ಕರ್ನಾಟಕ

ಸುಭಾಷ್‌ಚಂದ್ರ ಬೋಸ್‌ ಹೋಲುವ ಲಾಲಧರಿ ಮುತ್ಯಾ ! ಮತ್ತಷ್ಟು ಗರಿಬಿಚ್ಚಿಕೊಂಡ ಚರ್ಚೆ

Pinterest LinkedIn Tumblr

subhash

ಬೀದರ್‌: ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಲಧರಿ ಆಶ್ರಮದ ಲಾಲಧರಿ ಮುತ್ಯಾ ಸಾವಿಗೀಡಾದ 15 ವರ್ಷಗಳ ಬಳಿಕ ಕೊಠಡಿಯೊಂದಕ್ಕೆ ಹಾಕಿದ್ದ ಬೀಗ ತೆಗೆದ ನಂತರ ವಿಸ್ಮಯಕಾರಿ ಅಂಶಗಳು ಬೆಳಕಿಗೆ ಬಂದಿವೆ.

ಆಶ್ರಮದಲ್ಲಿ ದೊರೆತ ಸೇನಾ ಸಮವಸ್ತ್ರಗಳು, ಎಂ 541 ಗಡಿಯಾರ, ದಿಕ್ಸೂಚಿ ಹಾಗೂ ವಿದೇಶಿ ನೋಟುಗಳಿಗೂ ಹಾಗೂ ಉತ್ತರಪ್ರದೇಶದ ಫೈಜಾಬಾದ್‌ನ ಆಶ್ರಮದಲ್ಲಿ ಈಚೆಗೆ ದೊರೆತ ವಸ್ತುಗಳಿಗೂ ಸಾಮ್ಯತೆ ಇದೆ. ಹೀಗಾಗಿ ಸುಭಾಷ್‌ಚಂದ್ರ ಬೋಸ್‌ ಅವರೇ ‘ಲಾಲಧರಿ ಮುತ್ಯಾ’ ಆಗಿರಬಹುದು ಎಂದು ಮಹಾರಾಷ್ಟ್ರದಲ್ಲಿ ವಾಸವಾಗಿರುವ ಲಾಲಧರಿ ಮುತ್ಯಾ ಅವರ ಕೆಲ ಭಕ್ತರು ಬಲವಾಗಿ ನಂಬುತ್ತಿದ್ದಾರೆ.

ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಉಮರ್ಗಾದ ಜವಳಿ ವ್ಯಾಪಾರಿ ಸಂತರಾಮ್ ಮುರ್ಜಾನಿ ಅವರು 2016ರ ಜನವರಿ 12ರಂದು ಪ್ರಧಾನಿಗೆ ಪತ್ರ ಬರೆದ ನಂತರ ಈ ಕುರಿತ ಚರ್ಚೆ ಮತ್ತಷ್ಟು ಗರಿಬಿಚ್ಚಿಕೊಂಡಿದೆ.

ಕೊಠಡಿಯಲ್ಲಿ ಏನಿದೆ?: ಜರ್ಮನ್‌ನ ಎಂ–541– ರೂಹ್ಲಾ ಗಡಿಯಾರ, ಪ್ಯಾರೀಸ್‌ನ ದುರ್ಬಿನು, 1932 ಮಾದರಿಯ ದಿಕ್ಸೂಚಿ, ಸೇನಾ ಸಮವಸ್ತ್ರ, ವಿದೇಶಿ ಕರೆನ್ಸಿಗಳು, ನಾಣ್ಯಗಳು, ಅರಬ್ಬಿ ಲಿಪಿಯುಳ್ಳ ಬ್ರೆಸ್‌ಲೆಟ್‌, ಜಂಬೆ, ಬ್ಯಾಚ್‌, ಉಲನ್‌ ಟೋಪಿಗಳು, ಬಾಚಣಿಕೆ, ಚಿಲ್ಮಿ ಮತ್ತಿತರ ವಸ್ತುಗಳು ಪತ್ತೆಯಾಗಿವೆ. ಇವೆಲ್ಲ ಈಗಲೂ ಸುಸ್ಥಿತಿಯಲ್ಲಿವೆ.

