ಕರ್ನಾಟಕ

ಕಲಾಮಂದಿರಗಳಿಗೆ ಏಕರೂಪದ ಬಾಡಿಗೆ-ಉಮಾಶ್ರೀ

Pinterest LinkedIn Tumblr

umashri-3100ಬೆಂಗಳೂರು, ಜೂ. ೪- ಕಲಾ ಮಂದಿರಗಳನ್ನು ಕಲಾ ತಂಡಗಳಿಗೆ ನೀಡುವಾಗ ಏಕರೂಪದ ಬಾಡಿಗೆ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಕಲಾವಿದರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಕನ್ನ‌ಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲೆ ಮೊದಲ ಬಾರಿಗೆ ಅಧಿಕಾರ ವಿಕೇಂದ್ರೀಕರಣಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಸಮಾಜದ ಅನಿಷ್ಠ ಪದ್ಧತಿಗಳನ್ನು ಕಾನೂನಿನ ಮೂಲಕ ಹೋಗಲಾ‌ಡಿಸಿದರು. ವಿಧವೆಯರು, ವೇಶ್ಯೆಯರಿಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟು ಬಸವಿ ಬಿಡುವ ಪದ್ಧತಿಯನ್ನು ನಿಷೇಧಿಸಿದರು. ಈಗ ಮಹಿಳೆಯರು ತಲೆಎತ್ತಿ ಹೆಮ್ಮೆಯಿಂದ ನಡೆಯುತ್ತಿರುವುದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಣಜ ಜಾಲತಾಣದಲ್ಲಿ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕವನ್ನು ಅಳವಡಿಸಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗಕ್ಕೆ ಅನುಕೂಲಗಳಾಗಿವೆ. ರಾಜ್ಯದಲ್ಲೇ ಪೇಪರ್ ರಹಿತ ಇಲಾಖೆ ಎಂಬ ಕೀರ್ತಿಗೆ ಕನ್ನಡ ಮತ್ತು ಸಂಸ್ಕೃತಿ ಪಾತ್ರವಾಗಿದೆ. ಈಗಾಗಲೇ 30 ಸಾವಿರಕ್ಕೂ ಅಧಿಕ ಕ‌ಡತಗಗಳನ್ನು ಗಣಕೀಕರಣಗೊಳಿಸಲಾಗಿದೆ. ರಾಜ್ಯಾದ್ಯಂತ ಕಲಾಮಂದಿರಗಳಿಗೆ ಏಕರೂಪದ ಬಾಡಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಲಾಮಂದಿರಗಳಿಗೆ ಕೇವಲ ಎರಡೂವರೆ ಸಾವಿರ ನಿಗದಿಪಡಿಸಿರುವುದರಿಂದ ಬಡ ಕಲಾವಿದರಿಗೆ ಅನುಕೂಲವಾಗಿದೆ. ಕಲಾವಿದರ ಖಾತೆಗೆ ಸರ್ಕಾರ ನೇರವಾಗಿ ಹಣ ಜಮಾವಣೆ ಮಾ‌ಡುತ್ತಿರುವುದರಿಂದ ಕಲಾವಿದರಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಕನ್ನ‌ಡ ಪ್ರಾಧ್ಯಾಪಕಿ ಟಿ.ವಿ. ಸತ್ಯಮಣಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಬ್ರಿಟಿಷ್ ಆಡಳಿತದೊಂದಿಗೆ ಸಂಘರ್ಷಕ್ಕೆ ಇಳಿಯದೆ. ಜನರ ಅನುಕೂಲತೆಗಾಗಿ ಶ್ರಮಿಸಿದರು. ಕೆಳವರ್ಗ ಹಾಗೂ ಮಹಿಳೆಯರ ಉದ್ಧಾರಕ್ಕೆ ಶ್ರಮಿಸಿದ ಒ‌ಡೆಯರ್ ಅವರು ಮೈಸೂರು ಸಂಸ್ಥಾನವನ್ನು ಪ್ರಗತಿಯ ಹಾದಿಗೆ ಕೊಂಡೊಯ್ದರು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ್ ಮತ್ತಿತರರು ಹಾಜರಿದ್ದರು.

Comments are closed.