ಕರ್ನಾಟಕ

ಫಾರೂಕ್‌ಗೆ 2 ಹೆಚ್ಚುವರಿ ಮತ ಕೊಡಿಸಿ

Pinterest LinkedIn Tumblr

hdkಬೆಂಗಳೂರು: ರಾಜ್ಯಸಭಾ ಮತ್ತು ವಿಧಾನಪರಿಷತ್ತಿನ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಜತೆ ಹೊಂದಾಣಿಕೆ
ಮಾಡಿಕೊಳ್ಳಲು ಮುಂದಾಗಿರುವ ಜೆಡಿಎಸ್‌, ಮುಕ್ತ ಮನಸ್ಸು ಹೊಂದಿದೆ.

ಅಂದರೆ, ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನೆರವು ನೀಡುವುದಾದರೆ ವಿಧಾನಪರಿಷತ್ತಿನ ಎರಡನೇ ಅಭ್ಯರ್ಥಿಯನ್ನು ವಾಪಸ್‌ ಪಡೆದುಕೊಳ್ಳಲಾಗುವುದು. ಇಲ್ಲದಿದ್ದರೆ ಪರಿಷತ್ತಿಗೆ ಕಣಕ್ಕಿಳಿದಿರುವ ತನ್ನ ಎರಡನೇ ಅಭ್ಯರ್ಥಿಯನ್ನು ಬಿಜೆಪಿ ಹಿಂಪಡೆಯಲಿ. ಬಿಬಿಎಂಪಿಯಲ್ಲಿ ನಾವು ಬಿಜೆಪಿಯನ್ನು ಬೆಂಬಲಿಸುತ್ತೇವೆ ಎಂಬ ಎರಡೂ ಅವಕಾಶಗಳನ್ನು ಮುಕ್ತವಾಗಿರಿಸಿಕೊಂಡಿದೆ.

ಸಾಕಷ್ಟು ಸಮಾಲೋಚನೆ ಮತ್ತು ಲೆಕ್ಕಾಚಾರ ಹಾಗೂ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ವಿಧಾನಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಎರಡನೇ ಅಭ್ಯರ್ಥಿ ಲೆಹರ್‌ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಲು ಒಂದು ಹಂತದಲ್ಲಿ ಒಪ್ಪಿರುವ ಜೆಡಿಎಸ್‌, ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗೆ ಬಿಜೆಪಿಯಿಂದ ಎರಡು ಹೆಚ್ಚುವರಿ ಮತ ಕೊಡಿಸುವ ಷರತ್ತು ವಿಧಿಸಿದೆ. ಜತೆಗೆ ಆ ಭರವಸೆ ಯಡಿಯೂರಪ್ಪ ಅವರಿಂದಲೇ ದೊರೆಯಬೇಕು ಎಂದು ಹೇಳಿದೆ. ಆದರೆ, ರಾಜ್ಯಸಭೆಗೆ
ತನಗೇ ಎರಡು ಮತಗಳ ಕೊರತೆ ಅನುಭವಿಸುತ್ತಿರುವ ಬಿಜೆಪಿ ಯಾವ ರೀತಿ ಬೆಂಬಲ ನೀಡಬಹುದು ಎಂಬುದು
ಕುತೂಹಲ ಮೂಡಿಸಿದೆ.

ಗೌಡರಿಗೆ ವಿವರ: ಈ ನಡುವೆ, ಮೈತ್ರಿ ಕುರಿತು ಬಿಜೆಪಿ ನಾಯಕ ಆರ್‌.ಅಶೋಕ್‌ ಜತೆ ನಡೆದ ಮಾತುಕತೆ ವಿವರವನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರು ಬುಧವಾರ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರಿಗೆ ವಿವರಿಸಿದರು. ಬಿಜೆಪಿಯ ಎರಡನೇ ಅಭ್ಯರ್ಥಿಯನ್ನೇ ಬೆಂಬಲಿಸಲು ಪಟ್ಟು ಹಿಡಿದಿರುವ ಬಗ್ಗೆಯೂ ಹೇಳಿದರು.

