ಕರ್ನಾಟಕ

ವಸತಿಗೃಹದಿಂದ ಹೊರಕ್ಕೆ ಗೃಹ ಸಚಿವರ ಎಚ್ಚರಿಕೆ

Pinterest LinkedIn Tumblr

rangaಬೆಂಗಳೂರು: ಪೊಲೀಸ್‌ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅವರ ಕುಟುಂಬ ವರ್ಗದವರು ಪ್ರತಿಭಟನೆ ನಡೆಸಿದರೆ, ಅವರನ್ನು ಪೊಲೀಸ್‌ ವಸತಿಗೃಹಗಳಿಂದ ಎತ್ತಂಗಡಿ ಮಾಡಿಸಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.

‘ಪೊಲೀಸ್‌ ಸಿಬ್ಬಂದಿ ಶನಿವಾರ ಸಾಮೂಹಿಕವಾಗಿ ರಜೆ ಹಾಕಿ ಪ್ರತಿಭಟನೆ ನಡೆಸುವುದಿಲ್ಲ. ರಜೆಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಅವರು ಹಿಂಪಡೆದಿದ್ದಾರೆ. ರಜೆ ಅರ್ಜಿ ಹಿಂಪಡೆದಿರುವ ಮಾಹಿತಿ ಎಲ್ಲ ಜಿಲ್ಲೆಗಳಿಂದ ಬಂದಿದೆ. ವಾಪಸ್ ಪಡೆಯದವರ ರಜೆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ಸಚಿವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಪೊಲೀಸ್‌ ಸಿಬ್ಬಂದಿ ಕುಟುಂಬದವರು ಪ್ರತಿಭಟನೆ ನಡೆಸಬೇಕು ಎಂದು ಪೊಲೀಸ್‌ ಇಲಾಖೆಗೆ ಸೇರಿರದ ಕೆಲವು ಸಂಘಟನೆಗಳು, ವ್ಯಕ್ತಿಗಳು ಪ್ರಚೋದನೆ ನೀಡುತ್ತಿದ್ದಾರೆ. ಇಂಥ ಪ್ರಚೋದನೆಗಳಿಗೆ ಮಣಿಯಬಾರದು. ಪೊಲೀಸ್‌ ಇಲಾಖೆ ಶಿಸ್ತಿನ ಇಲಾಖೆ’ ಎಂದರು.

‘ಯಾವ ಕಾಯ್ದೆಯ ಯಾವ ಸೆಕ್ಷನ್ ಅಡಿ ವಸತಿಗೃಹಗಳಿಂದ ಹೊರ ಹಾಕಲಾಗುತ್ತದೆ? ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಬಾರದು ಎಂಬುದು ಕಾನೂನಿನಲ್ಲಿ ಇದೆಯೇ?’ ಎಂಬ ಪ್ರಶ್ನೆಗೆ, ‘ಹಾಗೆ ಮಾಡಲು ಅವಕಾಶ ಇದೆ. ಯಾವ ಸೆಕ್ಷನ್ ಎಂಬುದನ್ನು ಸಮಯ ಬಂದಾಗ ತಿಳಿಸಲಾಗುವುದು. ಆದರೆ ಅವರನ್ನು ವಸತಿಗೃಹಗಳಿಂದ ಹೊರಹಾಕುವಂತಹ ಸ್ಥಿತಿ ಎದುರಾಗಲಿಕ್ಕಿಲ್ಲ’ ಎಂದರು.

‘ಪೊಲೀಸರಿಗೆ ಅನುಕಂಪ ತೋರಿಸುವ ನೆಪದಲ್ಲಿ ಕೆಲವು ಸಂಘಟನೆಗಳು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿವೆ. ಅವುಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದರು.

ಪೊಲೀಸ್‌ ಸೇವೆಯನ್ನು ಈಗ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಅಡಿ ತರಲಾಗಿದೆ. ಇನ್ನು ಮುಂದೆ ಪೊಲೀಸ್‌ ಸಿಬ್ಬಂದಿ ನೇಮಕಕ್ಕೆ ಹಣಕಾಸು ಇಲಾಖೆ ಅನುಮತಿ ಪಡೆಯಬೇಕಾದ ಅವಶ್ಯಕತೆ ಇಲ್ಲ. ಹುದ್ದೆಗಳ ಸಂಖ್ಯೆ ಹೆಚ್ಚಿಸಲು ಸಮಿತಿ ರಚಿಸಲಾಗುವುದು. ಇನ್ನು ಎರಡು ವರ್ಷಗಳಲ್ಲಿ 15 ಸಾವಿರ ಸಿಬ್ಬಂದಿ ನೇಮಿಸಲಾಗುವುದು ಎಂದು ವಿವರಿಸಿದರು.
*
ಪ್ರತಿಭಟನೆಗೆ ರಾಜಕೀಯ ಪಕ್ಷಗಳು ಪ್ರಚೋದನೆ ನೀಡಿದರೆ ಅವುಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಪೊಲೀಸರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಲಾಗುವುದು.
– ಡಾ.ಜಿ. ಪರಮೇಶ್ವರ್,
ಗೃಹ ಸಚಿವ
*

‘ವಾರದ ರಜೆ ಕಡ್ಡಾಯ’
ರಾಜ್ಯದ ಎಲ್ಲ ಪೊಲೀಸರಿಗೂ ವಾರದ ರಜೆ ಕಡ್ಡಾಯಗೊಳಿಸಿ ಡಿಜಿಪಿ ಓಂಪ್ರಕಾಶ್ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.
‘ಸಿಬ್ಬಂದಿಗೆ ವಾರದ ರಜೆ ಪಡೆಯಲು ಅವಕಾಶವಿದೆ. ಆದರೆ, ಕೆಲಸದ ಒತ್ತಡಗಳಿಂದಾಗಿ ಆ ದಿನವೂ ಅವರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ದಿನದ ಭತ್ಯೆ ನೀಡಲಾಗುತ್ತಿತ್ತು. ಈ ವ್ಯವಸ್ಥೆಯನ್ನು ತೆಗೆದು ಹಾಕಿ, ವಾರದ ರಜೆಯನ್ನೂ ಕಡ್ಡಾಯಗೊಳಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

Comments are closed.