ಕರ್ನಾಟಕ

ಮುದ್ದು ಅವಳಿ ಕಂದಮ್ಮಗಳ ಹಾರೈಕೆಗೆ ತಂದೆ ನಿರ್ಲಕ್ಷೆ

Pinterest LinkedIn Tumblr

mmಚನ್ನಪಟ್ಟಣ, ಜೂ.8-ಆಕೆ ಧನಲಕ್ಷ್ಮಿ. ಅಂದಾಜು ಮೂವತ್ತು ವರ್ಷ ಪ್ರಾಯದವಳು. ತಾಲ್ಲೂಕಿನ ಮಾಕಳಿ ಗ್ರಾಮದವಳಾದ ಆಕೆಯ ವಿವಾಹ ಹೀಗೆ 9 ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಕೆಆರ್‌ಪೇಟೆ ತಾಲ್ಲೂಕಿನ ವ್ಯಕ್ತಿಯೋರ್ವನೊಂದಿಗೆ ಆಗಿತ್ತು. ಇಬ್ಬರ ದಾಂಪತ್ಯದ ಕುರುಹಾಗಿ ಇವರಿಗೆ 8 ವರ್ಷದ ಒಂದು ಹೆಣ್ಣು ಹಾಗೂ ಮೂರು ವರ್ಷದ ಗಂಡು ಮಗುವೂ ಇದೆ. ದುರಂತ ಎಂದರೆ ಪತಿ ಮಹಾಶಯ ಧನಲಕ್ಷ್ಮಿಯನ್ನು ಮಗು ಹೆರುವ ಯಂತ್ರವೆಂಬಂತೆ ಪರಿಗಣಿಸಿದನೇ ವಿನಃ ಆಕೆಯ ಹಿತಕಾಯುವ ಕೆಲಸವನ್ನು ಒಂದು ದಿನವೂ ಮಾಡಲಿಲ್ಲ.

ಇದರಿಂದ ರೋಸಿ ಹೋದ ಧನಲಕ್ಷ್ಮಿ ಎರಡು ವರ್ಷಗಳ ಹಿಂದೆ ತವರಿಗೆ ಬಂದು ಬಿಟ್ಟಳು. ಇತ್ತ ಪತಿ ಮಹಾಶಯ ಬೇಕೆನಿಸಿದಾಗ ಮಾಕಳಿಗೆ ಬಂದು ಹೋಗುತ್ತಿದ್ದ. ಕಳೆದ ಬಾರಿ ಇದೇ ರೀತಿ ಅವನು ಇಲ್ಲಿಗೆ ಬಂದಾಗ ಪತ್ನಿ ಗರ್ಭಿಣಿಯಾಗಿರುವ ವಿಚಾರ ತಿಳಿದವನು ಅಲ್ಲಿಗೆ ಬರುವುದನ್ನೇ ನಿಲ್ಲಿಸಿಬಿಟ್ಟ. ಇಂತಹ ಬೆಳವಣಿಗೆಯಿಂದ ಕಂಗಾಲಾದ ಧನಲಕ್ಷ್ಮಿ ಇಂತಹ ಬಡತನದಲ್ಲಿ ಮತ್ತೊಂದು ಮಗುವನ್ನು ಹೆತ್ತು ಸಾಕಲು ಅಸಾಧ್ಯ ಎಂದು ಯೋಚಿಸಿದವಳು ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರ ಮಾಡಿದಳು.

ಈ ಕಾರಣಕ್ಕಾಗಿ ವೈದ್ಯರನ್ನು ಭೇಟಿ ಮಾಡಿದಾಗ ಗರ್ಭದಲ್ಲಿ ಮಗು ಸಾಕಷ್ಟು ಬೆಳವಣಿಗೆಯಾಗಿರುವುದರಿಂದ ಗರ್ಭಪಾತ ಸಾಧ್ಯವಿಲ್ಲ ಎಂದು ಆಕೆಗೆ ತಿಳಿ ಹೇಳಿದರು. ಇದಾದ ನಂತರ ಜಿಲ್ಲಾ ಆಸ್ಪತ್ರೆಗೆ ತೆರಳಿದ ಧನಲಕ್ಷ್ಮಿ ಅಲ್ಲಿನ ಮಹಿಳಾ ವೈದ್ಯರಿಂದ ತಪಾಸಣೆಗೊಳಗಾಗುತ್ತಿದ್ದಳು. ಈ ಮಧ್ಯೆ ಆಕೆಗೆ ಹೆರಿಗೆ ನೋವು ಕಾಡತೊಡಗಿದಾಗ ಅದೇ ಸರ್ಕಾರಿ ವೈದ್ಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಹೆರಿಗೆ ಮಾಡಿಸಿಕೊಳ್ಳುವಂತೆ ಉಚಿತ ಸಲಹೆ ನೀಡಿದರು.