ಉಮರ್ಗಾದ ಸಾಯಿಕೃಷ್ಣ ಬ್ಲಡ್‌ ಬ್ಯಾಂಕ್‌ನಲ್ಲಿ ಅನಾರೋಗ್ಯದ ಸಂದರ್ಭದಲ್ಲಿ ಲಾಲಧರಿ ಮುತ್ಯಾ ಅವರು ರಕ್ತ ಪರೀಕ್ಷೆ ಮಾಡಿಕೊಂಡ ದಾಖಲೆಗಳು ಇವೆ. ಸುಭಾಷ್‌ಚಂದ್ರ ಅವರ ಚಿತ್ರದ ಜತೆಗೆ ಬೋಸರ ಪೋಷಾಕಿನಲ್ಲಿ ಕಾಣಿಸಿಕೊಂಡ ಭಾವಚಿತ್ರವೂ ಇದೆ.

ನಿಖರ ಮಾಹಿತಿ ಇಲ್ಲ: ‘ಸುಭಾಷ್‌ಚಂದ್ರ ಬೋಸ್‌ ಅವರೇ ಲಾಲಧರಿಮುತ್ಯಾ ಆಗಿರಬಹುದು. ನಮಗೆ ನಿಖರವಾಗಿ ತಿಳಿದಿಲ್ಲ. ಫೈಜಾಬಾದ್‌ನ ಗುಮ್ನಾಮಿ ಬಾಬಾ ಆಶ್ರಮದಲ್ಲಿ ದೊರೆತಿರುವ ವಸ್ತುಗಳು ಹಾಗೂ ಲಾಲಧರಿ ಆಶ್ರಮದಲ್ಲಿ ಸಿಕ್ಕ ವಸ್ತುಗಳಲ್ಲಿ ಸಾಮ್ಯತೆ ಇದೆ. ಹೀಗಾಗಿ ಅನುಮಾನ ಬಂದಿದೆ’ ಎಂದು ವ್ಯಾಪಾರಿ ಸಂತರಾಮ್ ಮುರ್ಜಾನಿ ಹೇಳುತ್ತಾರೆ.

‘ಲಾಲಧರಿ ಮುತ್ಯಾ 2001ರ ಮೇ 13ರಂದು ಕೊನೆಯುಸಿರೆಳೆದಿದ್ದರು. ನನ್ನ ತಂದೆ ಅತುಮಲ್‌ ಮುರ್ಜಾನಿ ಅವರಿಗೆ 1971ರಲ್ಲಿ ಸೊಲ್ಲಾಪುರದ ಬಸ್ ನಿಲ್ದಾಣದಲ್ಲಿ ಲಾಲಧರಿ ಮುತ್ಯಾ ಭೇಟಿಯಾಗಿದ್ದರು. ಅವರು ಹಲವು ಭಾಷೆಗಳನ್ನು ಬಲ್ಲವರಾಗಿದ್ದರು. 1985ರವರೆಗೂ ನಮ್ಮ ಮನೆಯಲ್ಲೇ ವಾಸವಾಗಿದ್ದರು.

