ಕರಾವಳಿ

ನಾಡದೋಣಿಗಳಿಂದ ಮೀನು ಬೇಟೆ ಆರಂಭ : ಮಾರುಕಟ್ಟೆಯಲ್ಲಿ ತಾಜಾ ಮೀನು ಲಭ್ಯ

Pinterest LinkedIn Tumblr

Fishing_End_1

ಮಂಗಳೂರು : ರಾಜ್ಯದ ಕರಾವಳಿ ಭಾಗದಲ್ಲಿ ಜೂನ್೧ರಿಂದ ಜುಲೈ 31ರವರೆಗೆ ಯಾಂತ್ರೀಕೃತ ಬೋಟ್‌ಗಳಲ್ಲಿ ಮೀನುಗಾರಿಕೆ ನಡೆಸಲು ಸರಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಮೀನುಗಾರಿಕಾ ಬೋಟ್‌ಗಳು ಧಕ್ಕೆಯಲ್ಲಿ ಲಂಗರು ಹಾಕಿದ್ದರೆ, ಸಾಂಪ್ರದಾಯಿಕ ದೋಣಿಗಳು ಮಾತ್ರವೇ ಕಡಲಿಗಿಳಿದಿವೆ. ಇದರಿಂದಾಗಿ ತಾಜಾ ಬಂಗುಡೆ, ಬೂತಾಯಿ ಮೀನುಗಳು ಮಾರುಕಟ್ಟೆಯಲ್ಲಿ ಗ್ರಾಹಕರ ನಾಲಗೆ ರುಚಿ ತಣಿಸುತ್ತಿದ್ದರೆ, ದೂರದ ಒಮನ್‌ನಿಂದ ಬರುವ ದೊಡ್ಡ ಸೈಝ್‌ನ ಬೂತಾಯಿ ರೇಟ್ ಸ್ವಲ್ಪ ಜಾಸ್ತಿ ಅನ್ನಿಸಿದರೂ ಗ್ರಾಹಕರಿಗೆ ಭರ್ಜರಿ ಮಾರಾಟವಾಗುತ್ತಿದೆ.

ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಎರಡು ತಿಂಗಳುಗಳ ಕಾಲ ಬೆಲೆಬಾಳುವ ಬೋಟು, ಬಲೆಗಳನ್ನು ಸುರಕ್ಷಿತವಾಗಿ ಇಡುವ ಕಾಯಕದಲ್ಲಿ ಮಾಲಕರು ತೊಡಗಿದ್ದಾರೆ. ಮೀನಿನ ವಾಸನೆಯಿಂದ ಇಲಿ, ಹೆಗ್ಗಣಗಳಿಂದ ಬಲೆಗಳನ್ನು ಕಾಪಾಡುವುದೇ ಕಷ್ಟದ ಕೆಲಸ. ಇದಕ್ಕಾಗಿ ಸಿಹಿ ನೀರಿನ ನದಿ ಇಲ್ಲವೇ ನೀರಿನ ಮೂಲಗಳಲ್ಲಿ ಬಲೆಗಳನ್ನು ತೊಳೆದು ಬಳಿಕ ರಕ್ಷಿಸಲಾಗುತ್ತದೆ. ಬಲೆ ತೊಳೆದು ಬಿಸಿಲಿನಲ್ಲಿ ಒಣಗಿಸಿದ ನಂತರ ಮುಂದಿನ ಎರಡು ತಿಂಗಳುಗಳ ಕಾಲ ಹಾಳಾದ ಬಲೆಯನ್ನು ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.

ಮಳೆಗಾಲದ ಆರಂಭದಲ್ಲಿ ಬೃಹತ್ ಅಲೆಗಳು, ತುಫಾನ್‌ಗಳ ಹಾವಳಿ ಸಮುದ್ರದಲ್ಲಿ ಜಾಸ್ತಿಯಿರುವುದರಿಂದ ಮೀನುಗಾರರ ರಕ್ಷಣೆಯ ಉದ್ದೇಶ ಹಾಗೂ ಮಳೆಗಾಲದ ಸಮಯದಲ್ಲಿ ಮೀನುಗಳು ಮೊಟ್ಟೆ ಇಡುವ ಸಮಯವಾಗಿದ್ದರಿಂದ ಮತ್ಸ್ಯ ಸಂತತಿಯ ವೃದ್ಧಿಗೆ ಸರ್ಕಾರ ಈ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಅವಧಿಯಲ್ಲಿ ಯಾಂತ್ರಿಕೃತ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಆದರೆ ದೋಣಿಗಳ ಚಲನವಲನಗಳಿಗಾಗಿ 10 ಅಶ್ವಶಕ್ತಿ ಸಾಮರ್ಥ್ಯದ ಯಾಂತ್ರಿಕ ಹಾಗೂ ಸಾಂಪ್ರದಾಯಿಕ ನಾಡದೋಣಿಗಳ ಮೂಲಕ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ.

ಸರಕಾರದ ಈ ಅಧಿಸೂಚನೆ ಉಲ್ಲಂಘಿಸುವ ಮೀನುಗಾರರ ವಿರುದ್ದ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಒಂದು ವರ್ಷದ ಅವಧಿಯವರೆಗೆ ರಾಜ್ಯ ಮಾರಾಟ ಕರ ರಹಿತ ಡೀಸೆಲ್ ಪಡೆಯಲು ಮತ್ತು ಕೇಂದ್ರ ಅಬಕಾರಿ ತೆರಿಗೆ ಮರುಪಾವತಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಇಲಾಖೆ ಹೇಳಿದೆ.

Comments are closed.