ಕರ್ನಾಟಕ

ಚುನಾವಣೆಯೋ ರದ್ದತಿಯೋ

Pinterest LinkedIn Tumblr

parliment-election

ಬೆಂಗಳೂರು, ಜೂ. ೮- ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಗಳು ನಡೆಯುವ/ ನ‌ಡೆಯದಿರುವ ಅನಿಶ್ಚತೆಯ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹಾಗೂ ಪಕ್ಷೇತರ ಶಾಸಕರಿಗೆ ನಾಳೆ ಔತಣಕೂಟ ಆಯೋಜಿಸಿದ್ದಾರೆ.
ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಯ ಮತದಾನಕ್ಕೂ ಮುನ್ನಾ ದಿನ ರಾತ್ರಿ ಕಾಂಗ್ರೆಸ್ ಶಾಸಕರಿಗೆ ಔತಣಕೂಟವನ್ನು ಮುಖ್ಯಮಂತ್ರಿ ಆಯೋಜಿಸಿದ್ದಾರೆ. ಈ ಔತಣಕೂಟಕ್ಕೆ ಪಕ್ಷೇತರ ಶಾಸಕರಿಗೂ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ತಂತ್ರರೂಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಔತಣಕೂಟದ ನೆಪದಲ್ಲಿ ಎಲ್ಲಾ ಶಾಸಕರನ್ನು ಒಂದೆಡೆ ಸೇರಿಸಿ ಚುನಾವಣೆಗೆ ಸಂಬಂಧಪಟ್ಟಂತೆ ಕೆಲ ಸಲಹೆ ಸೂಚನೆ ನೀಡಲಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಮತ ಹಾಕಲು ಸಿದ್ಧವಾಗಿರುವ ಪಕ್ಷೇತರ ಶಾಸಕರನ್ನು ಈ ಔತಣಕೂಟಕ್ಕೆ ಆಹ್ವಾನಿಸಿ ಅವರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಲಿದ್ದಾರೆ.
ವಿಧಾನ ಪರಿಷತ್‌ಗೆ ಜೂನ್ 10ರಂದು, ರಾಜ್ಯಸಭೆಗೆ ಜೂನ್ 11ರಂದು ಮತದಾನ ನಡೆಯಲಿದ್ದು, ಅದನ್ನು ಒಂದು ದಿನ ಮೊದಲೇ ಅಂದರೆ ಜೂನ್ 9ರ ರಾತ್ರಿ ಈ ಕಾಂಗ್ರೆಸ್ ಶಾಸಕರ ಔತಣಕೂಟ ನಡೆಯಲಿದೆ.
ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಸಮಗ್ರ ಮಾಹಿತಿ ಪಡೆದಿದ್ದು, ಇಂದು ಸಂಜೆಯೊಳಗೆ ಚುನಾವಣಾ ಆಯೋಗ ಚುನಾವಣೆ ನಿಗದಿಯಂತೆ ನಡೆಯಲಿದೆಯೋ? ಅಥವಾ ಮುಂದೂಡಲಾಗುತ್ತದೋ ಎಂಬ ಬಗ್ಗೆ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.
ಈ ಚುನಾವಣೆಗೆ ಸಂಬಂಧಿಸಿದಂತೆ ಖಾಸಗಿ ಚಾನಲ್ ನಡೆಸಿದ ಕುಟುಕು ಕಾರ್ಯಾಚರಣೆ ಸೇರಿದಂತೆ ಎಲ್ಲ ಸಮಗ್ರ ವರದಿ ಕೇಂದ್ರ ಚುನಾವಣಾ ಆಯೋಗದ ಕೈ ಸೇರಿದ್ದು, ನಿನ್ನೆ ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಸಭೆ ನಡೆಸಿ ಈ ಬಗ್ಗೆ ಸಮಾಲೋಚನೆ ನಡೆಸಿದರಾದರೂ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ, ಇಂದು ಮತ್ತೆ ಸಭೆ ಸೇರಿ ಚರ್ಚಿಸಿ ತೀರ್ಮಾನ ಪ್ರಕಟಿಸಲಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈಗೆ ರೆಸಾರ್ಟ್ ಯಾತ್ರೆ ನಡೆಸಿದ್ದ 7 ಮಂದಿ ಪಕ್ಷೇತರ ಶಾಸಕರು ಮುಂಬೈನಿಂದ ನಿನ್ನೆ ಸಂಜೆಯೇ ಮರಳಿದ್ದು, ಇವರನ್ನು ಮುಂಬೈಗೆ ಕರೆದೊಯ್ಯುವ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜ್ ಹಾಗೂ ಮುನಿರತ್ನ ಇಂದು ಶಿರಡಿಗೆ ತೆರಳಿದ್ದು, ಸಂಜೆ ನಗರಕ್ಕೆ ವಾಪಸ್ ಆಗಲಿದ್ದಾರೆ.
ಈ ರೆಸಾರ್ಟ್ ಯಾತ್ರೆ ಬಗ್ಗೆ ಪಕ್ಷದ ಹೈಕಮಾಂಡ್ ಗರಂ ಆದ ಹಿನ್ನೆಲೆಯಲ್ಲಿ ರೆಸಾರ್ಟ್ ವಾಸ್ತವ್ಯ ಅರ್ಧಕ್ಕೆ ಮೊಟಕು ಮಾಡಲಾಗಿದೆ.

Comments are closed.