ಕರ್ನಾಟಕ

ಐಪಿಎಸ್ ಅಧಿಕಾರಿಯಂತೆ ಠಾಣೆಗಳಿಗೆ ಹೋಗಿ ಸಿಬ್ಬಂದಿಯ ಬೆವರಿಳಿಸಿದ್ದ ಈ ವೈದ್ಯನ ಬಯಕೆ ಏನು ಗೊತ್ತೇ…?

Pinterest LinkedIn Tumblr

reddi

ಬೆಂಗಳೂರು: ವೃತ್ತಿಯಲ್ಲಿ ವೈದ್ಯನಾದರೂ ಆತನಿಗೆ ಪೊಲೀಸರಿಂದ ಸೆಲ್ಯೂಟ್ ಹೊಡೆಸಿಕೊಳ್ಳುವ ಆಸೆ. ಈ ಬಯಕೆ ಈಡೇರಿಸಿಕೊಳ್ಳಲು ಐಪಿಎಸ್ ಅಧಿಕಾರಿಯಂತೆ ಠಾಣೆಗಳಿಗೆ ಹೋಗಿ ಸಿಬ್ಬಂದಿಯ ಬೆವರಿಳಿಸಿದ್ದ ಆ ವೈದ್ಯ , ಈಗ ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕು ಕಂಬಿ ಎಣಿಸುತ್ತಿದ್ದಾನೆ.

‘ಕಡಪ ಮೂಲದ ತೇಜಸ್‌ ರೆಡ್ಡಿ (28) ಎಂಬಾತನನ್ನು ಬಂಧಿಸಲಾಗಿದೆ. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದು ಹೆಸರಘಟ್ಟ ರಸ್ತೆಯ ಕಿರ್ಲೋಸ್ಕರ್ ಲೇಔಟ್‌ನಲ್ಲಿ ನೆಲೆಸಿದ್ದ ಈತ, ಸಪ್ತಗಿರಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಆತನಿಂದ ಇನ್ನೋವಾ ಕಾರು, ಪೊಲೀಸ್ ಸಮವಸ್ತ್ರ ಹಾಗೂ ವಾಕಿಟಾಕಿ ಜಪ್ತಿ ಮಾಡಲಾಗಿದೆ. ಈ ಕೃತ್ಯಕ್ಕೆ ಆತನಿಗೆ ನೆರವಾಗಿದ್ದ ನೆಲಮಂಗಲ ಠಾಣೆಯ ಕಾನ್‌ಸ್ಟೆಬಲ್‌ ಒಬ್ಬರ ಪುತ್ರ ಪೃಥ್ವಿ ಎಂಬಾತನನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದ್ದಾರೆ.

ರಷ್ಯಾದಲ್ಲಿ ಅಧ್ಯಯನ: ಎಂಟನೇ ವಯಸ್ಸಿಗೇ ತಂದೆ–ತಾಯಿಯನ್ನು ಕಳೆದುಕೊಂಡ ತೇಜಸ್‌, ಕಡಪದ ‘ಮದರ್‌ಹುಡ್ ಟ್ರಸ್ಟ್‌’ನ ಆಶ್ರಯದಲ್ಲಿ ಬೆಳೆದ. ಅಲ್ಲೇ ಶಾಲಾ–ಕಾಲೇಜು ಶಿಕ್ಷಣ ಮುಗಿಸಿದ ಆತ, ನಂತರ ರಷ್ಯಾದ ವಿಶ್ವವಿದ್ಯಾನಿಲಯ ಒಂದರಲ್ಲಿ ಎಂಬಿಬಿಎಸ್‌ ಪದವಿ ಪಡೆದು 2014ರಲ್ಲಿ ಬೆಂಗಳೂರಿಗೆ ಬಂದ.

ಇಲ್ಲಿ ಸಪ್ತಗಿರಿ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ. ಐಪಿಎಸ್ ಅಧಿಕಾರಿಯಾಗಲಿಲ್ಲ ಎಂಬ ಕೊರಗಿನಲ್ಲೇ ಆತ ಖಿನ್ನತೆಗೆ ಒಳಗಾಗಿದ್ದ. ಅಲ್ಲದೆ, ‘ಒಂದಲ್ಲ ಒಂದು ದಿನ ನಾನು ಪೊಲೀಸ್ ಇಲಾಖೆಯ ಉನ್ನತ ಹುದ್ದೆ ಪಡೆಯುತ್ತೇನೆ. ತಳಹಂತದ ಸಿಬ್ಬಂದಿಯಿಂದ ಸೆಲ್ಯೂಟ್ ಹೊಡೆಸಿಕೊಳ್ಳುತ್ತೇನೆ’ ಎಂದು ತನ್ನ ಗೆಳೆಯರ ಬಳಿಯೂ ಹೇಳಿಕೊಂಡಿದ್ದ.

