ಕರ್ನಾಟಕ

ನಕಲಿ ಮದ್ಯ ಮಾರಾಟ ಮಾಡುತ್ತಿದ್ದ 8 ಮಂದಿ ಬಂಧನ

Pinterest LinkedIn Tumblr

nnnಮೈಸೂರು,ಜೂ.8-ನಕಲಿ ಮದ್ಯಕ್ಕೆ ಪ್ರತಿಷ್ಠಿತ ಮದ್ಯ ಕಂಪನಿಗಳ ಲೇಬಲ್‌ಗಳನ್ನು ಅಳವಡಿಸಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ ಬೆಂಗಳೂರಿನ ಪ್ರಮುಖ ಆರೋಪಿ ಸೇರಿದಂತೆ ಎಂಟು ಮಂದಿಯನ್ನು ಜಿಲ್ಲಾ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಹಾಗೂ ಹೊರರಾಜ್ಯಗಳಿಗೆ ನಕಲಿ ಮದ್ಯ ಸರಬರಾಜಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಶ್ರೀಕಾಂತ್ ಬೆಂಗಳೂರಿನಲ್ಲಿರುವುದನ್ನು ಪತ್ತೆಹಚ್ಚಿ ಈತನೂ ಸೇರಿದಂತೆ ವೆಂಕಟೇಶ್, ಮನು, ಕೃಷ್ಣ , ಸುರೇಶ್, ಪ್ರತಾಪ್, ಸತೀಶ್ ಮತ್ತು ಕೃಷ್ಣ ಎಂಬುವರನ್ನು ಬಂಧಿಸಿದ್ದಾರೆ.

ಶ್ರೀಕಾಂತ್‌ನನ್ನು ತೀವ್ರ ವಿಚಾರಣೆಗೊಳಪಡಿಸಿ ಚಿಕ್ಕಬಳ್ಳಾಪುರದಲ್ಲಿ ಸಂಗ್ರಹಿಸಿಟ್ಟಿದ್ದ ವಿವಿಧ ಮದ್ಯ ಕಂಪನಿಗಳ 32 ಸಾವಿರಕ್ಕೂ ಹೆಚ್ಚು ಮುಚ್ಚಳ ಹಾಗೂ ಲೇಬಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮುಚ್ಚಳ ಹಾಗೂ ಲೇಬಲ್‌ಗಳು ಮುಂಬೈನಲ್ಲಿ ತಯಾರಾಗುತ್ತಿದ್ದ ಬಗ್ಗೆ ಅಬಕಾರಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಮುಚ್ಚಳ ಹಾಗೂ ಲೇಬಲ್‌ಗಳನ್ನು ಬಳಸಿ ಖಾಲಿ ಬಾಟಲ್‌ಗಳಿಗೆ ನಕಲಿ ಮದ್ಯ ತುಂಬಿ ಅಸಲಿ ಮದ್ಯವೆಂಬಂತೆ ಬಿಂಬಿಸಿ ಮಾರುಕಟ್ಟೆಗಳಿಗೆ ಬಿಡಲಾಗುತಿತ್ತು ಎಂಬ ಅಂಶವೂ ಸಹ ತಿಳಿದುಬಂದಿದೆ.

ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ಗೋವಾಗಳಿಗೆ ನಕಲಿ ಮದ್ಯ ಹಾಗೂ ಸಾಮಾಗ್ರಿಗಳನ್ನು ಸಾಗಾಣೆ ಮಾಡುತ್ತಿದ್ದುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ನಕಲಿ ಮುಚ್ಚಳ ಹಾಗೂ ಲೇಬಲ್‌ಗಳನ್ನು ತಾಲ್ಲೂಕು ಕೇಂದ್ರಗಳಿಗೂ ವಿತರಿಸುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು , ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.

Comments are closed.