ಕರ್ನಾಟಕ

ಕೆರೆಗಳ 100 ಮೀಟರ್ ಸುತ್ತಲಿನ ಜಾಗದಲ್ಲಿ ಕಟ್ಟಡ ನಿಷಿದ್ದ

Pinterest LinkedIn Tumblr

kಬೆಂಗಳೂರು, ಜೂ.8-ಕೆರೆಗಳ 100 ಮೀಟರ್ ಸುತ್ತಲಿನ ಜಾಗದಲ್ಲಿ ಯಾವುದೇ ಕಟ್ಟಡ ಇರಬಾರದು, ಇಂತಹ ಬಫರ್ ಜಾಗಗಳಲ್ಲಿ ಇರುವ ಕಟ್ಟಡಗಳ ಮಾಹಿತಿಯನ್ನು ಒಂದು ತಿಂಗಳೊಳಗೆ ಬಿಬಿಎಂಪಿ, ಬಿಡಿಎ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರ ಸರ್ವೇ ಮಾಡಿ ವರದಿ ನೀಡುವಂತೆ ಕೆರೆ ಅಧ್ಯಯನ ಸಮಿತಿ ಸೂಚಿಸಿದೆ. ಕೆ.ಬಿ.ಕೋಳಿವಾಡ ನೇತೃತ್ವದ ಸಮಿತಿಯ ಸಭೆ ನಂತರ ಮಾತನಾಡಿದ ಅವರು, ಈಗಾಗಲೇ ಸುಪ್ರೀಂಕೋರ್ಟ್‌ನ ಹಸಿರು ಪೀಠ ಕೆರೆಗಳ ಬಫರ್ ಜಾಗದಲ್ಲಿ ಕಟ್ಟಡಗಳು ತಲೆ ಎತ್ತದಂತೆ ಸೂಚನೆ ನೀಡಿದೆ.

ಅದರಂತೆ ನಗರದಲ್ಲಿರುವ ಸುತ್ತಮುತ್ತಲ ನಿಗದಿತ ಪ್ರದೇಶದಲ್ಲಿ ಯಾವುದೇ ಕಟ್ಟಡಗಳಿರಬಾರದು, ಒಂದು ವೇಳೆ ಅಲ್ಲಿ ಕಟ್ಟಡಗಳು ನಿರ್ಮಾಣ ಹಂತದಲ್ಲಿದ್ದರೆ ಅವುಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಅದಕ್ಕೆ ನೀಡಿರುವ ಎನ್‌ಒಸಿಯನ್ನು ರದ್ದು ಮಾಡಬೇಕು. ಇನ್ನು ಮುಂದೆ ಈ ಜಾಗಕ್ಕೆ ಎನ್‌ಒಸಿ ನೀಡಬಾರದು ಎಂದು ಸೂಚಿಸಿದರು. ಈಗಾಗಲೇ ನಿರ್ಮಾಣವಾಗಿರುವ ಕಟ್ಟಡಗಳನ್ನು ಒಡೆಯುವ ನಿರ್ಧಾರವನ್ನು ಸಮಿತಿ ಮಾಡಿಲ್ಲ. ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಿದ್ದೇವೆ. ಕರೆ ಒತ್ತುವರಿ ಸರ್ವೇ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ರಾಜಕಾಲುವೆಗಳ ಸರ್ವೇ ಕೂಡ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದರು.

ಬೆಂಗಳೂರಿನಲ್ಲಿ ಮನೆ ಮಾಡಿಕೊಳ್ಳುವ ಆಸೆ ಎಲ್ಲರಿಗೂ ಇರುತ್ತದೆ, ಆದರೆ ನಿವೇಶನ ಪತ್ರವನ್ನು ಖಚಿತವಾಗಿ ದೃಢಪಡಿಸಿಕೊಂಡು ನಂತರವೇ ಖರೀದಿಸಿ ಎಂದು ಸಲಹೆ ಮಾಡಿದ ಅವರು, ಈಗಾಗಲೇ ಇಂತಹ ಕೆಲವು ಕೆರೆಗಳ ಒತ್ತುವರಿ ಮಾಡಿಕೊಂಡಿರುವ ನಿವೇಶನಗಳಿಗೆ ನೀಡಿರುವ ನೋಟಿಸ್‌ಗೆ ಕೆಲವರು ಉತ್ತರ ನೀಡಿದ್ದಾರೆ, ಇನ್ನೂ ಕೆಲವರು ಉತ್ತರ ನೀಡಬೇಕಿದೆ ಎಂದು ತಿಳಿಸಿದರು. ಬಫರ್ ಜಾಗಗಳಲ್ಲಿನ ಕಟ್ಟಡ ತೆರವುಗೊಳಿಸಲು ಸುಪ್ರೀಂಕೋರ್ಟ್ ಹಸಿರು ಪೀಠ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೆರೆ ಅಧ್ಯಯನ ಸಮಿತಿ ಕೈಗೊಂಡಿರುವ ನಿರ್ಧಾರದಿಂದಾಗಿ ಜನರಲ್ಲಿ ಆತಂಕ ಉಂಟಾಗಿದೆ.

Comments are closed.