ನಕಲಿ ಎಎಸ್ಪಿ: ಜೂನ್ 4ರಂದು ಪೊಲೀಸರು ಸಾಮೂಹಿಕ ರಜೆ ಹಾಕುವ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ, ಡಿಜಿಪಿ ಓಂಪ್ರಕಾಶ್ ಅವರು ಆ ದಿನ ಯಾವ ಸಿಬ್ಬಂದಿಗೂ ರಜೆ ನೀಡಬಾರದೆಂದು ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದರು. ಹೀಗಾಗಿ ಆರೋಪಿ, ಆ ದಿನ ಹಾಜರಾತಿ ಪುಸ್ತಕ ಪರಿಶೀಲಿಸುವ ಸೋಗಿನಲ್ಲಿ ಠಾಣೆಗಳಿಗೆ ಹೋಗಲು ಸಂಚು ರೂಪಿಸಿದ್ದ.

ಪೊಲೀಸ್ ಸಮವಸ್ತ್ರ ಹಾಗೂ ಇನ್ನೋವಾ ಕಾರನ್ನು ಬಾಡಿಗೆ ಪಡೆದುಕೊಂಡ ಆರೋಪಿ, ಜೂನ್ 4ರ ಬೆಳಿಗ್ಗೆಯೇ ನೆಲಮಂಗಲ ಠಾಣೆಗೆ ತೆರಳಿ, ‘ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಪುತ್ರನಾದ ನಾನು, ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಎಸ್ಪಿ) ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಬೆಂಗಳೂರು ಹಾಗೂ ಸುತ್ತಮುತ್ತಲ ಠಾಣೆಗಳಿಗಳ ಸಿಬ್ಬಂದಿಯ ಹಾಜರಾತಿ ಪರಿಶೀಲಿಸುವಂತೆ ಡಿಜಿಪಿ ಓಂಪ್ರಕಾಶ್ ಅವರು ಸೂಚಿಸಿದ್ದಾರೆ’ ಎಂದು ನಂಬಿಸಿದ್ದ.

ಹಾಜರಾತಿ ಪರಿಶೀಲಿಸಿದಾಗ ಇಬ್ಬರು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿದ್ದರು. ಆಗ ‘ಯಾರಿಗೆ ಕೇಳಿ ರಜೆ ಕೊಟ್ಟಿದ್ದೀರಿ’ ಎಂದು ಎಲ್ಲರ ಮೇಲೂ ಕೂಗಾಡಿದ್ದ ತೇಜಸ್, ಈ ಸಂಬಂಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರ ಬೆವರಿಳಿಸಿದ್ದ.

ಇದೇ ವೇಳೆ ಕೆಲ ಸಿಬ್ಬಂದಿಯ ಕುಂದು ಕೊರತೆ ಆಲಿಸಿದ್ದ ಆತ, ‘ನಿಮ್ಮ ಮಕ್ಕಳು ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ನನ್ನನ್ನು ಸಂಪರ್ಕಿಸಿ. ನನ್ನ ಬಳಿ ಇರುವ ಕೆಲ ಪುಸ್ತಕಗಳನ್ನು ಕೊಡುತ್ತೇನೆ. ಜತೆಗೆ, ಹೇಗೆ ಸಿದ್ಧರಾಗಬೇಕು ಎಂಬುದನ್ನು ಹೇಳಿ ಕೊಡುತ್ತೇನೆ’ ಎಂದೂ ಹೇಳಿದ್ದ.

ಈ ವೇಳೆ ಕಾನ್‌ಸ್ಟೆಬಲ್‌ ಒಬ್ಬರು, ‘ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ನನ್ನ ಮಗ ಪೃಥ್ವಿಗೆ ನೆರವಾಗಿ’ ಎಂದು ಮನವಿ ಮಾಡಿದ್ದರು. ಆಗ ಆರೋಪಿಯು, ಪುಸ್ತಕಗಳನ್ನು ಕೊಟ್ಟು ಕಳುಹಿಸುತ್ತೇನೆ ಎಂದು ಪೃಥ್ವಿಯನ್ನು ತನ್ನ ಜತೆಗೇ ಕರೆದುಕೊಂಡು ಹೋಗಿದ್ದ. ಅಲ್ಲಿಂದ ಇಬ್ಬರೂ, ಸೋಲ ದೇವನಹಳ್ಳಿ, ಜಾಲಹಳ್ಳಿ ಸಂಚಾರ, ಹೆಬ್ಬಾಳ ಸಂಚಾರ, ಕೆ.ಆರ್.ಪುರ ಹಾಗೂ ಸಂಪಿಗೆಹಳ್ಳಿ ಠಾಣೆಗಳಿಗೂ ತೆರಳಿ ಹಾಜರಾತಿ ಪರಿಶೀಲಿಸಿ ಬಂದಿದ್ದರು.

