ಕರ್ನಾಟಕ

‘ಸ್ಮಾರ್ಟ್ ಸಿಟಿ ಬೆಂಗಳೂರು’ ಅಭಿಯಾನಕ್ಕೆ ಸುದೀಪ್ ರಾಯಭಾರಿ

Pinterest LinkedIn Tumblr

sಬೆಂಗಳೂರು,ಜೂ.8- ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸತತ ಪ್ರಯತ್ನ ನಡೆಸಿರುವ ಬಿಬಿಎಂಪಿ, ತಾನು ಹಮ್ಮಿಕೊಂಡಿರುವ ‘ಸ್ಮಾರ್ಟ್ ಸಿಟಿ ಬೆಂಗಳೂರು’ ಅಭಿಯಾನಕ್ಕೆ ಚಿತ್ರನಟ ಸುದೀಪ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲು ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸುದೀಪ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಸುದೀಪ್ ಅವರು ಇದಕ್ಕೆ ಸ್ಪಂದಿಸಿದ್ದು ಅವರು ರಾಯಭಾರಿಯಾಗುವುದು ಖಚಿತ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೆಡೆ ಹಲವಾರು ನಗರಗಳು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಲು ಸ್ಪರ್ಧೆಗಿಳಿದಿವೆ. ಮೊದಲ ಸುತ್ತಿನ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಬೆಂಗಳೂರಿಗೆ ದ್ವಿತೀಯ ಸುತ್ತಿನಲ್ಲಾದರೂ ಸ್ಥಾನ ಗಿಟ್ಟಿಸಲು ಬಿಬಿಎಂಪಿ ಶತಾಯಗತಾಯ ಪ್ರಯತ್ನ ನಡೆಸಿದೆ. ಅದಕ್ಕಾಗಿ ಅಭಿಯಾನ ಹಮ್ಮಿಕೊಂಡಿದ್ದು ಈಗಾಗಲೇ ಆಪ್ ಕೂಡ ಬಿಡುಗಡೆ ಮಾಡಿದೆ. ಅಭಿಯಾನದಲ್ಲಿ ಸಾರ್ವಜನಿಕರು ನೀಡುವ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಿ ಸ್ಪರ್ಧೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಬಿಬಿಎಂಪಿ ಹೊಂದಿದೆ.

ಸ್ಮಾರ್ಟ್ ಸಿಟಿ ಸ್ಪರ್ಧೆಯ ಅಭಿಪ್ರಾಯ ಸಂಗ್ರಹ ಅಭಿಯಾನದಲ್ಲಿ ಪಾಲಿಕೆ ಸದಸ್ಯರು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಲು ಆಯಾ ವಲಯ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಸಿ ಸ್ಮಾರ್ಟ್ ಸಿಟಿ ಉದ್ದೇಶ ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಬಿಬಿಎಂಪಿ ಮುಂದಾಗಿದೆ. ಜುಲೈ 10ರಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಸದಸ್ಯರ ಅಭಿಪ್ರಾಯ ಮಂಡಿಸಿ ಅನುಮೋದನೆ ಪಡೆಯಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಮಾರ್ಟ್ ಸಿಟಿ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಶಾಸಕರು, ಅವರ ಬೆಂಬಲಿಗರಿಗೂ ಮನವಿ ಮಾಡಿ ಪಾಲ್ಗೊಳ್ಳುವಂತೆ ಕೋರಲಾಗುವುದು. ಸ್ಮಾರ್ಟ್ ಸಿಟಿ ಅಭಿಯಾನಕ್ಕೆ ಉತ್ಸಾಹ ನಟ ಸುದೀಪ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಒಟ್ಟಾರೆ ಬೆಂಗಳೂರು ಸ್ಮಾರ್ಟ್ ಸಿಟಿಯಾಗಲು ಎಲ್ಲ ಪ್ರಯತ್ನವನ್ನು ಬಿಬಿಎಂಪಿ ನಡೆಸಿದೆ.

Comments are closed.