ಕೈಯಲ್ಲಿ ಬಿಡಿಗಾಸಿಲ್ಲದಿದ್ದರೂ ಮೇ.22ರಂದು ರಾಮನಗರದ ಭಾವನ ಆಸ್ಪತ್ರೆಗೆ ದಾಖಲಾದ ಧನಲಕ್ಷ್ಮಿಗೆ ಅಲ್ಲಿನ ವೈದ್ಯರು ಸಿಸೇರಿಯನ್ ಆಪರೇಷನ್ ಮೂಲಕ ಹೆರಿಗೆ ಮಾಡಿದ್ದು ಅವಳಿಗಂಡು ಮಕ್ಕಳು ಹುಟ್ಟಿದವು. ಅವುಗಳು ಹುಟ್ಟಿದ್ದು ಕೆಲಕಾಲ ಧನಲಕ್ಷ್ಮಿ ಬಡತನ, ಆಸ್ಪತ್ರೆಗೆ ಭರಿಸಬೇಕಾದ ಶುಲ್ಕ ಎಲ್ಲವನ್ನು ಮರೆಸಿತ್ತು. ಆಸ್ಪತ್ರೆಯಿಂದ ಡಿಸ್‌ಛಾರ್ಜ್ ಆಗುವ ದಿನದಂದು ಆಸ್ಪತ್ರೆಯವರು 20 ಸಾವಿರ ರೂಪಾಯಿ ಪಾವತಿಸುವಂತೆ ಸೂಚಿಸಿದಾಗ ಕಂಗಾಲಾದಳು.

ಆದರೆ ಇದನ್ನೇ ಕಾಯುತ್ತಿದ್ದಂತೆಯೇ ಆಕೆಯ ಪಕ್ಕದ ಹಾಸಿಗೆಯಲ್ಲಿದ್ದ ವ್ಯಕ್ತಿಯೋರ್ವರು ನನ್ನ ಸಂಬಂಧಿಗಳಿಗೆ ಮಗುಬೇಕಿದ್ದು ನೀನು ನಿನ್ನ ಮಕ್ಕಳನ್ನು ಕೊಟ್ಟು ಬಿಡು ನಿನ್ನ ಸಮಸ್ಯೆ ಪರಿಹಾರವಾಗಲಿದೆ ಎಂದೇಳಿದಾಗ ಆನಂದ ತುಂದಿಲಳಾದ ಧನಲಕ್ಷ್ಮಿ 20 ಸಾವಿರ ರೂಪಾಯಿ ಪಡೆದು ಮಾಗಡಿ ತಾಲ್ಲೂಕು ಸೋಲೂರಿನ ಆ ಮಹಾಶಯರಿಗೆ ಕೊಟ್ಟು ಬಿಟ್ಟಿದ್ದಾಳೆ. ಇಂತಹುದೊಂದು ಅಮಾನವೀಯ ಅಂತಃಕರಣ ಕಲಕುವ ವಿಚಾರ ತಿಳಿದ ತಾಲ್ಲೂಕಿನ ಅಂಗನವಾಡಿಕಾರ್ಯಕರ್ತೆಯರು ಧನಲಕ್ಷ್ಮಿ ಮಾಡಿರುವ ಕೃತ್ಯಕ್ಕೆ ಆಗಲಿರುವ ಶಿಕ್ಷೆಯ ಕುರಿತು ವಿವರಿಸಿದಾಗ ಕಂಗಾಲಾದ ಆಕೆ ಸೋಲೂರಿಗೆ ತೆರಳಿ ತನ್ನ ಎರಡು ಕುಡಿಗಳನ್ನು ಎದೆಗವಚಿಕೊಂಡು ಮೇ 27ರಂದು ಮಾಕಳಿಗೆ ತಂದಿದ್ದಾಳೆ.

ಈ ವಿಚಾರ ತಿಳಿಯುತ್ತಿದ್ದಂತೆಯೇ ಜಿಲ್ಲಾ ಮಕ್ಕಳ ಸಮಿತಿಯವರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾರ್ಯಚರಣೆಗಿಳಿದು ಧನಲಕ್ಷ್ಮಿಯ ವರ್ತನೆ ಸಾಧುವಲ್ಲ ಎಂದು ತಿಳಿ ಹೇಳಿದ್ದಾರೆ. ಇದೀಗ ಇನ್ನೂ ಎದೆಹಾಲು ಕುಡಿಯುತ್ತಿರುವ ಆ ಕಂದಮ್ಮಗಳು ಹೆತ್ತಬ್ಬೆಯನ್ನು ಅವುಚಿ ಮಲಗಿದರೆ ಇತ್ತ ತಾನು ಮಾಡಿದ ಪ್ರಮಾದಕ್ಕಾಗಿ ಧನಲಕ್ಷ್ಮಿ ಕಣ್ಣೀರು ಸುರಿಸುತ್ತಿದ್ದಾಳೆ ಅತ್ತ ಧನಲಕ್ಷ್ಮಿಯನ್ನು ವಿವಾಹವಾದ ಸಾಧಕ ಇನ್ನೂ ಇತ್ತ ತಿರುಗಿ ನೋಡದಿದ್ದು ಅದೆಲ್ಲಿ ಅಲೆದಾಡಿಕೊಂಡಿದ್ದಾನೋ ಗೊತ್ತಿಲ್ಲ.

Comments are closed.