ಕರ್ನಾಟಕ

ಬಾಲ ಕಾರ್ಮಿಕ ಪದ್ಧತಿ ತಡೆಗೆ ಸಹಕಾರ ಕೋರಿದ ಸಚಿವರು

Pinterest LinkedIn Tumblr

balaಬೆಂಗಳೂರು, ಜೂ. ೧೨- ರಾಜ್ಯವನ್ನು 2018ರ ವೇಳೆಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ರಾಜ್ಯವನ್ನಾಗಿಸಲು ಸರ್ಕಾರ ಬದ್ಧವಾಗಿದೆ. ಈ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಸರ್ಕಾರದ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಬೇಕೆಂದು ಕಾರ್ಮಿಕ ಇಲಾಖೆ ರಾಜ್ಯ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅವರು ಮನವಿ ಮಾಡಿದ್ದಾರೆ.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಭಾನ್ವಿತ ಬಾಲಕಾರ್ಮಿಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಬದ್ಧತಾ ಪ್ರಮಾಣ ವಚನ ಬೋಧಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರದ ಅವಿರಥ ಪ್ರಯತ್ನಗಳಿಂದ ಬಾಲಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದರೂ, ನಿರೀಕ್ಷಿತ ಪ್ರಗತಿ ಸಾಧಿಸಲು ಎಲ್ಲರ ನೆರವು ಅತ್ಯಗತ್ಯ ಎಂದು ಹೇಳಿದರು.

2001 ರಿಂದ ಈವರೆಗೆ ಬಾಲಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದ ಮಾಲೀಕರಿಂದ ಬಿಡಿಸಿಕೊಂಡು ಕನಿಷ್ಟ ವೇತನ ರೂಪದಲ್ಲಿ ಒಂದು ಕೋಟಿಗೂ ಹೆಚ್ಚು ಹಣವನ್ನು ವಸೂಲಿ ಮಾಡಿ ಬಾಲಕಾರ್ಮಿಕರ ಕುಟುಂಬದವರಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಬಾಲ ಕಾರ್ಮಿಕ ಯೋಜನೆಯಡಿ ಸರ್ಕಾರ ಆರು ವಸತಿ ಶಾಲೆಗಳನ್ನು ನಡೆಸುತ್ತಿದ್ದು, 173 ಬಾಲ ಕಾರ್ಮಿಕರಿಗೆ ಪುನರ್ ವಸತಿ ಸೌಲಭ್ಯವನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.
ಪ್ರಸಕ್ತ ಸಾಲಿನಲ್ಲಿ ಬಾಲಕಾರ್ಮಿಕರ ಪುನರ್ ವಸತಿಗಾಗಿ 488 ಲಕ್ಷ ರೂ. ಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಈಗಾಗಲೇ 401 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದ ಅವರು, 4.30 ಲಕ್ಷ ತಪಾಸಣೆ ನಡೆಸಿದ್ದು, 19 ಸಾವಿರಕ್ಕೂ ಹೆಚ್ಚು ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದ ಮೂಲಕ 91 ಲಕ್ಷಕ್ಕೂ ಹೆಚ್ಚು ಮೊಕದ್ದಮೆಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಬಾಲಕಾರ್ಮಿಕರ ಬಗ್ಗೆ ಸಾರ್ವಜನಿಕರಿಂದ ಬರುವ ದೂರುಗಳನ್ನು ದಾಖಲಿಸಿಕೊಳ್ಳಲು ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಆನ್ ಲೈನ್ ಮೂಲಕವೂ ದೂರನ್ನು ದಾಖಲಿಸಿಕೊಳ್ಳಲಾಗುತ್ತಿದೆ. 1098ರ ಉಚಿತ ಮಕ್ಕಳ ಸಹಾಯವಾಣಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು, ಬಾಲ ಕಾರ್ಮಿಕ ಪದ್ಧತಿಯೂ ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗೆ ಅಡ್ಡಿಯಾಗಿದೆ.
ಕೈಗಾರಿಕೆ ಕ್ರಾಂತಿ ಬಳಿಕ ಬಾಲ ಕಾರ್ಮಿಕ ಪದ್ಧತಿ ಹುಟ್ಟಿಕೊಂಡಿದ್ದು, ಇದಕ್ಕೆ ಕಡಿವಾಣ ಹಾಕಲು ಕಾನೂನುಗಳನ್ನು ಬಿಗಿಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ನಗರ ಜಿಲ್ಲೆಯ ರಾಚೇನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ 5 ಮಂದಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕೆಂಪಲಿಂಗನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ 5 ಮಂದಿ ಬಾಲ ಕಾರ್ಮಿಕರನ್ನು ಸೇರ್ಪಡೆಗೊಳಿಸಲಾಯಿತು.
ಸಮಾರಂಭದಲ್ಲಿ ವಿಧಾನ ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಆರ್.ವಿ. ದೇಶಪಾಂಡೆ ಮಾತನಾಡಿ, ಮಕ್ಕಳನ್ನು ದುಡಿಸಿಕೊಂಡ ಮಾಲೀಕರಿಂದ ವಸೂಲಿ ಮಾಡಿದ ದಂಡದ ಪ್ರಮಾಣ ಸದ್ಭಳಕೆಯಾಗುತ್ತಿದೆಯೇ ಎಂಬ ಬಗ್ಗೆ ಸರ್ಕಾರ ನಿಗಾ ವಹಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಸಂಜೀವ್ ಕುಮಾರ್ ಸ್ವಾಗತಿಸಿದರು. ಕಾರ್ಮಿಕ ಆಯುಕ್ತ ಆರ್.ಆರ್. ಜೆನ್ನು ವಂದಿಸಿದರು.
ಕಾರ್ಮಿಕ ಮುಖಂಡ ಎಸ್.ಎಸ್. ಪ್ರಕಾಶಂ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಆಯುಕ್ತ ಜೆ. ಮಂಜುನಾಥ್, ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳು ಇಲಾಖೆಯ ನಿರ್ದೇಶಕ ಟಿ.ಜಿ. ಮಂಜುನಾಥ್, ಕಾರ್ಮಿಕ ರಾಜ್ಯ ವಿಮಾ ನಿರ್ದೇಶಕಿ ಡಾ. ವಿ. ಶ್ರೀದೇವಿ, ಮತ್ತಿತರರು ಉಪಸ್ಥಿತರಿದ್ದರು.

Comments are closed.