ಕೋಲಾರ: ರಸ್ತೆಗಳಲ್ಲಿರುವ ರಸ್ತೆ ಉಬ್ಬುಗಳಿಂದ ಹೆಚ್ಚು ಅಪಘಾತವಾಗುತ್ತಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಅದರಂತೆ ಸರ್ಕಾರಗಳೂ ರಸ್ತೆ ಉಬ್ಬುಗಳನ್ನು ತೆಗೆಯುತ್ತಿದೆ.
ಯಾವ ರಸ್ತೆಉಬ್ಬುಗಳಿಂದ ಜೀವಹಾನಿಯಾಗುತ್ತಿದೆ ಎಂದು ನ್ಯಾಯಾಲಯ ಹಾಗೂ ಸರ್ಕಾರಗಳು ತೀರ್ಮಾನಿಸಿದ್ದವೋ ಅದೇ ರಸ್ತೆ ಉಬ್ಬೊಂದು ವ್ಯಕ್ತಿಯೊಬ್ಬನ ಸಜೀವ ಅಂತ್ಯಸಂಸ್ಕಾರವನ್ನು ತಪ್ಪಿಸಿದೆ. ರಸ್ತೆಉಬ್ಬಿನಿಂದ ಸಜೀವ ಅಂತ್ಯಸಂಸ್ಕಾರವನ್ನು ತಪ್ಪಿಸಿಕೊಂಡಿದ್ದು ಕೋಲಾರ ತಾಲೂಕಿನ ಬೀಚಗೊಂಡನಹಳ್ಳಿಯ ವೆಂಕಟೇಶ್(35). ವೆಂಕಟೇಶ್‌ರ ದೇಹದ ಮೇಲೆ ಗಡ್ಡೆಗಳು ಬೆಳೆದ ಸಮಸ್ಯೆಯಿಂದಾಗಿ ಆತನನ್ನು ಕಳೆದ ಮಂಗಳವಾರ ನಗರದ ಆರ್. ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವೈದ್ಯರು ಆತನಿಗೆ ಶಸ್ತ್ರಚಿಕಿತ್ಸೆ ನಡೆಸಿದ್ದರು. ಶಸ್ತ್ರಚಿಕಿತ್ಸೆ ನಂತರ ಆತನಿಗೆ ಟ್ಸ್ ಬರುವ ಲಕ್ಷಣಗಳು
ಕಾಣಿಸಿಕೊಂಡಿದ್ದವು. ಜೊತೆಗೆ ರಕ್ತ ವಾಂತಿಯೂ ಆಗಿತ್ತು. ಇದರಿಂದ ವೆಂಕಟೇಶ್‌ರನ್ನು ತೀವ್ರ ನಿಗಾ ಕೊಠಡಿಗೆ ಸ್ಥಳಾಂತರಿಸಿ ಚಿಕಿತ್ಸೆಯನ್ನು ಹೆಚ್ಚಿಸಲಾಗಿತ್ತು. ಆದರೆ ಅಧಿಕ ವೈದ್ಯಕೀಯ ವೆಚ್ಚ ಭರಿಸಲಾಗದ ವೆಂಕಟೇಶನ
ಸಂಬಂಧಿಕರು ಚಿಕಿತ್ಸೆಯನ್ನು ರದ್ದುಪಡಿಸಿ ವೆಂಕಟೇಶ್‌ರನ್ನು ಮನೆಗೆ ಕರೆದೊಯ್ಯುವುದಾಗಿ ಹೇಳಿದ್ದಾರೆ. ವೆಂಕಟೇಶ್
ರಿಗೆ ಅಳವಡಿಸಿರುವ ಕೃತಕ ಉಸಿರಾಟ ವ್ಯವಸ್ಥೆಯನ್ನು ತೆಗೆದರೆ ಆತ ಸಾವನ್ನಪ್ಪುವ ಬಗ್ಗೆ ವೈದ್ಯರು ಎಚ್ಚರಿಸಿದ್ದಾರೆ. ಆದರೂ ವೈದ್ಯಕೀಯ ವೆಚ್ಚ ಭರಿಸಲಾಗದ ಸ್ಥಿತಿಯಲ್ಲಿದ್ದ ವೆಂಕಟೇಶ್ ಸಂಬಂಧಿಕರು ಆತನ ದೇಹವನ್ನು
ವಾಹನವೊಂದರಲ್ಲಿ ಗುರುವಾರ ಬೀಚಗೊಂಡನಹಳ್ಳಿಗೆ ತೆಗೆದು ಕೊಂಡು ಹೋಗುತ್ತಿದ್ದರು.
