ಕರ್ನಾಟಕ

ರಾಜ್ಯಸಭೆಗೆ ನಡೆದ ಮತದಾನದ ವೇಳೆ ಡಿಕೆಶಿ-ರೇವಣ್ಣ ಜಟಾಪಟಿ ! ವಾಗ್ವಾದ,ಮಾತಿನ ಚಕಮಕಿಗೆ ಕಾರಣ….?

Pinterest LinkedIn Tumblr

dk-hd

ಬೆಂಗಳೂರು: ರಾಜ್ಯಸಭೆಗೆ ನಡೆದ ಮತದಾನದ ವೇಳೆ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮತ್ತು ಜೆ.ಡಿಎಸ್‌ನ ಹಿರಿಯ ನಾಯಕ ಹೆಚ್,ಡಿ ರೇವಣ್ಣ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ,ಮಾತಿನ ಚಕಮಕಿ ಹಾಗು ಧಾರಾಳವಾಗಿ ಏಕವಚನ ಪದ ಬಳಕೆಯಾದ ಘಟನೆಗೆ ಮತದಾನ ಕೇಂದ್ರ ಸಾಕ್ಷಿಯಾಯಿತು.

ಬೆಳಿಗ್ಗೆ ೧೧.೧೦ ಸುಮಾರಿಗೆ ಗುಲ್ಬರ್ಗಾದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ.ರಾಮಕೃಷ್ಣ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರ ಸಹಾಯಕರಾಗಿ ವಿಧಾನಪರಿಷತ್ ಸದಸ್ಯ ಗೋವಿಂದ್‌ರಾಜ್ ಚುನಾವಣಾಧಿಕಾರಿಗಳಿಗೆ ವೈದ್ಯರ ನೀಡಿರುವ ಪ್ರಮಾಣ ಪತ್ರ ತೋರಿಸಿ ಮತಚಲಾಯಿಸಲು ಬರುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಪಕ್ಷದ ಏಜೆಂಟ್ ಹೆಚ್.ಡಿ ರೇವಣ್ಣ, ಇವರೇನು ಮತದಾರರೇ ಇಲ್ಲ ಏಜೆಂಟರೇ ಇವರ್‍ಯಾಕೆ ಒಳಬಂದರು ಎಂದು ಚುನಾವಣಾಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಅದೇ ವೇಳೆಗೆ ಪಕ್ಷೇತರ ಶಾಸಕರೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿದ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಕಂಡು ಮತ್ತಷ್ಟು ಏರಿದ ಧ್ವನಿಯಲ್ಲಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದರು. ಆಗ ಶಿವಕುಮಾರ್,ನಿಂದೇನಯ್ಯಾ ಅವರು ಯಾರಿಗೆ ಮತ ಹಾಕಲು ಹೇಳಿದ್ದಾರೆಯೋ ಅವರಿಗೆ ಮತ ಹಾಕುತ್ತಾರೆ ಬಿಡಿ, ರಾಮಕೃಷ್ಣ ಅವರಿಗೆ ಆರೋಗ್ಯ ಸರಿಯಲ್ಲ. ಮತ ಹಾಕಲು ಅವರ ಕೈ ನಡುಗುತ್ತಿದೆ. ಇದಕ್ಕಾಗಿ ವೈದ್ಯರಿಂದ ಪ್ರಮಾಣ ಪತ್ರ ತಂದಿದ್ದಾರೆ ಎಂದು ತಿರುಗೇಟು ನೀಡಿದರು.

