ಕರ್ನಾಟಕ

ಕಾಂಗ್ರೆಸ್ ಒಗ್ಗೂಡದಿದ್ದರೆ ಅರಾಜಕತೆ: ಡಿಕೆಶಿ

Pinterest LinkedIn Tumblr

dkcಬೆಂಗಳೂರು, ಜೂ. ೧೨- ದೇಶದ ಮತ್ತು ಜನಸಾಮಾನ್ಯರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷ ಮಾಡಿದಷ್ಟು ತ್ಯಾಗ, ಬಲಿದಾನಗಳನ್ನು ಜಗತ್ತಿನ ಯಾವೊಂದು ಪಕ್ಷವೂ ಮಾಡಿಲ್ಲ. ದೇಶದ ಅಭಿವೃದ್ಧಿ, ಸಮಗ್ರತೆ, ರಕ್ಷಣೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಏರ್ಪಡಿಸಿರುವ ಮೂರು ದಿನಗಳ ಎನ್.ಎಸ್.ಯು.ಐ. ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿದ್ದಾಗ ದೇಶ ಒಗ್ಗಟ್ಟಾಗಿದೆ. ಯಾವಾಗ ಕಾಂಗ್ರೆಸ್ ಪಕ್ಷ ಒಗ್ಗಟ್ಟಾಗಿಲ್ಲ. ಆಗ ದೇಶದಲ್ಲೂ ಅರಾಜಕತೆ ಉಂಟಾಗಿದೆ. ಇದು ಇತಿಹಾಸ ನಮಗೆ ಕಲಿಸುವ ಪಾಠ. ಗಾಂಧಿ ಕುಟುಂಬವಿಲ್ಲದೆ, ಕಾಂಗ್ರೆಸ್ ಪಕ್ಷ ಇಲ್ಲ. ನೆಹರು ಕುಟುಂಬದ ನಾಯಕತ್ವವೇ ಕಾಂಗ್ರೆಸ್ ಪಕ್ಷದ ಶಕ್ತಿ. ದೇಶಕ್ಕಾಗಿ ಜೀವ, ಸಂಪತ್ತು ಸೇರಿದಂತೆ, ಎಲ್ಲವನ್ನೂ ತ್ಯಾಗ ಮಾಡಿದ ನೆಹರು ಕುಟುಂಬ ಕಾಂಗ್ರೆಸ್ ಪಕ್ಷದ ಆಸ್ತಿ. ಎರಡು ಬಾರಿ ದೇಶದ ಪ್ರಧಾನಿಯಾಗುವ ಅವಕಾಶವನ್ನು ತ್ಯಾಗ ಮಾಡಿದ ಸೋನಿಯಾ ಗಾಂಧಿಯ ನಾಯಕತ್ವದ ಕಾಂಗ್ರೆಸ್‌ನಲ್ಲಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ ಎಂದು ಹೇಳಿದರು.

ನಾನೂ ಕೂಡ ಎನ್.ಎಸ್.ಯು.ಐ. ನಿಂದ ಬೆಳೆದುಬಂದವನು. ಕಾಲೇಜು ದಿನಗಳಲ್ಲಿ ಎನ್.ಎಸ್.ಯು.ಐ. ನೊಂದಿಗೆ ಗುರುತಿಸಿಕೊಂಡ ನಾನು ಈ ಸಂಘಟನೆಯಿಂದಲೇ ಬೆಳೆದು ಬಂದೆ. ಕಾಂಗ್ರೆಸ್ ಪಕ್ಷದ ಇತಿಹಾಸ, ಸಿದ್ಧಾಂತವನ್ನು ತಿಳಿದುಕೊಂಡರೆ, ಯಾರೂ ಈ ಪಕ್ಷವನ್ನು ಬಿಟ್ಟುಹೋಗಲಾರರು ಎಂದು ಹೇಳಿದ ಡಿ.ಕೆ. ಶಿವಕುಮಾರ್ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಗ್ರಾಮ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲೂ ನಾಯಕತ್ವ ಬೆಳೆಯಬೇಕು ಎಂಬ ರಾಜೀವ್ ಗಾಂಧಿಯವರ ಆಶಯ ಇಂದು ಈಡೇರಿದೆ.

ಮತದಾನದ ವಯಸ್ಸನ್ನು 18 ವರ್ಷಕ್ಕೆ ಇಳಿಸಿದ ಮೂಲಕ ನಾಯಕತ್ವ ಗುಣವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ಐತಿಹಾಸಿಕ ತಿದ್ದುಪಡಿಗಳನ್ನು ತರುವ ಮೂಲಕ ಜನಸಾಮಾನ್ಯರ ಏಳಿಗೆಗಾಗಿ ಶ್ರಮಿಸಿದೆ. ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಉಳಿದ ಯಾವುದೇ ಪಕ್ಷಗಳು ಇಂತಹ ಐತಿಹಾಸಿಕ ತಿದ್ದುಪಡಿ, ಕಾರ್ಯಕ್ರಮಗಳನ್ನು ರೂಪಿಸಿರುವ ಇತಿಹಾಸ ಇಲ್ಲ. ಎನ್.ಎಸ್.ಯು.ಐ ದೇಶದಲ್ಲೇ ಅತಿ ಹೆಚ್ಚಿನ ಸದಸ್ಯರನ್ನು ಹೊಂದಿರುವ ವಿದ್ಯಾರ್ಥಿ ಸಂಘಟನೆ. ಇದರ ಶಕ್ತಿಯನ್ನು ಅರಿತುಕೊಂಡು ಸದಸ್ಯರು ಮುನ್ನಡೆಯಬೇಕು. ಜೀವನದಲ್ಲಿ ಗುರಿ ಇಟ್ಟುಕೊಂಡು ಅವುಗಳನ್ನು ಸಾಧಿಸಲು ಕಠಿಣ ಶ್ರಮ ವಹಿಸಬೇಕು. ಹಾಗಾದರೆ ಖಂಡಿತವಾಗಿಯೂ ಮುಂದೆ ನಾಯಕತ್ವ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಭರತ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಷೀಬಾ, ಮುಖಂಡರಾದ ಸುರೇಶ್, ಶ್ರೀನಿವಾಸ್, ಸಂದೀಪ್, ಗೀತಾ ಕೃಷ್ಣ, ರಾಜ್ಯಾಧ್ಯಕ್ಷ ಹೆಚ್.ಎಸ್. ಮಂಜುನಾಥ್, ಮತ್ತಿತರರು ಭಾಗವಹಿಸಿದ್ದರು.
ಇದಕ್ಕೂ ಮೊದಲು ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.

Comments are closed.