ಕರ್ನಾಟಕ

ಜಿಲ್ಲಾ ಆಸ್ಪತ್ರೆಗಳಲ್ಲಿ ನೇತ್ರ ಚಿಕಿತ್ಸಾ ಕೇಂದ್ರ – ಖಾದರ್

Pinterest LinkedIn Tumblr

kadarಬೆಂಗಳೂರು, ಜೂ. ೧೨ – ಪ್ರತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಗಳಲ್ಲಿ ಕಣ್ಣಿನ ಚಿಕಿತ್ಸೆಗೆ ಸಂಬಂಧಿಸಿದ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳು ಜನಿಸಿದ ತಕ್ಷಣವೇ ಕಣ್ಣಿನ ದೃಷ್ಟಿ ಪರೀಕ್ಷಿಸುವ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಕಣ್ಣು ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸುವತ್ತ ಸರ್ಕಾರ ಗಮನ ನೀಡಿದೆ ಎಂದರು.
ನಗರದ ಡಾ. ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆಯಲ್ಲಿಂದು ನೂತನ ಶಸ್ತ್ರ ಚಿಕಿತ್ಸಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಇರಲಿ ಖಾಸಗಿ ಇರಲಿ ವೈದ್ಯರು ಹಾಗೂ ಸಿಬ್ಬಂದಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು, ರೋಗಿಯ ಕಿಸೆ ನೋಡಿ ಚಿಕಿತ್ಸೆ ನೀಡುವುದು ಬೇಡ, ರೋಗಿಯ ಪರಿಸ್ಥಿತಿಯನ್ನು ನೋಡಿಕೊಂ‌ಡು ಚಿಕಿತ್ಸೆ ನೀ‌ಡಬೇಕು ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಈಗ ಸಂಜೆಯ ವೇಳೆ ಚಿಕಿತ್ಸೆ ನೀಡುವ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಿಂದ ರೋಗಿಗಳು ದಿನವಿಡೀ ರಜೆ ಹಾಕಿ ಆಸ್ಪತ್ರೆಗೆ ಭೇಟಿ ನೀ‌ಡುವುದು ತಪ್ಪಿದೆ. ಸಂಜೆ ಕೆಲಸ ಮುಗಿದ ನಂತರ ಬಂದು ತಪಾಸಣೆ ಮಾಡಿಸಿಕೊಳ್ಳಬೇಕಾಗಿದೆ ಎಂದರು.
ಆಸ್ತಿ ವಾಪಸ್ ನೀಡಿ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕಿ ಪ್ರಮೀಳಾ ನೇಸರ್ಗಿ ಅವರು, ಡಾ. ಎಂ.ಸಿ. ಮೋದಿ ಕಣ್ಣಿನ ಆಸ್ಪತ್ರೆಗೆ ಸೇರಿದ ಆಸ್ತಿ ಹಾಗೂ ಆಭರಣಗಳನ್ನು ಸರ್ಕಾರಿ ರಿಸೀವರ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ ಇದನ್ನು ವಾಪಸ್ ಡಾ. ಎಂ.ಸಿ. ಮೋದಿ ಕುಟುಂಬದವರಿಗೆ ನೀಡಬೇಕು, ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಆಸ್ಪತ್ರೆಯ ಸರ್ಕಾರಿ ರಿಸೀವರ್ ಹಾಗೂ ವಿಶೇಷ ತಹಶೀಲ್ದಾರ್ ಕೆ. ಗೋಪಾಲಸ್ವಾಮಿ, ಆಡಳಿತಾಧಿಕಾರಿ ಜಿ. ನಂಜುಂಡಪ್ಪ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Comments are closed.