ಕರ್ನಾಟಕ

ಕಾಂಗ್ರೆಸ್, ಬಿಜೆಪಿ ರೆಸಾರ್ಟ್ ರಾಜಕೀಯದ ಬಗ್ಗೆ ದೇವೇಗೌಡರು ಆಕ್ರೋಶ

Pinterest LinkedIn Tumblr

dಬೆಂಗಳೂರು,ಜೂ.8-ಪಕ್ಷೇತರ ಶಾಸಕರನ್ನು ಮುಂಬೈಗೆ ಕರೆದೊಯ್ದು ರೆಸಾರ್ಟ್ ರಾಜಕೀಯ ಮಾಡುತ್ತಿರುವುದು, ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡುತ್ತಿರುವುದು ಕುದುರೆ ವ್ಯಾಪಾರವಲ್ಲದೆ ಕತ್ತೆ ವ್ಯಾಪಾರವೇ ಎಂದು ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಚುನಾವಣಾ ಆಯೋಗ ಈ ಎಲ್ಲ ಬೆಳವಣಿಗೆಗಳನ್ನು ಕಣ್ತೆರೆದು ನೋಡಬೇಕೆಂದು ಆಗ್ರಹಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿ, ರಾಜ್ಯಸಭಾ ಚುನಾವಣೆಯಲ್ಲಿ ಕೇವಲ 32 ಹೆಚ್ಚುವರಿ ಮತಗಳಿದ್ದರೂ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಜೆಡಿಎಸ್ ಪಕ್ಷದ ಬಳಿ 40 ಮತಗಳಿವೆ. ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂಬುದನ್ನು ಆಯೋಗ ಗಮನಿಸಲಿ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ಮೇಲಿಂದ ಮೇಲೆ ನೋವಾಗುತ್ತಿದೆ. ಎಷ್ಟೆಂದು ಸಹಿಸಿಕೊಳ್ಳಲಿ ಎಂದು ದೇವೇಗೌಡರು ನೋವು ತೋಡಿಕೊಂಡರು. ವಿಜಯ್ ಮಲ್ಯ ಅವರನ್ನು ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆ ಮಾಡಿದಾಗ ಜೆಡಿಎಸ್ ಪಕ್ಷದ ಸದಸ್ಯರು ಕೇವಲ ನಾಲ್ಕು ಮಂದಿ ಇದ್ದರು. ಜೆಡಿಯು ಸದಸ್ಯರು 21 ಮಂದಿ ಇದ್ದರು. ಆದರೆ ಈಗ ದೇಶಾದ್ಯಂತ ಜೆಡಿಎಸ್ ಪಕ್ಷದ ಮಾನ ಹರಾಜು ಹಾಕಲಾಗುತ್ತಿದೆ. ನಾನು ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ, ಛಲದಿಂದ ಹೋರಾಡುತ್ತೇನೆ, ಚುನಾವಣೆ ಸಂಬಂಧ ಎರಡು ವಾರಗಳ ಬೆಳವಣಿಗೆ ತುಂಬ ನೋವು ತಂದಿದೆ.

ಚುನಾವಣೆ ಮುಂದೂಡುವಂತೆ ಕೆಲವರು ದೂರು ನೀಡಿದರೆ, ಕಾಂಗ್ರೆಸ್ ಪಕ್ಷದವರು ಚುನಾವಣೆ ನಡೆಸುವಂತೆ ಆಯೋಗದ ಮೇಲೆ ಒತ್ತಡ ತಂದಿದ್ದಾರೆ ಎಂದರು. ರಾಜ್ಯದಲ್ಲಿ ಲೋಕಾಯುಕ್ತ , ಲೋಕಸೇವಾ ಆಯೋಗ ನಾಶವಾಗಿದೆ. ಲೋಕ ಸೇವಾ ಆಯೋಗಕ್ಕೆ ಶಾಮ್‌ಭಟ್ ಅವರನ್ನು ನೇಮಕ ಮಾಡಲು ಹೊರಟಿರುವುದು ಅಸಹ್ಯ ಹುಟ್ಟಿಸಿದೆ. ಸರ್ಕಾರಕ್ಕೆ ಕಿಂಚಿತ್ತೂ ಗೌರವವಿಲ್ಲ ಎಂದು ಗುಡುಗಿದ ಗೌಡರು, ಪಕ್ಷೇತರ ಶಾಸಕರನ್ನು ಮುಂಬೈಗೆ ಕಳುಹಿಸಿದವರು ಯಾರು?ಯಾರು ಯಾರ ಜೊತೆ ಹೋಗಿದ್ದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದರು.

ಕೇಂದ್ರ ಸರ್ಕಾರ ವಿದೇಶದಿಂದ ಕಪ್ಪು ಹಣ ತರುವ ಪ್ರಯತ್ನ ಮಾಡುತ್ತಿದೆ. ಅದಕ್ಕಿಂತ ಡಿ.ಕೆ.ಶಿವಕುಮಾರ್ ಅವರನ್ನು ಹುಡುಕಲಿ ಎಲ್ಲ ಸಂಪತ್ತು ಇಲ್ಲೇ ಸಿಗುತ್ತದೆ. ಬೇಕಾದರೆ ನಮ್ಮನ್ನೂ ಶೋಧಿಸಲಿ ಎಂದು ಸವಾಲು ಹಾಕಿದರು. ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ನಾನು ಹೋರಾಟ ಮಾಡುತ್ತೇನೆ, ಯಾರ ಮನೆಬಾಗಿಲಿಗೂ ಹೋಗುವುದಿಲ್ಲ. ಕುಟುಕು ಕಾರ್ಯಾಚರಣೆಯಲ್ಲಿ ಇರುವ ನಮ್ಮ ಪಕ್ಷದ ಜಿ.ಟಿ.ದೇವೇಗೌಡರು ಪ್ರಕರಣವನ್ನು ಸಿಬಿಐ ಮೂಲಕ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ನಮ್ಮ ಪಕ್ಷದಲ್ಲಿ ನಾಲ್ಕೈದು ಶಾಸಕರನ್ನು ಹೊರತುಪಡಿಸಿದರೆ ಎಲ್ಲರೂ ಎಚ್.ಡಿ.ಕುಮಾರಸ್ವಾಮಿ ಜೊತೆಯಲ್ಲಿದ್ದಾರೆ ಎಂದರು.

ಈ ದೇವೇಗೌಡ ಮತ್ತು ಕುಮಾರಸ್ವಾಮಿ(ಅಪ್ಪ-ಮಕ್ಕಳು)ಯವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಅವರ ಮೇಲೆ 150 ಕೋಟಿ ರೂ. ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಆಗ ವಿಧಾನಸೌಧದ ಕಾರಿಡಾರ್‌ನಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಆಪರೇಷನ್ ಸಕ್ಸಸ್ ಎಂದು ಹೇಳಿದ್ದನ್ನೂ ನಾನು ಕೇಳಿದ್ದೇನೆ. ಚಲುವರಾಯಸ್ವಾಮಿ ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಜೂನ್.12ರಂದು ನಡೆಯಲಿರುವ ಸಭೆಯಲ್ಲಿ ಬಂಡಾಯಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅನುಪಮಾ ಶೆಣೈ ರಾಜೀನಾಮೆ ಸಂಬಂಧ ಪ್ರತಿಕ್ರಿಯೆ ನೀಡಿದ ಗೌಡರು, ಹಿರಿಯ ಅಧಿಕಾರಿಗಳು ಅವರ ರಕ್ಷಣೆಗೆ ಬರಲಿಲ್ಲ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲ ಎಂದು ಹೇಳಿದರು.

Comments are closed.