ಜಪಾನ್‌, ಸೌದಿ, ಜರ್ಮನಿ ಹಾಗೂ ರಷ್ಯಾ ದೇಶಗಳಿಗೆ ಭೇಟಿ ಕೊಟ್ಟಿರುವ ಕುರಿತು ಹೇಳುತ್ತಿದ್ದರು. ಅವರ ಎದೆಮೇಲೆ ಕೆಲವು ಚಿಹ್ನೆಗಳಿದ್ದವು. ಯಾವಾಗಲೂ ಬಿಬಿಸಿ ರೇಡಿಯೊ ಕೇಳುತ್ತಿದ್ದರು. ಸಿಖ್ಖರ ಮಾದರಿಯಲ್ಲಿ ಪೇಟಾ ಕಟ್ಟಿಕೊಳ್ಳುತ್ತಿದ್ದರು. ಮೂಲತಃ ಅವರು ಯಾರು? ಎಲ್ಲಿಂದ ಬಂದಿದ್ದರು ತಿಳಿದಿಲ್ಲ. 1983ರಲ್ಲಿ ನನ್ನ ತಂದೆಯ ನಿಧನದ ನಂತರ ಅವರು ಕರ್ನಾಟಕದ ಲಾಲಧರಿಗೆ ತೆರಳಿದರು’ ಎಂದು ಅವರು ವಿವರಿಸುತ್ತಾರೆ.

‘1995ರಲ್ಲಿ ಲಾಲಧರಿಯಲ್ಲಿ ಸಂಸತ್ ಭವನ ಮಾದರಿಯಲ್ಲಿ ಆಶ್ರಮದ ಕಟ್ಟಡ ಕಟ್ಟಿಸಿದರು. ಅದನ್ನು ಕಟ್ಟಿಸಲು ಎಲ್ಲಿಂದ ಹಣ ಬಂದಿತು ಗೊತ್ತಿಲ್ಲ. ಪ್ರತಿವರ್ಷ ಆಗಸ್ಟ್‌ 15 ಹಾಗೂ ಜನವರಿ 26ರಂದು ಬೆಳಿಗ್ಗೆ 5.45ಕ್ಕೆ ಧ್ವಜಾರೋಹಣ ಮಾಡುತ್ತಿದ್ದರು. 2001ರ ಮೇ 13ರಂದು ನಿಧನರಾದರು’ ಎನ್ನುತ್ತಾರೆ ಅವರು.

‘2015ರ ಡಿಸೆಂಬರ್‌ ಕೊನೆವಾರದಲ್ಲಿ ಆಶ್ರಮದ ಕೊಠಡಿಯ ಬೀಗ ತೆರೆದಾಗ ಅಚ್ಚರಿ ಕಾದಿತ್ತು. ಎಲ್ಲ ವಸ್ತುಗಳನ್ನು ನೋಡಿ ಅವರು ಸಂತರಾಗಿರಲು ಸಾಧ್ಯವಿಲ್ಲ ಎನ್ನುವುದು ಮನವರಿಕೆ ಆಯಿತು. ಲಾಲಧರಿ ಅವರು ಸುಭಾಷ್‌ಚಂದ್ರ ಬೋಸ್‌ ಅವರೇ ಆಗಿರಬಹುದು ಎನ್ನುವುದು ನನ್ನ ಬಲವಾದ ನಂಬಿಕೆ’ ಎಂದು ಹೇಳುತ್ತಾರೆ.

‘ಉಸ್ಮಾನಾಬಾದ್ ಸಂಸದ ರವೀಂದ್ರ ಗಾಯಕವಾಡ ಅವರ ಮೂಲಕ ಜನವರಿ 12ರಂದು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಕಳುಹಿಸಲಾಗಿದೆ. ಆನ್‌ಲೈನ್‌ ಮೂಲಕ ಮಾಹಿತಿ ಒದಗಿಸಿದ್ದೇನೆ. ಪ್ರಧಾನಿ ಕಾರ್ಯಾಲಯದಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಉಸ್ಮಾನಬಾದ್‌ ಜಿಲ್ಲಾಧಿಕಾರಿಗೂ ಮನವಿಪತ್ರ ಸಲ್ಲಿಸಿದ್ದೇನೆ. ಜನವರಿಯಲ್ಲೇ ಮರಾಠಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ ಕಾದು ನೋಡುತ್ತಿದ್ದೇನೆ’ ಎನ್ನುತ್ತಾರೆ ಅವರು.

