ಕರ್ನಾಟಕ

ಖಾಸಗಿ ವಿ.ವಿ ಆರಂಭಿಸಲು ಭೂಮಿ ನೀಡಿಕೆ ಸರ್ಕಾರದ ಚಿಂತನೆ

Pinterest LinkedIn Tumblr

khasagiಬೆಂಗಳೂರು, ಜೂ. ೪- ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಂಡು ನೀಡುವಂತೆ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯ ಆರಂಭಿಸಲು ಮುಂದೆ ಬರುವವರಿಗೂ ಜಮೀನು ನೀಡುವ ಚಿಂತನೆ ಸರ್ಕಾರಕ್ಕಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಇಂದು ಇಲ್ಲಿ ಹೇಳಿದರು.
2030ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಶೇ. 30ಕ್ಕೆ ಏರಬೇಕಾದರೆ, ಖಾಸಗಿ ವಿಶ್ವವಿದ್ಯಾಲಯಗಳ ಪಾತ್ರವೂ ಹಿರಿದಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯ ತೆರೆಯಲು ಮುಂದೆ ಬರುವವರಿಗೆ ಎಲ್ಲ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು.
ನಗರದಲ್ಲಿಂದು ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಈಡೇರಿಸುವ ಇಂದು ಮತ್ತು ಮುಂದಿನ ದಿನಗಳಲ್ಲಿ ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳ ಪಾತ್ರ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 23 ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕಾಯ್ದೆಗೆ ತಿದ್ದುಪಡಿ ತಂದಿದ್ದರೂ, 12 ವಿಶ್ವವಿದ್ಯಾಲಯಗಳು ಮಾತ್ರ ಆರಂಭವಾಗಿವೆ. ಉಳಿಕೆಯ ವಿಶ್ವವಿದ್ಯಾಲಯಗಳು ಆರಂಭವಾಗಬೇಕಾಗಿದೆ ಎಂದು ಹೇಳಿದರು.
ಪ್ರಸ್ತುತ ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ನೊಂದಾಯಿತರಾಗುವ ಸಂಖ್ಯೆ ಶೇ. 23.6 ರಷ್ಟಿದೆ. 2020ರ ವೇಳೆಗೆ ಈ ಗುರಿಯನ್ನು ಶೇ. 30ಕ್ಕೆ ಹೆಚ್ಚಿಸುವ ಗುರಿಯಿದೆ. 2030ರ ವೇಳೆಗೆ ಶೇ. 50ಕ್ಕೆ ಹೆಚ್ಚಿಸಬೇಕಾದರೆ, ಖಾಸಗಿ ವಿಶ್ವವಿದ್ಯಾಲಯಗಳ ಸಹಕಾರವೂ ಮುಖ್ಯ ಎಂದರು.
ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳನ್ನು ತೆರೆಯಲು ಮುಂದೆ ಬರುವವರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಭೂಮಿ ನೀಡುವ ಚಿಂತನೆ ಸರ್ಕಾರಕ್ಕಿದೆ. ಇದಲ್ಲದೆ, ಉದ್ಯಮ ಸಾಮಾಜಿಕ ಜವಾಬ್ದಾರಿಯಡಿ ನೆರವು ಪಡೆಯಬಹುದು. ಈ ಬಗ್ಗೆ ಹಲವಾರು ಉದ್ಯಮಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದು, ಅವರು ಸಹಾಯ ಮಾಡಲು ಮುಂದಾಗಿದ್ದಾರೆ. ಅದನ್ನು ಖಾಸಗಿ ವಿಶ್ವವಿದ್ಯಾಲಯಗಳು ಬಳಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಕ್ಷುಲ್ಲಕ ರಾಜಕಾರಣದಿಂದಾಗಿ ಯಾವುದೇ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಇಂತಹದ್ದಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ಹೇಳಿದರು.
ಪ್ರಸ್ತುತ ಉನ್ನತ ಶಿಕ್ಷಣದಲ್ಲಿ ಸಮಾನತೆ, ಗುಣಮಟ್ಟ,ಎಲ್ಲರಿಗೂ ಶಿಕ್ಷಣ ದೊರಕದಿರುವ ಸಮಸ್ಯೆ ಎದುರಿಸುತ್ತಿದೆ. ಇವುಗಳ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.
ದೇಶದಲ್ಲಿ 754 ವಿಶ್ವವಿದ್ಯಾಲಯಗಳಿದ್ದು, ಅದರಲ್ಲಿ 372 ಸರ್ಕಾರಿ, 245 ಖಾಸಗಿ ಹಾಗೂ 137 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ರಾಜಸ್ತಾನದಲ್ಲಿ 71 ವಿಶ್ವವಿದ್ಯಾಲಯ, ಗುಜರಾತ್‌ನಲ್ಲಿ 25, ಉತ್ತರ ಪ್ರದೇಶದಲ್ಲಿ 24, ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 52 ವಿಶ್ವವಿದ್ಯಾಲಯಗಳಿವೆ ಎಂದು ಹೇಳಿದರು.
ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆಯಿದ್ದು, ಅವುಗಳ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಕುಲಪತಿಗಳ ವೇದಿಕೆ ಅಧ್ಯಕ್ಷ ಪದ್ಮಭೂಷಣ ಡಾ. ಎಂ. ಮಹದೇವಪ್ಪ, ಡಾ. ಎಂ.ಐ. ಸೌದತ್ತಿ, ‌ಡಾ. ಹೆಚ್.ಪಿ. ದೀಕ್ಷಿತ್, ಡಾ. ಜೋಸೆಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments are closed.