ಕರ್ನಾಟಕ

ಸ್ಯಾಂಕಿ ಕೆರೆ ಒತ್ತುವರಿ ತೆರವಿಗೆ ಆಗ್ರಹ

Pinterest LinkedIn Tumblr

sಬೆಂಗಳೂರು, ಜೂ. ೪- ಸ್ಯಾಂಕಿ ಕೆರೆ ದಂಡೆಗೆ ಹೊಂದಿಕೊಂಡಂತಿರುವ ೭.೨ ಎಕರೆ ಸರ್ಕಾರಿ ಜಾಗದ ದಾಖಲೆಗಳನ್ನು ತಿರುಚಿ ಖಾಸಗಿ ಸಂಸ್ಥೆಗೆ ವರ್ಗಾಯಿಸಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ದಾಖಲೆಗಳನ್ನು ತಿರುಚಿದ್ದು, ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆಗೆ ಸೇರಿದ ಈ ಭೂಮಿಯನ್ನು ವರ್ಗಾಯಿಸಿರುವುದರ ವಿರುದ್ಧ ಸ್ಯಾಂಕಿ ಉಳಿಸಿ ವೇದಿಕೆ ಎಲ್ಲ ರೀತಿಯ ಹೋರಾಟ ನಡೆಸುತ್ತಿದ್ದು, ಜಮೀನು ವರ್ಗಾವಣೆ ಪ್ರಶ್ನಿಸಿ ಸರ್ಕಾರ ಮತ್ತು ಮೆ. ಗಲ್ಫಾ ಆಯಿಲ್ ಕಾರ್ಪೋರೇಷನ್(ಮೆ.ಮಂತ್ರಿ ಡೆವಲಪರ್‍ಸ್‌ನ ಜಂಟಿ ಅಭಿವೃದ್ಧಿ ಸಂಸ್ಥೆ) ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಸಂಸ್ಥೆ ಆರ್‌ಟಿಐ ಮೂಲಕ ಕೆಲವು ದಾಖಲೆಗಳನ್ನು ಪಡೆದಿದ್ದು, ಸರ್ಕಾರಿ ಜಾಗ ಗುಪ್ತವಾಗಿ ವರ್ಗಾವಣೆಯಾಗಿರುವುದು ಈ ದಾಖಲೆಗಳಿಂದ ತಿಳಿದುಬರುತ್ತದೆ. ಹೀಗಾಗಿಯೇ ಸರ್ಕಾರ ಕಣ್ಣು ಮುಚ್ಚಿ ಕೂರದೆ ಕೂಡಲೇ ಸರ್ಕಾರಿ ಜಮೀನು ಕಬಳಿಸಿರುವ ಖಾಸಗಿ ಸಂಸ್ಥೆಯನ್ನು ಸ್ಯಾಂಕಿ ಕೆರೆ ಅಚ್ಚುಕಟ್ಟು ಪ್ರದೇಶದಿಂದ ಹೊರಹಾಕಬೇಕು ಎಂದು ಅವರು ಆಗ್ರಹಿಸಿದರು.
ಸರ್ಕಾರ ಕೆರೆ ಅಭಿವೃದ್ಧಿ ಸಂಸ್ಥೆ ಸ್ಥಾಪಿಸಿ, ಕೈ ಕಟ್ಟಿ ಕುಳಿತುಕೊಂಡರೆ ಕೆರೆಗಳನ್ನು ಉಳಿಸಲು ಸಾಧ್ಯವಿಲ್ಲ. ಸರ್ಕಾರಕ್ಕೆ ಒತ್ತುವರಿ ಎಂದು ತಿಳಿದುಬಂದ ಕೂಡಲೇ ಒತ್ತುವರಿದಾರರು ಎಷ್ಟೇ ಪ್ರಭಾವಶಾಲಿಗಳಾದರೂ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸ್ಯಾಂಕಿ ಉಳಿಸಿ ವೇದಿಕೆಯ ಅಧ್ಯಕ್ಷ ಚಿದಾನಂದ ಕುಲಕರ್ಣಿ ಉಪಸ್ಥಿತರಿದ್ದರು.

Comments are closed.