ಅದಕ್ಕೆ ದೇವೇಗೌಡರು, ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ಸಿಗುವ ಖಾತರಿ ದೊರೆತರೆ ಹಾಗೆಯೇ ಆಗಲಿ. ಯಡಿಯೂರಪ್ಪ ಈ ಕುರಿತು ಭರವಸೆ ನೀಡಲಿ. ಇಲ್ಲವೇ ಬಿಬಿಎಂಪಿಯಲ್ಲಿ ಮುಂದಿನ ಬಾರಿ ಬಿಜೆಪಿಗೆ ಅಧಿಕಾರ ನಡೆಸಲು ಬೆಂಬಲ ನೀಡುತ್ತೇವೆ. ಮುಂದೆ ಇದೇ ರೀತಿಯ ಸಹಕಾರ ಮುಂದುವರಿಯಲಿದೆ ಎಂಬ ಭರವಸೆ ನಾವು ಕೊಡುತ್ತೇವೆ.
ವಿಧಾನಪರಿಷತ್‌ ಚುನಾವಣೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿಗೆ ಅವರು ಬೆಂಬಲ ನೀಡಲಿ ಎಂದು ಗೌಡರು ಸೂಚಿಸಿದ್ದಾರೆ ಎನ್ನಲಾಗಿದೆ.

ವಿಧಾನಪರಿಷತ್‌ ಚುನಾವಣೆಗೆ ಯಡಿಯೂರಪ್ಪ ಅವರು ತಮ್ಮ ಆಪ್ತ ಲೆಹರ್‌ಸಿಂಗ್‌ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರಿಂದ ಅವರ ಗೆಲುವು ಪ್ರತಿಷ್ಠೆಯ ಪ್ರಶ್ನೆ. ಲೆಹರ್‌ ಸಿಂಗ್‌ ಗೆಲ್ಲಲು ಜೆಡಿಎಸ್‌ ಮತಗಳು ಬೇಕು. ಹೀಗಾಗಿ, ನಮ್ಮದೇ ಎರಡನೇ ಅಭ್ಯರ್ಥಿಗೆ ಬೆಂಬಲಿಸಿ ಎಂದು ಪಟ್ಟು ಹಿಡಿದು ಕೊನೆಗೆ ಷರತ್ತಿನ ಮೇಲೆ ಬಿಜೆಪಿ ಎರಡನೇ ಅಭ್ಯರ್ಥಿಯನ್ನು ಬೆಂಬಲಿಸಲು ಒಪ್ಪಿಗೆ ನೀಡಿ ಅದರಿಂದ ಸಂಕಷ್ಟದಲ್ಲಿರುವ ರಾಜ್ಯಸಭೆ ಅಭ್ಯರ್ಥಿ ಫ‌ರೂಕ್‌ಗೆ ಶಕ್ತಿ ತುಂಬಿಸಿಕೊಳ್ಳಬೇಕು ಎಂಬುದು ಜೆಡಿಎಸ್‌ ಲೆಕ್ಕಾಚಾರ.

ಈ ನಡುವೆ ತಾವು ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್‌ನ 3ನೇ ಅಭ್ಯರ್ಥಿ ಗೆಲುವು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ
ಚೆಲುವರಾಯಸ್ವಾಮಿ ಮತ್ತು ಜಮೀರ್‌ … ತಮ್ಮ ಗುಂಪಿನ ಐವರೂ ಒಟ್ಟಾಗಿರಬೇಕು. ಯಾವುದೇ ಕಾರಣಕ್ಕೂ
ಮನಸ್ಸು ಬದಲಾಯಿಸಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಬುಧವಾರ ಈ ಕುರಿತು ಮೂವರು ಶಾಸಕರು
ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.
-ಉದಯವಾಣಿ

Comments are closed.