ಅದಕ್ಕೆ ಪ್ರತಿಯಾಗಿ ರೇವಣ್ಣ, ಇದನ್ನು ಕೇಳಲು ನೀನೇನು ಪಕ್ಷದ ಏಜೆಂಟಾ ಎಂದು ಶಿವಕುಮಾರ್ ಅವರನ್ನು ಪ್ರಶ್ನಿಸಿದರು ಅಲ್ಲದೇ ಕಾಂಗ್ರೆಸ್ ಪಕ್ಷದ ಏಜೆಂಟ್ ಬೋಸ್‌ರಾಜ್, ಶಿವಕುಮಾರ್ ಅವರೂ ಕೂಡ ಏಜೆಂಟರೇ ಎಂದರು.ಇದಕ್ಕೆ ಸಮಾಧಾನಗೊಳ್ಳದೆ ರೇವಣ್ಣ ನಕಲಿ ಪ್ರಮಾಣ ಪತ್ರ ತರಲಾಗಿದೆ, ಮತದಾನ ಮಾಡಲು ಸಾಧ್ಯವಿಲ್ಲ ಎಂದು ಬಿಗಿ ಪಟ್ಟು ಹಿಡಿದರು.

ಇದರಿಂದ ಮತ್ತಷ್ಟು ಕೆಂಡಮಂಡಲರಾದ ಸಚಿವ ಶಿವಕುಮಾರ್, ರೇವಣ್ಣ ಅವರ ಜೊತೆ ವಾಗ್ವಾದಕ್ಕಿಳಿದು,ನಿನ್ನದೇನು ತಕರಾರು,ಅದ್ಯಾಕೋ ಹೀಗೆ ಆಡ್ತಿಯಾ..ಯಾರಿಗೆ ಹೇಳಿದ್ದಾರೋ ಅವರಿಗೆ ಮತಹಾಕುತ್ತಾರೆ ಸುಮ್ಮನೆ ಇರಯ್ಯಾ ಎಂದು ಹೇಳಿದರು ಇದಕ್ಕೆ ಪ್ರತಿಯಾಗಿ ರೇವಣ್ಣ ಪ್ರತಿ ಆಕ್ಷೇಪಿಸಿ ಶಿವಕುಮಾರ್ ವಿರುದ್ದ ಏಕವಚನ ಪದ ಪ್ರಯೋಗ ಮಾಡಿದರು.

ಇಬ್ಬರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯುತ್ತಿದ್ದಂತೆ ಚುನಾವಣಾಧಿಕಾರಿಗಳು ಆಗಮಿಸಿ ಸಮಾಧಾನ ಮಾಡುವ ಯತ್ನ ನಡೆಸಿದರು.ಗಲಾಟೆ ವಾಗ್ವಾದ ಕೇಳಿದ ವಿಧಾನಸೌಧದ ಇತರೆ ಕೊಠಡಿಗಳಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂಧಿ ಸೇರಿದಂತೆ ಸುತ್ತ ಮುತ್ತಲ ಜನರು ಸೇರಿಕೊಂಡರು.ಇದರಿಂದ ಗೊಂದಲದ ಗೂಡಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಲ್ಲಿದ್ದವರನ್ನು ಚದುರಿಸುವ ಕೆಲಸ ಮಾಡಿದರು.

ಮತಕೇಂದ್ರದ ಒಳಗೆ ಶಿವಕುಮಾರ್ ಮತ್ತು ರೇವಣ್ಣ ಅವರ ಮಧ್ಯೆ ಮಾತಿನ ಚಕಮಕಿ ಮುಂದುವರಿದಿತ್ತು.

ಮತಕೇಂದ್ರದಿಂದ ಹೊರಗೆ ಬಂದ ಶೀವಕುಮಾರ್ ಮತ್ತು ರೇವಣ್ಣ ನಡುವೆ ಏನೂ ಆಗಿಲ್ಲ ಎಂಬಂತೆ ಇಬ್ಬರೂ ನಾಯಕರು ಕೈ ಕೈ ಹಿಡಿದುಕೊಂಡು ತಮಾಷೆ ಮಾಡುತ್ತಾ ಹೆಗಲ ಮೇಲೆ ಕೈ ಹಾಖಿಕೊಂಡು ನಗುತ್ತಾ ಮಾತನಾಡುತ್ತಿದ್ದನ್ನು ಕಂಡ ಅನೇಕ ಶಾಸಕರು ನಿಬ್ಬೆರಗಾದರು..

Comments are closed.