ಕರ್ನಾಟಕ

ಓಟಿಗೆ ಕೋಟಿ ಕಾವು

Pinterest LinkedIn Tumblr

parlimentಬೆಂಗಳೂರು, ಜೂ. ೩- ರಾಜ್ಯಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಮತದಾನ ಮಾಡಲು ಕೋಟಿಗಟ್ಟಲೆ ಹಣಕ್ಕೆ ಶಾಸಕರ ಬೇಡಿಕೆ ಇಟ್ಟಿರುವ ಕುರಿತು ಖಾಸಗಿ ಟಿವಿ ವಾಹಿನಿಗಳು ನ‌ಡೆಸಿರುವ `ಕುಟುಕು ಕಾರ್ಯಾಚರಣೆ’ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಕೈಗೊಳ್ಳುವ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ.
ಇಂದು ಮಧ್ಯಾಹ್ನ ಸಭೆ ಸೇರಿರುವ ಕೇಂದ್ರ ಚುನಾವಣಾ ಆಯೋಗ ಕೈಗೊಳ್ಳುವ ತೀರ್ಮಾನದತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಕುಟುಕು ಕಾರ್ಯಾಚರಣೆಯಲ್ಲಿ ಶಾಸಕರು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಚಾರವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಆಯೋಗ ಕೈಗೊಳ್ಳುವ ನಿರ್ಧಾರದ ಮೇಲೆ ಚುನಾವಣೆ ಭವಿಷ್ಯ ನಿಂತಿದೆ.
ಕುಟುಕು ಕಾರ್ಯಾಚರಣೆಗಳ ವಿಷಯವನ್ನು ಕೇಂದ್ರೀಯ ಚುನಾವಣಾ ಆಯೋಗವೂ ಗಮನಿಸಿದೆ. ಆಯೋಗ ನೀಡುವ ನಿರ್ದೇಶನದಂತೆ ತಾವು ತೀರ್ಮಾನ ಕೈಗೊಳ್ಳುವುದಾಗಿ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು `ಸಂಜೆವಾಣಿ’ಗೆ ಇಂದು ತಿಳಿಸಿದರು.
ಈ ಬೆಳವಣಿಗೆಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಕೇಳಿದರೆ ವರದಿ ನೀ‌‌ಡಲಾಗುವುದು. ಅದನ್ನಾಧರಿಸಿ, ಆಯೋಗ ನೀಡುವ ನಿರ್ದೇಶನದಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಶಾಸಕರು ಹಣಕ್ಕಾಗಿ ಮುಂದಿಟ್ಟಿರುವ ಬೇಡಿಕೆ, ಶಾಸಕರ ಕುದುರೆ ವ್ಯಾಪಾರ ಮುಂತಾದ ವಿಚಾರಗಳ ಬಗ್ಗೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಚುನಾವಣೆಯಲ್ಲಿ ಅಕ್ರಮಗಳು ನಡೆಯುತ್ತಿರುವುದರ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳು ದೊರೆತಲ್ಲಿ ಚುನಾವಣೆಯನ್ನು ಮುಂದೂಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿ.ಟಿ. ದೇವೇಗೌಡ, ಕೆಜೆಪಿ ಶಾಸಕ ಬಿ.ಆರ್. ಪಾಟೀಲ್, ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್, ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಸಿ. ರಾಮಮೂರ್ತಿ ಮುಂತಾದವರು ಕುಟುಕು ಕಾರ್ಯಾಚರಣೆ ವೇಳೆ ನೀಡಿರುವ ಹೇಳಿಕೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರ ಕುದುರೆ ವ್ಯಾಪಾರ ನಡೆಯುತ್ತಿದೆ ಎಂಬ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋ‌‌ಡು ತಿಮ್ಮಪ್ಪ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಅವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದರೆ, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಲಿದೆ.
ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ, ಕುಟುಕು ಕಾರ್ಯಾಚರಣೆ ಬೆಳವಣಿಗೆಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದ್ದು, ಆಯೋಗದ ನಡೆ ಕಡೆಗೆ ಎಲ್ಲರ ಚಿತ್ತ ಕೇಂದ್ರೀಕೃತವಾಗಿದೆ.

Comments are closed.