ಎಸ್ಪಿ ಜತೆಗೂ ಮಾತುಕತೆ!: ಪೃಥ್ವಿಯ ಸ್ನೇಹಿತೆಯೊಬ್ಬರು ಥಣಿಸಂದ್ರದ ಪೊಲೀಸ್ ತರಬೇತಿ ಶಾಲೆಯಲ್ಲಿ (ಪಿಟಿಎಸ್) ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಸಹ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಹೀಗಾಗಿ ಗೆಳತಿಯನ್ನೂ ಒಮ್ಮೆ ಭೇಟಿ ಮಾಡುವಂತೆ ಪೃಥ್ವಿಯು ತೇಜಸ್‌ಗೆ ಕೋರಿದ್ದ. ಅಂತೆಯೇ ಆತ, ಪಿಟಿಎಸ್‌ಗೆ ತೆರಳಿ ಅವರ ಜತೆ ಮಾತನಾಡಿದ್ದ. ಇದೇ ವೇಳೆ ಪಿಟಿಎಸ್ ಎಸ್ಪಿ ಜತೆಗೂ ಕೆಲ ಕಾಲ ಮಾತುಕತೆ ನಡೆಸಿ ವಾಪಸಾಗಿದ್ದ.

ಬಯಲಾಯ್ತು ಬಣ್ಣ: ತೇಜಸ್‌ನ ವರ್ತನೆಯಿಂದ ಅನುಮಾನಗೊಂಡ ಸಂಪಿಗೆಹಳ್ಳಿ ಪೊಲೀಸರು, ದಾವಣಗೆರೆ ಎಸ್ಪಿ ಕಚೇರಿಗೆ ಕರೆ ಮಾಡಿ ಆತನ ಬಗ್ಗೆ ವಿಚಾರಿಸಿದ್ದರು. ಆಗ ಆ ಹೆಸರಿನ ಅಧಿಕಾರಿ ಅಲ್ಲಿ ಯಾರೂ ಇಲ್ಲ ಎಂಬುದು ಗೊತ್ತಾಗಿತ್ತು.

ತಿರುಪತಿಯಲ್ಲಿ ಸಿಕ್ಕ
‘ತೇಜಸ್‌ನ ವಿಸಿಟಿಂಗ್ ಕಾರ್ಡ್‌ನಲ್ಲಿದ್ದ ನಂಬರ್‌ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಪೃಥ್ವಿಯನ್ನು ಸಂಪರ್ಕಿಸಿದಾಗ ಆರೋಪಿಯ ಇನ್ನೊಂದು ಮೊಬೈಲ್ ಸಂಖ್ಯೆ ಸಿಕ್ಕಿತು. ಅದರ ಕರೆಗಳ ವಿವರ (ಸಿಡಿಆರ್) ಪರಿಶೀಲಿಸಿದಾಗ ಮೊಬೈಲ್ ತಿರುಪತಿಯ ಟವರ್‌ನಿಂದ ಸಂಪರ್ಕ ಪಡೆಯುತ್ತಿತ್ತು’.

‘ಎಸ್‌ಐ ಶರತ್, ಹೆಡ್‌ಕಾನ್‌ಸ್ಟೆಬಲ್ ಶ್ರೀಧರ್, ಕಾನ್‌ಸ್ಟೆಬಲ್‌ಗಳಾದ ಭಾಸ್ಕರ್ ಹಾಗೂ ಪುರುಷೋತ್ತಮ್ ಅವರು ಕೂಡಲೇ ಅಲ್ಲಿಗೆ ತೆರಳಿದರು. ಲಾಡ್ಜ್‌ನಲ್ಲಿ ತಂಗಿದ್ದ ‘ನಕಲಿ ಎಎಸ್ಪಿ’ಯನ್ನು ಪತ್ತೆ ಮಾಡಿದ ತಂಡ, ಗುರುವಾರ (ಜೂನ್ 10) ರಾತ್ರಿ ನಗರಕ್ಕೆ ಕರೆತಂದಿತು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

** *** **
ಐಪಿಎಸ್ ಆಗಬೇಕೆಂಬ ಬಯಕೆ ಇತ್ತು. ಪರೀಕ್ಷೆ ಬರೆದರೂ ಪಾಸಾಗಲಿಲ್ಲ. ಕೆಳ ಹಂತದ ಸಿಬ್ಬಂದಿ ಅಧಿಕಾರಿಗಳಿಗೆ ಕೊಡುವ ಗೌರವವನ್ನು ನಾನೂ ಪಡೆಯಬೇಕೆಂದು ಹೀಗೆ ಮಾಡಿದೆ.
-ತೇಜಸ್

Comments are closed.