ಕರ್ನಾಟಕ

3 ಕೋಟಿ ವೆಚ್ಚದಲ್ಲಿ ಸರ್ಕಾರದಿಂದಲೇ “ಅರಸು ಸಿನಿಮಾ’!

Pinterest LinkedIn Tumblr

anjaneeyaಬೆಂಗಳೂರು: ರಾಜ್ಯ ಸರ್ಕಾರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಮರ್ಷಿಯಲ್‌ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದೆ. ಹಾಗಂತ ಇದು ಮಸಾಲೆ ಸಿನಿಮಾ ಅಲ್ಲ. ಬದಲಾಗಿ ರಾಜ್ಯದ ಅಹಿಂದ ವರ್ಗದ ಐಕಾನ್‌ ದೇವರಾಜ ಅರಸು ಜೀವನ ಚರಿತ್ರೆ ಆಧಾರಿತ ಚಲನಚಿತ್ರ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ.

ಹೌದು, ಇಂತಹದೊಂದು ಘೋಷಣೆಯನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಲನಚಿತ್ರ ನಿರ್ಮಾಣ ಮಾಡಲು ಸರ್ಕಾರ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.

ದೇವರಾಜ ಅರಸು ಜನ್ಮಶತಮಾನೋತ್ಸವ ಆಚರಣೆಗೆ ಸಂಬಂಧಿಸಿದಂತೆ ಬುಧವಾರ ವಿಧಾನಸೌಧದಲ್ಲಿ ತಮ್ಮ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಆಂಜನೇಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಚಿತ್ರ ನಿರ್ಮಾಣ ಕುರಿತು ಈಗಾಗಲೇ ನಾಗಾಭರಣ ಅವರೊಂದಿಗೆ ಚರ್ಚಿಸಲಾಗಿದೆ. ಎರಡು ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣದ ಯೋಚನೆ ಇತ್ತಾದರೂ ಎರಡರಿಂದ ಮೂರು ಕೋಟಿ ರೂ. ಬೇಕಾಗಬಹುದು ಎಂದು ನಿರ್ದೇಶಕರು ಹೇಳಿದ್ದಾರೆ. ಅಗತ್ಯ ಹಣವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಒದಗಿಸಲಾಗುವುದು. ವಾರ್ತಾ ಇಲಾಖೆ ಚಿತ್ರ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು.

ಇದು ದೇವರಾಜ ಅರಸು ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾವಾದರೂ ಕಮರ್ಷಿಯಲ್‌ ಸಿನಿಮಾ ಆಗಿರುತ್ತದೆ. ಆದರೆ, ಯಾವುದೇ ವಿವಾದಗಳಿಗೆ ಎಡೆಮಾಡಿಕೊಡದಂತೆ ಚಿತ್ರ ನಿರ್ಮಾಣ ಮಾಡಲಾಗುವುದು. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ತಯಾರಿಸುವ ಕಾರ್ಯ ನಡೆಯುತ್ತಿದ್ದು, ಅದನ್ನು ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಚಿತ್ರ ನಿರ್ಮಾಣ ಆರಂಭವಾಗಲಿದೆ ಎಂದರು.

ಈ ಚಿತ್ರಕ್ಕೆ ಕಲಾವಿದರಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ದೇವರಾಜ ಅರಸು, ಅವರ ಸಚಿವ ಸಂಪುಟದಲ್ಲಿದ್ದ ಸದಸ್ಯರು, ಆಗ ರಾಜಕೀಯ ರಂಗದಲ್ಲಿದ್ದವರಿಗೆ ಹೊಂದಿಕೆಯಾಗುವಂತೆ ಕಲಾವಿದರನ್ನು ಆಯ್ಕೆ ಮಾಡಬೇಕಾಗುತ್ತದೆ. ಸಿನಿಮಾ ಸ್ಕ್ರಿಪ್ಟ್ ಅಂತಿಮಗೊಂಡ ನಂತರ ಕಲಾವಿದರ ಆಯ್ಕೆ ನಡೆಯಲಿದೆ. ಈ ಜವಾಬ್ದಾರಿಯನ್ನು ನಿರ್ದೇಶಕರೇ ನೋಡಿಕೊಳ್ಳಲಿದ್ದಾರೆ ಎಂದು ಹೇಳಿದರು.

ಚಿತ್ರೀಕರಣ ಪೂರ್ಣಗೊಂಡ ಬಳಿಕ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದನ್ನು ಬಿಡುಗಡೆ ಮಾಡಲಾಗುವುದು. ಇದರಿಂದ ಲಾಭ-ಅಥವಾ ನಷ್ಟವಾದರೆ ಅದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಪಟ್ಟಿರುತ್ತದೆ. ಇದರ ಜತೆಗೆ ಅರಸು ಅವರ ಜೀವನ, ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಚಿತ್ರ ಪ್ರದರ್ಶನ ಹಮ್ಮಿಕೊಳ್ಳುವ ಬಗ್ಗೆಯೂ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಕಮರ್ಷಿಯಲ್‌ ಸಿನಿಮಾ ಇದೇ ಮೊದಲು
ದೇವರಾಜ ಅರಸು ಕುರಿತಾಗಿ ಸರ್ಕಾರದಿಂದ ಸಿನಿಮಾ ನಿರ್ಮಾಣ ಮಾಡಿದರೆ ರಾಜ್ಯ ಅಥವಾ ಕೇಂದ್ರ ಸರ್ಕಾರ ಅಥವಾ ಒಂದು ಸರ್ಕಾರಿ ಇಲಾಖೆ ಕಮರ್ಷಿಯಲ್‌ ಸಿನಿಮಾ ತಯಾರಿಸುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎನಿಸಲಿದೆ.

ಈ ಹಿಂದೆ ವಾರ್ತಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಾಕ್ಷ್ಯಚಿತ್ರಗಳನ್ನು ನಿರ್ಮಿಸುತ್ತಿದ್ದವು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕಥಾಚಿತ್ರಗಳನ್ನು ನಿರ್ಮಿಸಲಾಗಿದೆ. ಆದರೆ, ಯಾವುದೇ ಕಮರ್ಷಿಯಲ್‌ ಸಿನಿಮಾ ನಿರ್ಮಿಸಿದ ಉದಾಹರಣೆ ಇಲ್ಲ.

ಹಿಂದೆ ಪ್ರಸಾರಭಾರತಿಯವರು ದೂರದರ್ಶನದ ಮೂಲಕ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿಸಿದ್ದರು. ಆದರೆ, ಇದನ್ನು ದೂರದರ್ಶನ ಚಾನಲ್‌ನಲ್ಲಿ ಬಿತ್ತರಿಸಲಾಗುತ್ತಿತ್ತೇ ಹೊರತು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿರಲಿಲ್ಲ. ಅಲ್ಲದೆ, ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಫಿಲ್ಮ್ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ ಉತ್ತಮ ಸಂದೇಶ ಸಾರುವ ಸಿನಿಮಾಗಳನ್ನು ನಿರ್ಮಾಣ ಮಾಡಿದ ಉದಾಹರಣೆಯಿದೆ. ಆದರೆ, ಇದೀಗ ಆ ಸಂಸ್ಥೆ ಮುಚ್ಚಿಹೋಗಿದೆ. ಆದರೆ, ಯಾವುದೇ ಸರ್ಕಾರ ಅಥವಾ ಇಲಾಖೆ ಕಮರ್ಷಿಯಲ್‌ ಸಿನಿಮಾ ಮಾಡಿ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಿದ ಉದಾಹರಣೆ ಇಲ್ಲ.
-ಉದಯವಾಣಿ

Comments are closed.