ಕರ್ನಾಟಕ

ಕತ್ತೆ ವ್ಯಾಪಾರದ ಕಾಲ : ಗೌಡರ ಗರಂ

Pinterest LinkedIn Tumblr

devegowdaಬೆಂಗಳೂರು, ಜೂ. ೮- ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಕುದುರೆ ವ್ಯಾಪಾರ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, “ಇದು ಕುದುರೆ ವ್ಯಾಪಾರ ಅಲ್ಲ ಅಂದ್ರೆ ಇದೇನು ಕತ್ತೆ ವ್ಯಾಪಾರನಾ” ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಪದ್ಮನಾಭನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಳಿ ಹೆಚ್ಚುವರಿಯಾಗಿ 32 ಮತಗಳು ಉಳಿಯುತ್ತವೆ. ಅವುಗಳನ್ನಿಟ್ಟುಕೊಂಡು ಮೂರನೇ ಅಭ್ಯರ್ಥಿಗೂ ಗೆಲುವು ತಂದುಕೊಡಬೇಕು ಎಂದು ಹೈಕಮಾಂಡ್ ಸೂಚಿಸುವುದಾದರೆ ಉಳಿದ ಶಾಸಕರ ಮತಗಳನ್ನು ಹೇಗೆ ಪಡೆಯಲು ಸಾಧ್ಯ. ಅದು ಕುದುರೆ ವ್ಯಾಪಾರ ಅಲ್ಲವೆ ಎಂದು ಪ್ರಶ್ನಿಸಿದರು.
ಗೋಷ್ಠಿಯುದ್ದಕ್ಕೂ ಈ ಚುನಾವಣೆ ಅಕ್ರಮಗಳ ಬಗ್ಗೆ ತಮ್ಮ ಅಸಮಾಧಾನವನ್ನು ಮತ್ತು ಅಕ್ರೋಶವನ್ನು ವ್ಯಕ್ತಪಡಿಸಿದ ಅವರು, ನಮ್ಮ ಬಳಿ 40 ಶಾಸಕರಿದ್ದಾರೆ. ಅವರಲ್ಲಿನ ಕೆಲವು ಅತೃಪ್ತರನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಮಾಡುತ್ತಿರುವ ತಂತ್ರದ ಬಗ್ಗೆ ಕಿಡಿಕಾರಿದರು.
ಪಕ್ಷೇತರ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋಗಿದ್ದು ಯಾರೆಂಬುದು ಅವರಿಗೆ ಗೊತ್ತಿಲ್ಲವೆ. ಅದೇ ರೀತಿ ವೋಟಿಗಾಗಿ ನೋಟು ಪ್ರಕರಣ ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೇಂದ್ರೀಯ ಚುನಾವಣಾ ಆಯೋಗ ಚುನಾವಣೆಯನ್ನು ರದ್ದುಪಡಿಸಬೇಕು. ಇಲ್ಲವೆ ಮುಂದೂಡಬೇಕು ಎಂದು ಒತ್ತಾಯಿಸಿದರು.
ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆಯೇ, ಚುನಾವಣಾ ಅಕ್ರಮಗಳ ಬಗ್ಗೆ ಹಲವಾರು ದೂರುಗಳು ಹೋಗಿವೆ. ಅವುಗಳನ್ನೆಲ್ಲಾ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಆಯೋಗದ ಮುಂದಿನ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ತೀರ್ಮಾನ ಆಗಬೇಕು ಎಂದು ಅವರು ಒತ್ತಾಯಿಸಿದರು.
ಬೇನಾಮಿ ಅಥವಾ ಕಪ್ಪುಹಣ ಹುಡುಕುವ ಬಗ್ಗೆ ವಿದೇಶಿಗಳಿಗೆ ಹೋಗಬೇಕಾಗಿಲ್ಲ. ರಾಜ್ಯದ ಹಲವು ನಾಯಕರ ಬಳಿ ಇರುವ ಹಣವನ್ನು ಪತ್ತೆ ಮಾಡಿದರೆ ಸತ್ಯಾಂಶ ಹೊರ ಬರಲಿದೆ ಎಂದರು.
ಜೂ. 12 ರಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಮುಖಂಡರ ಸಭೆ ನಡೆಯಲಿದ್ದು, ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅಂದು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತಮ್ಮ ಪಕ್ಷದಲ್ಲೇ ಬೆಳೆದು ನಾಯಕರಾಗಿರುವ ಕೆಲವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Comments are closed.