ಕರಾವಳಿ

ಜೂನ್.6: ನರೇಶ್ ಶೆಣೈ ಬಂಧನಕ್ಕೆ ಒತ್ತಾಯಿಸಿ ಶಾಸಕ ಲೋಬೊ ಮನೆಗೆ ಮೆರವಣಿಗೆ

Pinterest LinkedIn Tumblr

Baliga_murder_naresh

ಮಂಗಳೂರು : ಆರ್‌ಟಿ‌ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ನಡೆದು ಎರಡು ತಿಂಗಳು ದಾಟಿದೆ. ಕೊಲೆಯ ಪ್ರಮುಖ ಆರೋಪಿ ನರೇಶ್ ಶೆಣೈ ಸಹಿತ ಇನ್ನುಳಿದವರನ್ನು ಬಂಧನಕ್ಕೊಳಪಡಿಸುವಲ್ಲಿ ಪೊಲೀಸ್ ಇಲಾಖೆ ದಯನೀಯ ವೈಫಲ್ಯ ಕಂಡಿದೆ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕರಾದ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ನಮೋ ಬ್ರಿಗೇಡ್ ಪ್ರಮುಖನಾದ ಪ್ರಭಾವಿ ನಾಯಕ ನರೇಶ್ ಶೆಣೈ ಬಂಧನದಿಂದ ತಪ್ಪಿಸಿಕೊಂಡು ನಿರೀಕ್ಷಣಾ ಜಾಮೀನಿಗೆ ಸತತ ಪ್ರಯತ್ನ ನಡೆಸುತ್ತಿದ್ದಾನೆ. ಪೊಲೀಸ್ ಇಲಾಖೆ ನರೇಶ್ ಶೆಣೈ ಬಂಧಿಸಲು ವಿಫಲವಾಗುತ್ತಿರುವುದನ್ನು ನೋಡುವಾಗ, ರಾಜ್ಯ ಸರಕಾರವೇ ನರೇಶ್ ಶೆಣೈ ನಿರೀಕ್ಷಣಾ ಜಾಮೀನಿಗೆ ಸಹಾಯ ಮಾಡುತ್ತಿರುವ ಗುಮಾನಿ ಸಾರ್ವಜನಿಕರನ್ನು ಬಲವಾಗಿ ಕಾಡುತ್ತಿದೆ.

ಈ ಹಿನ್ನಲೆಯ ಹೋರಾಟವನ್ನು ತೀವ್ರಗೊಳಿಸಲು ಡಿವೈ‌ಎಫ್‌ಐ, ದಲಿತ ಸಂಘರ್ಷ ಸಮಿತಿ, ಎಸ್‌ಎಫ್‌ಐ, ಎ‌ಐವೈ‌ಎಫ್, ವಿಚಾರವಾದಿ ವೇದಿಕೆ ಮುಂತಾದ ಜನಪರ ಸಂಘಟನೆಗಳ ಜಂಟಿ ವೇದಿಕೆಯಾದ ದೇಶಪ್ರೇಮಿ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.

ಅದರಂತೆ ಇದೇ ಜೂನ್ ೬ರಂದು ಬೆಳಿಗ್ಗೆ 10.30ಕ್ಕೆ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊ ಮನೆಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೂ ಮುಂಚಿತವಾಗಿ ಬಲ್ಮಠ (ಕಲೆಕ್ಟರ್ ಗೇಟ್) ಬಳಿಯಿಂದ ಶಾಸಕರ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.