ಕರ್ನಾಟಕ

ವ್ಯವಸ್ಥೆ ವಿರುದ್ಧವೇ ಸಮರ ಸಾರಿದ ಅನುಪಮಾ ಶೆಣೈ!

Pinterest LinkedIn Tumblr

anuಬಳ್ಳಾರಿ: ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಸಾಮಾಜಿಕ ಜಾಲತಾಣದಲ್ಲಿ ‘ವ್ಯವಸ್ಥೆ’ ವಿರುದ್ಧ ಶೀತಲ ಸಮರ ಮುಂದುವರಿಸಿದ್ದಾರೆ.

‘ನನ್ನ ಫೇಸ್ಬುಕ್ ಸ್ಟೇಟಸ್ಗಳನ್ನು ನೋಡಿ ನನ್ನ ಮೇಲೆ ಎಫ್ಐಆರ್ ದಾಖಲಿಸುತ್ತಾರಂತೆ ಬೃಹನ್ನಳೆಯರು’ ಎಂದು ಹೇಳುವ ಮೂಲಕ ಶೆಣೈ ಟೀಕಾ ಪ್ರಹಾರ ತೀವ್ರಗೊಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆ ಗಮನಿಸಿದರೆ ಸರ್ಕಾರ ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲು ಮುಂದಾಗಿದೆ ಎಂಬ ಅನುಮಾನ ಮೂಡುವಂತೆ ಮಾಡಿದೆ. ಇದರಿಂದಾಗಿ ನ್ಯಾಯಾಲಯ ಮಾತ್ರ ನನ್ನನ್ನು ರಕ್ಷಿಸಲು ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಪೊಲೀಸ್ ಇಲಾಖೆ ವಿರುದ್ಧವೂ ಶೆಣೈಗೆ ಬೇಸರ ಇರುವುದು ಸ್ಪಷ್ಟವಾಗುತ್ತಿದೆ. ಜೂ.4ರಂದು ಪ್ರತಿಭಟನೆಗೆ ಯತ್ನಿಸಿದ್ದ ಎಂಬ ಕಾರಣಕ್ಕೆ ಮಂಡ್ಯ ಜಿಲ್ಲೆಯ ಡಿಎಆರ್ ಪೇದೆಯನ್ನು ಸೇವೆಯಿಂದ ವಜಾ ಮಾಡಿದ ಇಲಾಖೆ ಕ್ರಮಕ್ಕೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದು ಹೇಳುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ನಿಗೂಢ ನಡೆ.

ರಾಜೀನಾಮೆ ನೀಡಿದ ದಿನದಿಂದ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದ ಅನುಪಮಾ ಶೆಣೈ ನಡೆ ಇನ್ನೂ ನಿಗೂಢವಾಗಿದೆ. ಶೆಣೈ ಅವರ ಅಸಮಾಧಾನ, ಆಕ್ರೋಶದ ಹೊರತಾಗಿಯೂ ಸರ್ಕಾರ ರಾಜೀನಾಮೆ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶೆಣೈ ಹೇಳಿಕೆಗಳನ್ನು ಗಮನಿಸುವುದಾದರೆ ಸರ್ಕಾರ ರಾಜೀನಾಮೆ ವಿಚಾರಕ್ಕಿಂತ ಅನುಪಮಾ ಅವರ ಪರೋಕ್ಷ ಸಮರದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಮುಂದೇನು..?:

‘ಅನ್ಯಾಯವೇ ಕಾನೂನಾದಾಗ ದಂಗೆಯೇ ಕರ್ತವ್ಯ ಆಗಲಿದೆ’, ‘ಮತದಾನ ಎಲ್ಲವನ್ನೂ ಬದಲಾಯಿಸುವುದಾದರೆ ಅವರು ಬದಲಾಗಿದ್ದನ್ನು ಕೂಡ ಅಕ್ರಮಗೊಳಿಸುತ್ತಾರೆ’, ‘ನೀವು ತಲೆತಗ್ಗಿಸುವುದೇ ಆದರೆ ಅದು ಕೇವಲ ನಿಮ್ಮ ಬೂಟುಗಳನ್ನು ನೋಡುವುದಕ್ಕೆ ಮಾತ್ರ ಆಗಿರಬೇಕು’ ಎಂದು ಅರ್ಥೈಸುವಂಥ ಇಂಗ್ಲಿಷ್ ಹೇಳಿಕೆಗಳ ಮೂಲಕ ಅನುಪಮಾ ಶೆಣೈ ತಮ್ಮ ಮಾರ್ಗವನ್ನು ಬಹುತೇಕ ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದೇನು ಎಂಬ ಪ್ರಶ್ನೆಗೆ ನೇರ ಉತ್ತರ ಹೇಳಲು ಮುಂದಾಗುತ್ತಿಲ್ಲ.

ಡಿಜಿಪಿ ಕೈ ಸೇರಿದ ರಾಜೀನಾಮೆ ಪತ್ರ

ಅನುಪಮಾ ಶೆಣೈ ಅವರ ರಾಜೀನಾಮೆ ಪತ್ರ ಸೋಮವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಕೈ ಸೇರಿದೆ. ಇಲಾಖೆಯ ಯಾವುದೇ ಸಿಬ್ಬಂದಿ ರಾಜೀನಾಮೆ ಕೊಟ್ಟರೆ ಅದನ್ನು ಹಿಂಪಡೆಯಲು 90 ದಿನ ಕಾಲಾವಕಾಶ ಇರುತ್ತದೆ. ಗೃಹ ಇಲಾಖೆ ಅವಗಾಹನೆಗೆ ರಾಜೀನಾಮೆ ಪತ್ರ ಕಳುಹಿಸಲಾಗುತ್ತಿದ್ದು, ಅಲ್ಲಿಂದ ಸೂಚನೆ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಡಿಜಿಪಿ ತಿಳಿಸಿದ್ದಾರೆ.

ಅನುಪಮಾ ಶೆಣೈ ರಾಜೀನಾಮೆ ರಾಜ್ಯ ಸರ್ಕಾರಕ್ಕೆ ಒಂದು ಕಪ್ಪು ಚುಕ್ಕೆ. ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ ಎಂದು ಸಿಎಂ ಹೇಳುತ್ತಾರೆ. ಹಾಗಾದರೆ ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ?

| ಜಗದೀಶ ಶೆಟ್ಟರ್ , ಬಿಜೆಪಿ ನಾಯಕ

ದಕ್ಷ ಅಧಿಕಾರಿಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಎಲ್ಲ ಸಮಸ್ಯೆಯನ್ನು ಧೈರ್ಯದಿಂದ ಎದುರಿಸುವ ದಿಟ್ಟತನ ಅಧಿಕಾರಿಗೆ ಇರಬೇಕು. ಯಾರೋ ನಾಲ್ಕು ಜನ ಪ್ರತಿಭಟನೆ ನಡೆಸಿದರೆ ರಾಜೀನಾಮೆ ನೀಡುವುದು ಪರಿಹಾರವಲ್ಲ.

| ಯು.ಟಿ.ಖಾದರ್ ಸಚಿವ

Comments are closed.