ಕರ್ನಾಟಕ

ಚಿತ್ರದುರ್ಗದಲ್ಲಿ ಆಂಬುಲೆನ್ಸ್ ನಲ್ಲೇ ನಡೆಯಿತೊಂದು ಅಪರೂಪದ ಪ್ರೇಮ ವಿವಾಹ !

Pinterest LinkedIn Tumblr

chitra

ಚಿತ್ರದುರ್ಗ: ಅವಘಡವೊಂದರಲ್ಲಿ ಬಿದ್ದು ಬೆನ್ನಿನ ಚಿಕಿತ್ಸೆಗೊಳಗಾಗಿ ಎದ್ದು ಕೂರಲಾಗದ ಸ್ಥಿತಿಯಲ್ಲಿದ್ದ ಯುವತಿಗೆ ಆಂಬ್ಯುಲೆನ್ಸ್‌ನಲ್ಲೇ ತಾಳಿ ಕಟ್ಟಿಸಿ, ವಿವಾಹ ನೆರವೇರಿಸಿದ ಅಪರೂಪದ ವಿದ್ಯಮಾನಕ್ಕೆ ನಗರದ ಮುರುಘಾಮಠ ಸಾಕ್ಷಿಯಾಯಿತು.

ಭಾನುವಾರ ಮುರುಘಾಮಠದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 23 ಜೋಡಿಗಳು ಅಮವಾಸ್ಯೆ ಲೆಕ್ಕಿಸದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಠದ ಪ್ರಾಂಗಣದ ಮುಖ್ಯದ್ವಾರದ ಸಮೀಪ ಆಂಬ್ಯುಲೆನ್ಸ್‌ನಲ್ಲೇ ಮಲಗಿದ್ದ ನೇತ್ರಾವತಿಗೆ ಆಕೆಯ ಪ್ರಿಯಕರ ಗುರುಸ್ವಾಮಿ ತಾಳಿ ಕಟ್ಟಿದರು. ಇದಕ್ಕೆ ಡಾ. ಶಿವಮೂರ್ತಿ ಮುರುಘಾ ಶರಣರು, ವಧು, ವರರ ಬಂಧುಗಳು ಸಾಕ್ಷಿಯಾದರು.

ನಗರದ ಕಬೀರಾನಂದ ನರ್ಸಿಂಗ್‌ ಸ್ಕೂಲ್‌ನಲ್ಲಿ ಅಂತಿಮ ವರ್ಷದ ನರ್ಸಿಂಗ್‌ ಓದುತ್ತಿರುವ ಬಿ.ಜಿ.ಕೆರೆಯ ನೇತ್ರಾವತಿ ಹಾಗೂ ಚಳ್ಳಕೆರೆಯ ಗುರುಸ್ವಾಮಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮನಸ್ತಾಪ ಬಂದು ಪೋಷಕರ ಅಸಮಾಧಾನಕ್ಕೂ ದಾರಿ ಮಾಡಿತ್ತು ಎನ್ನಲಾಗಿದೆ.

ಇತ್ತೀಚೆಗೆ ಗುರುಸ್ವಾಮಿ, ನೇತ್ರಾವತಿ ಚಿತ್ರದುರ್ಗ ಕೋಟೆಗೆ ತೆರಳಿ ಲೋಕಾಭಿರಾಮದ ಮಾತುಕತೆಯಲ್ಲಿ ತೊಡಗಿದ್ದಾಗ ನೇತ್ರಾವತಿ ಅಕಸ್ಮಾತ್‌ ಕಾಲುಜಾರಿ ಕೆಳಗೆ ಬಿದ್ದಿದ್ದರು. ಇದರಿಂದ ಬೆನ್ನಿಗೆ ತೀವ್ರ ಪೆಟ್ಟಾಗಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ನಂತರ ಎರಡೂ ಕಡೆಯವರು ಪರಸ್ಪರ ಮಾತುಕತೆ ನಡೆಸಿ, ಭಾನುವಾರ ವಿವಾಹ ನೆರವೇರಿಸಿದರು.

ಕೋಟೆಗೆ ಹೋದಾಗ ನಾವಿಬ್ಬರೂ ಮಾತುಕತೆಯಲ್ಲಿದ್ದೆವು. ತಮಾಷೆ ಮಾಡುತ್ತಿದ್ದಾಗ ಕಾಲುಜಾರಿ ಕೆಳಗೆ ಬಿದ್ದೆ. ಈಗ ನಾನು ಚಿಕಿತ್ಸೆ ಪಡೆದಿದ್ದೇನೆ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ. ಗುರುಸ್ವಾಮಿ ನನ್ನನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆ ಇದೆ,” ಎಂದು ವಧು ನೇತ್ರಾವತಿ ಹೇಳಿದ್ದಾರೆ.

ಈ ವಿವಾಹದ ಬಗ್ಗೆ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದ್ದೇನು….

ಪ್ರೇಮ ವಿವಾಹಗಳ ವಿಷಯದಲ್ಲಿ ಅಮಾನವೀಯವಾಗಿ, ದೌರ್ಜನ್ಯದಿಂದ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು. ದ್ವೇಷ, ಆರೋಪಗಳನ್ನು ಜನರು ಬದಿಗಿಡಬೇಕು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನೇತ್ರಾವತಿ ಹಾಗೂ ಗುರುಸ್ವಾಮಿ ವಿವಾಹ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ”ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳು ನಡೆಯುತ್ತಿವೆ. ಒಂದು ಜೀವ ಹೋದರೆ, ತಂದು ಕೊಡುವ ಶಕ್ತಿ ಯಾರಿಗೂ ಇಲ್ಲ. ಪ್ರೇಮ ವಿವಾಹಗಳ ಸಂದರ್ಭದಲ್ಲಿ ಯಾರೂ ಜೀವಹಿಂಸೆ ಮಾಡಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಸಲಹೆ ನೀಡಿದರು.

Comments are closed.