕನ್ನಡ ಚಳವಳಿಗಾರರು, ಬುದ್ಧಿಜೀವಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ ಮೊದಲ ಕುಲಪತಿ ಮಲ್ಲೇಪುರ ಜಿ.ವೆಂಕಟೇಶ್ ಅವರು ಅಧಿಕಾರ ಸ್ವೀಕರಿಸಿದಾಗ ನಮ್ಮ ಆತಂಕ ದೂರವಾಗಿತ್ತು ಎಂದು ಹೇಳಿದರು.
ವಿದ್ವಾಂಸ ಭಾಷೆಯಾದ ಸಂಸ್ಕೃತ ಸಾಮಾನ್ಯ ಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಬೇಕು. ಸಂಸ್ಕೃತವನ್ನು ಒಂದು ಜಾತಿಯ ಭಾಷೆಯಾಗಿ ನೋಡಲಾಗುತ್ತದೆ. ಆದರೆ ಬ್ರಾಹ್ಮಣರನ್ನ ಹೊರತುಪಡಿಸಿ ಇತರರಿಗೆ ಕಲಿಯಲು ಸಾಧ್ಯವಿರಲಿಲ್ಲ. ಮಾತ್ರವಲ್ಲ ಬ್ರಾಹ್ಮಣರ ಮಹಿಳೆಯರಿಗೂ ಕಲಿಯಲು ಸಾಧ್ಯವಿರಲಿಲ್ಲ. ಯಾವುದೇ ಒಂದು ಭಾಷೆ ಬಳಸಲು ಮತ್ತು ಬೆಳೆಸಲು ಸಾಧ್ಯವಿಲ್ಲದಾಗ ಅದು ಬಹಳ ಕಾಲ ಉಳಿಯಲಾರದು. ಬಳಕೆಯಿಲ್ಲದ ಭಾಷೆ ಕ್ರಮೇಣ ನೇಪಥ್ಯಕ್ಕೆ ಸರಿಯುತ್ತದೆ. ಈ ಸಮಸ್ಯೆಯನ್ನು ಸಂಸ್ಕೃತ ಕೂಡ ಅನುಭವಿಸಿದೆ. ಮುಂದಿನ ೫೦ ವರ್ಷಗಳ ನಂತರ ಕನ್ನಡ ಭಾಷೆಯೂ ಈ ಸಮಸ್ಯೆ ಅನುಭವಿಸಿದರೆ ಅಚ್ಚರಿಪಡಬೇಕಿಲ್ಲ ಎಂದು ಹೇಳಿದರು.
ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಕರಿಗೆ ಹಳೆಗನ್ನಡವನ್ನು ಓದಲು ಮತ್ತು ಪಾಠ ಮಾಡಲು ಸರಿಯಾಗಿ ಬರುವುದಿಲ್ಲ. ಹಳೆಗನ್ನಡದ ಬಗ್ಗೆ ಹೆಚ್ಚಿನ ಅಧ್ಯಯನ ಕೊರತೆಯಿಂದ ಈ ಸಮಸ್ಯೆ ಶಿಕ್ಷಕರಲ್ಲಿ ಕಂಡುಬರುತ್ತಿದೆ. ಪಠ್ಯಪುಸ್ತಕ ಸಮಿತಿಯವರು ಒಂದು ಹೆಜ್ಜೆ ಮುಂದೆ ಹೋಗಿ ಪದವಿಯಲ್ಲಿ ಹಳೆಗನ್ನಡ ಇರುವುದು ಬೇಡ ಎಂಬ ತೀರ್ಮಾನಕ್ಕೂ ಬಂದಿದ್ದಾರೆ. ಆದ್ದರಿಮದ ಪುಸ್ತಕ ಪ್ರಾಧಿಕಾರ, ನಾಡಿನ ಶ್ರೇಷ್ಠ ಹಳೆಗನ್ನಡ ಪಠ್ಯಗಳಗಳನ್ನು ಅದರ ತಾತ್ಪರ್ಯ, ಸೊಗಸುಗಳನ್ನು ವಿಶೇಷ ಟಿಪ್ಪಣಿಯೊಂದಿಗೆ ಮೂಲಪಠ್ಯದೊಂದಿಗೆ ಹೊರತರಲು ಯೋಜನೆ ರೂಪಿಸಿದೆ. ಈ ಮೂಲಕ ಹಳೆಗನ್ನಡ ಪದ್ಯಗಳನ್ನು ಉಳಿಸಲು ಮುಂದಾಗಿದೆ ಎಂದರು.
ದೇಶೀಯ ಭಾಷೆಗಳ ಅವನತಿಯ ಭೀತಿ ಎದುರಿಸುತ್ತಿರುವ ಈ ಸಂದರ್ಭದಲ್ಲಿ ತತ್ವಶಾಸ್ತ್ರಗಳು ಸೇರಿದಂತೆ ಹಲವು ದರ್ಶನಗಳನ್ನು ಕನ್ನಡಕ್ಕೆ ತರಲು ವಿಶ್ವವಿದ್ಯಾಲಯಗಳು ಮುಂದಾಗಬೇಕು. ಈ ಮೂಲಕ ದೇಶೀಯ ಭಾಷೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕರನ್ನು ಸನ್ಮಾನಿಸಲಾಯಿತು.
ತಿರುಪತಿಯ ವಿಶ್ರಾಂತ ಕುಲಪತಿ ಪ್ರೊ.ಕೆ.ವಿ. ರಾಮಕೃಷ್ಣಮಾಚಾರ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪದ್ಮಾಶೇಖರ್, ಡಾ.ಮಲ್ಲೇಪುರಂ ಜಿ.ವೆಂಕಟೇಶ್, ಕುಲಸಚಿವ ವೈ.ಎಸ್.ಸಿದ್ದೇಗೌಡ ಮತ್ತಿತರರು ಭಾಗವಹಿಸಿದ್ದರು.

Comments are closed.