ಮನೆಗೆ ಕರೆದೊಯ್ಯುವ ದಾರಿ ಮಧ್ಯೆ ವೆಂಕಟೇಶನ ಉಸಿರು ನಿಂತು, ದೇಹ ತಣ್ಣಗಾಗಿತ್ತು. ವೆಂಕಟೇಶ್ ನಿಧನರಾದರೆಂದು ತೀರ್ಮಾನಿಸಿದ ಕುಟುಂಬದವರು ಆತನ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಬಂಧುಬಳಗವೆಲ್ಲಾ ಬಂದಿತ್ತು. ದಫನ ಮಾಡಲು ಗುಣಿಯನ್ನೂ ತೆಗೆಯಲಾಗಿತ್ತು.
ಆದರೆ, ಬೀಚಗೊಂಡನಹಳ್ಳಿ ಮಾರ್ಗ ಮಧ್ಯದ ರಸ್ತೆಉಬ್ಬಿನಲ್ಲಿ ವಾಹನ ಕುಲುಕಿದಾಗ ವೆಂಕಟೇಶ್‌ರ ದೇಹವೂ ಕುಲುಕಿದೆ. ನಂತರ ಸಿಕ್ಕಿದ ಇನ್ನೊಂದು ರಸ್ತೆಉಬ್ಬಿನಲ್ಲಿ ವಾಹನ ಮತ್ತೆ ಜೋರಾಗಿ ಕುಲುಕಿದಾಗ ವೆಂಕಟೇಶನ ದೇಹದಲ್ಲಿ ಉಸಿರಾಟ ಆರಂಭವಾಗಿದೆ.
ಇದನ್ನು ಗಮನಿಸಿದ ಸಂಬಂಧಿಕರು ವೆಂಕಟೇಶ್‌ರನ್ನು ಎಚ್.ಕ್ರಾಸ್‌ನಲ್ಲಿರುವ ಕ್ಲಿನಿಕ್‌ನ ವೈದ್ಯರಿಗೆ ತೋರಿಸಿದ್ದಾರೆ. ವೈದ್ಯರು ಉಸಿರಾಟ ಇರುವುದನ್ನು ದೃಢಪಡಿಸಿದ್ದಾರೆ. ಆಗ ಎಚ್ಚೆತ್ತುಕೊಂಡ ಸಂಬಂಧಿಕರು ವೆಂಕಟೇಶ್‌ರ ದೇಹವನ್ನು ಅದೇ ವಾಹನದಲ್ಲಿ ಯಲಹಂಕದ ಶುಶ್ರೂತ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ವೆಂಕಟೇಶ್ ಅಲ್ಲಿ ಸ್ವಲ್ಪ$
ಮಟ್ಟಿಗೆ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ವೆಂಕಟೇಶ್ ದೇಹದ ಅಂತ್ಯಸಂಸ್ಕಾರಕ್ಕೆ ತೋಡಿದ್ದ ಗುಳಿಯನ್ನು ಕೋಳಿಯೊಂದನ್ನು ಜೀವಂತವಾಗಿ ಹಾಕಿ ಮುಚ್ಚಿ ಸಂಸ್ಕಾರ ಮಾಡಲಾಗಿದೆ. ವೆಂಕಟೇಶ್‌ರ ಅಂತ್ಯ ಸಂಸ್ಕಾರಕ್ಕೆ ಆಗಮಿಸಿದ್ದ ಬಂಧು ಬಳಗದವರು ವೆಂಕಟೇಶ್ ಚೇತರಿಸಿಕೊಳ್ಳುತ್ತಿರುವ ಸುದ್ದಿ ತಿಳಿದು ಸಂತಸದಿಂದ ಮನೆಗಳಿಗೆ ವಾಪಸ್ಸಾದರು.
-ಉದಯವಾಣಿ