
ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂಭಾಗ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 15 ಮಂದಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶರತ್‌ಚಂದ್ರ ತಿಳಿಸಿದ್ದಾರೆ.
ಬಂಧಿತ ಡೇನಿಯಲ್ ಪ್ರಕಾಶ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಸ್ಫೋಟಕಗಳನ್ನು ಉಗ್ರರಿಗೆ ಸರಬರಾಜು ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಡೇನಿಯಲ್ ಆಟೋಮೊಬೈಲ್ ಎಂಜಿನಿಯರ್ ಮತ್ತು ಗ್ರಾ.ಪಂ. ಉಪಾಧ್ಯಕ್ಷನಾಗಿರುವ ಈತನ ಮೇಲೆ ಎರಡು ಕೊಲೆಯತ್ನ ಹಾಗೂ ಅಪಹರಣ ಪ್ರಕರಣಗಳು ದಾಖಲಾಗಿದ್ದು, ಮಲ್ಲೇಶ್ವರಂನ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆಂದು ಜನವರಿಯಲ್ಲಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ತಿರುನಲ್ವೇಲಿ ಜೈಲಿನಲ್ಲಿ ಬಾಡಿ ವಾರೆಂಟ್ ಮೇಲೆ ಕರೆತಂದು ವಿಚಾರಣೆ ಮಾಡಲಾಗಿದೆ ಎಂದು ಹೇಳಿದರು.
ಅಂಬಾ ಸಮುದ್ರದಲ್ಲಿ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ ಡೇನಿಯಲ್, ಸಯ್ಯದ್ ಅಲಿಗೆ ಆಪ್ತನಾಗಿದ್ದು , ಕಾಲುವೆ ಕೆಲಸ ಮಾಡುತ್ತಿದ್ದ ಜಾನ್ ಆಸೀರ್ ಎಂಬಾತನ ಬಳಿ ಅರ್ಧ ಮೂಟೆ ಜೆಲಿಟಿನ್ ಕಡ್ಡಿ ತರಿಸಿಕೊಂಡಿದ್ದ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗಿದೆ ಎಂದು ಅವರು ತಿಳಿಸಿದರು. ಆಟೋಮೊಬೈಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಸಯ್ಯದ್ ಡೇನಿಯಲ್‌ಗೆ ಪರಿಚಿತನಾಗಿದ್ದನು. ಡೇನಿಯಲ್ ವುಲ್ ಉಮ್ಮಾಹ್ ಸಂಘಟನೆಯ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ ಎಂದು ಅವರು ತಿಳಿಸಿದರು.
Comments are closed.