ಕರ್ನಾಟಕ

ಕೆಜಿಐಡಿ ಸಿಬ್ಬಂದಿ ಹಾಜರಿ

Pinterest LinkedIn Tumblr

GVT-employee-Logoಬೆಂಗಳೂರು, ಜೂ. ೨ – ರಾಜ್ಯ ಸರ್ಕಾರಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸುತ್ತಿರುವ ಬೆನ್ನಲ್ಲೇ ಕೆಜಿಐಡಿ ಸಿಬ್ಬಂದಿ ಮತ್ತು ಅಧಿಕಾರಿಗಳು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಕೆಲಸವನ್ನು ನಿರ್ವಹಿಸುವ ಮೂಲಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಸಡ್ಡು ಹೊಡೆದಿದ್ದಾರೆ.
ವಿವಿ ಟವರ್‌ನಲ್ಲಿರುವ ಕೆಜಿಐಡಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿದ್ದರು.
ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ನೌಕರರನ್ನು ಬಲವಂತವಾಗಿ ಹೊರ ಕಳುಹಿಸುತ್ತಿದ್ದ ಬೇರೆ ಇಲಾಖೆಯ ನೌಕರರಿಗೆ ಪೊಲೀಸರು ಎಚ್ಚರಿಕೆ ನೀಡಿ ಕೆಜಿಐಡಿ ಸಿಬ್ಬಂದಿ ತಮ್ಮ ಕೆಲಸ ನಿರ್ವಹಿಸಲು ಸುಗಮ ದಾರಿ ಕಲ್ಪಿಸಿದರು.
ಕೆಜಿಐಡಿಯ ಇಲಾಖೆಯ ಸಿಬ್ಬಂದಿಗಳು ರಾಜ್ಯಾದ್ಯಂತ 750 ರಿಂದ 1000 ಮಂದಿ ಕೆಲಸ ಮಾಡುತ್ತಿದ್ದು , ಅವರೆಲ್ಲ ವಿವಿಧ ಜಿಲ್ಲೆಗಳಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ವಿವಿ ಟವರ್‌ನಲ್ಲಿರುವ 200ಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿದ್ದಾರೆ.
ಸರ್ಕಾರಿ ನೌಕರರು ಮತ್ತು ಸಿಬ್ಬಂದಿಗಳು ಪ್ರತಿಭಟನೆ ಹಾಗೂ ಮುಷ್ಕರ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿರುವ ಹಿನ್ನೆಲೆಯಲ್ಲಿ ಮುಷ್ಕರ ನಡೆಸುವ ಸಿಬ್ಬಂದಿ ಮತ್ತು ನೌಕರರನ್ನು ಯಾವುದೇ ಪೂರ್ವಾನ್ಮತಿ ಇಲ್ಲದೆ ಬಂಧಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಿರುವ ಹಿನ್ನೆಲೆಯಲ್ಲಿ ವ್ಯಾಪಕ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಎಂದಿನಂತೆ ಕೆಲಸಕ್ಕೆ ಹಾಜರಾಗಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ಕೆಲಸಕ್ಕೆ ಹಾಜರಾಗದೆ ವಾಪಸ್ ತೆರಳಿ ಎಂದು ಕಳುಹಿಸುತ್ತಿರುವ ನೌಕರರ ಮೇಲೆ ಕಣ್ಣಿಟ್ಟಿರುವ ಪೊಲೀಸರು, ಕೆಲಸ ಮಾಡಲು ಬಿಡಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡುತ್ತಿದ್ದುದ್ದು ಕಂಡುಬಂತು.
ಕೆಜಿಐಡಿ ಇಲಾಖೆಯ ನೌಕರರು ಮತ್ತು ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗುವುದನ್ನು ತಡೆಹಿಡಿಯಲು ಯತ್ನಿಸಿದ ಹಲವರನ್ನು ಪೊಲೀಸರು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು.

Comments are closed.