ದಾಖಲೆ ಲಭ್ಯ ಇಲ್ಲ: ‘ಜಿಲ್ಲೆಯಲ್ಲಿ ಹಿಂದೆ ನಿಜಾಮರ ಆಡಳಿತ ಇತ್ತು. ಸುಭಾಷ್‌ಚಂದ್ರ ಬೋಸ್‌ ಅವರು ಹುಮನಾಬಾದ್ ತಾಲ್ಲೂಕಿನ ಲಾಲಧರಿಯಲ್ಲಿ ನೆಲೆಸಿದ್ದರು ಎನ್ನುವ ಬಗೆಗೆ ದಾಖಲೆಗಳು ಲಭ್ಯ ಇಲ್ಲ. ಅಲ್ಲಿದ್ದ ಸ್ವಾತಂತ್ರ್ಯ ಯೋಧರೂ ಈಗ ಬದುಕಿಲ್ಲ. ಈ ಸಂಬಂಧ ಮಾಹಿತಿ ನೀಡುವಂತೆ ಪ್ರಧಾನಿ ಕಚೇರಿಯಿಂದಾಗಲಿ, ರಾಜ್ಯ ಸರ್ಕಾರದಿಂದಾಗಲಿ ಯಾವುದೇ ಸೂಚನೆಯೂ ಬಂದಿಲ್ಲ’ ಎನ್ನುತ್ತಾರೆ ಬಸವಕಲ್ಯಾಣದ ಉಪ ವಿಭಾಗಾಧಿಕಾರಿ ಶಂಕರ ವನಕ್ಯಾಳ.

ಅನುಕರಣೆ: ‘ಲಾಲಧರಿ ಮುತ್ಯಾ ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಅಪ್ಪಟ ಅನುಯಾಯಿ ಆಗಿದ್ದರು. ಹೀಗಾಗಿ ಬೋಸ್‌ ಅವರ ವೇಷದಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುತ್ತಿದ್ದರು. ಬೋಸರ ಜನ್ಮದಿನ ಆಚರಿಸುತ್ತಿದ್ದರು. ಲಾಲಧರಿ ಮುತ್ಯಾ, ಬೋಸ್‌ ಆಗಿರಲು ಸಾಧ್ಯವಿಲ್ಲ. ಅವರನ್ನು ಹತ್ತಿರದಿಂದ ನೋಡಿದ್ದೇನೆ’ ಎಂದು ಪೊಲೀಸ್‌ ಮುಖ್ಯಾಲಯದಲ್ಲಿರುವ ಕಾನ್‌ಸ್ಟೆಬಲ್ ಹಣಮಂತರಾವ್ ವಲ್ಲೆಪುರೆ ಹೇಳುತ್ತಾರೆ.

ಹುಮನಾಬಾದ್– ಕಲಬುರ್ಗಿ ಹೆದ್ದಾರಿಯಲ್ಲಿರುವ ಇಸ್ಲಾಂಪುರ, ಸದ್ಲಾಪುರ, ಮಸ್ತಾಪುರ, ಯರಬಾಗ್‌ ಗ್ರಾಮಸ್ಥರು, ರೆಡ್ಡಿ, ಟೋಕರಿ ಕೋಳಿ ಹಾಗೂ ಲಂಬಾಣಿ ಸಮಾಜದವರೇ ಲಾಲಧರಿ ಮುತ್ಯಾ ಅವರ ಆಶ್ರಮಕ್ಕೆ ಬರುತ್ತಿದ್ದರು. ಮುತ್ಯಾ ಅವರಿಗೆ ಅಪರೂಪದ ವಸ್ತುಗಳ ಹವ್ಯಾಸ ಇದ್ದಿರಬಹುದು ಎಂಬುದು ಅವರು ಅಭಿಪ್ರಾಯ.

Comments are closed.