ರಾಷ್ಟ್ರೀಯ

ಮಾಲೀಕನ ಜೀವ ಉಳಿಸಲು ನಾಯಿ ಬಲಿದಾನ

Pinterest LinkedIn Tumblr

dogಶಹಜಹಾನ್ಪುರ: ಸ್ವಾಮಿನಿಷ್ಠೆ ವಿಚಾರದಲ್ಲಿ ನಾಯಿಗಿಂತ ಮಿಗಿಲಾದ ಪ್ರಾಣಿ ಇನ್ನೊಂದಿಲ್ಲ. ಅನ್ನ ಹಾಕಿದ ಯಜಮಾನನಿಗೆ ಸಂಕಷ್ಟ ಬಂದಾಗ ತನ್ನ ಪ್ರಾಣವನ್ನೇ ಬಲಿ ಕೊಟ್ಟು, ಮಾಲೀಕನ ಪ್ರಾಣ ಕಾಪಾಡಿದ ಪ್ರಕರಣ ಉತ್ತರಪ್ರದೇಶದ ದುದ್ವಾ ರಾಷ್ಟ್ರೀಯ ಅಭಯಾರಣ್ಯ ಸಮೀಪ ನಡೆದಿದೆ.

ಶುಕ್ರವಾರ ರಾತ್ರಿ ದುದ್ವಾ ಅಭಯಾ ರಣ್ಯಕ್ಕೆ ಹೊಂದಿರುವ ಕುತಾರ್ ಪಟ್ಟಣದ ಬರ್ಬತ್ಪುರ ಗ್ರಾಮದ ರೈತ ಗುರುದೇವ್ಸಿಂಗ್ ಮನೆಯ ಹೊರಾಂಗಣದಲ್ಲಿ ನಿದ್ದೆಗೆ ಶರಣಾಗಿದ್ದರು. ಇವರ ಪಕ್ಕದಲ್ಲೇ ನಾಲ್ಕು ವರ್ಷದ ಸಾಕುನಾಯಿ ‘ಜಾಕಿ’ ಕೂಡ ಮಲಗಿತ್ತು. ರಾತ್ರಿ ವೇಳೆ ಕಾಡಿನಿಂದ ಹುಲಿಯೊಂದು ಮನೆ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಜಾಕಿ ತಕ್ಷಣವೇ ಮಾಲೀಕನನ್ನು ಎಚ್ಚರಗೊಳಿಸಿತು. ನಿದ್ದೆಗಣ್ಣಿನಲ್ಲಿ ಏನಾಗುತ್ತಿದೆ ಎದು ಗುರುದೇವ್ಸಿಂಗ್ ಊಹಿಸುವ ಮೊದಲೇ ಹುಲಿ ಹತ್ತಿರ ಬಂದಾಗಿತ್ತು, ಮರದ ಕಟ್ಟಿಗೆ ಹಿಡಿದು ದಾಳಿಗೆ ಸಿದ್ಧಗೊಳ್ಳುವ ಮುನ್ನವೇ ಜಾಕಿ ಹುಲಿ ಮೇಲೆ ಎರಗಿತ್ತು.

ಕಾದಾಟದಲ್ಲಿ ಗಾಯಗೊಂಡಿದ್ದ ಜಾಕಿಯನ್ನು ಹುಲಿ ಕಚ್ಚಿ ಎಳೆದೊಯ್ದಿತ್ತು. ಭಯಭೀತರಾದ ಕುಟುಂಬ ಸದಸ್ಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ಜಾಕಿಯನ್ನು ಹುಡುಕಾಡಿದಾಗ ಅರ್ಧ ಕಿ.ಮೀ. ದೂರದಲ್ಲಿ ಮೃತದೇಹವು ಪತ್ತೆಯಾಗಿದೆ. ಮಕ್ಕಳಾದ ಸುಪ್ರೀತ್, ಗುಲ್ಷನ್ಪ್ರೀತ್ ಬೀದಿನಾಯಿ ಜಾಕಿಯನ್ನು ಮನೆಗೆ ತಂದು ಸಾಕಿದ್ದರು. ಮನೆ ಸದಸ್ಯರಂತಿದ್ದ ನಾಯಿಯೂ ನಿತ್ಯವೂ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿತ್ತು. ಒಂದಿಷ್ಟು ದಿನ ಊಟ ಹಾಕಿದಕ್ಕಾಗಿ ನನಗಾಗಿ ಪ್ರಾಣವನ್ನೇ ಬಲಿಕೊಟ್ಟಿದೆ ಎಂದು ಗುರುದೇವ್ಸಿಂಗ್ ಕಂಬನಿ ಮಿಡಿದಿದ್ದಾರೆ.

ದುದ್ವಾ ಅಭಯಾರಣ್ಯಕ್ಕೆ ಹೊಂದಿರುವ ದಕ್ಷಿಣ ಖೇರಿ ಅರಣ್ಯವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದು, ಆಹಾರ ಅರಸಿಕೊಂಡು ಗ್ರಾಮಗಳ ಮೇಲೆ ಹುಲಿಗಳು ದಾಳಿ ನಡೆಸುವದು ಇಲ್ಲಿ ಮಾಮೂಲಿಯಾಗಿದೆ ಎಂದು ಅರಣ್ಯಾಧಿಕಾರಿ ಎಸ್.ಎನ್. ಯಾದವ್ ತಿಳಿಸಿದ್ದಾರೆ.

Comments are closed.