ಕರ್ನಾಟಕ

ದೇಜಗೌ ನಿಧನ; ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ

Pinterest LinkedIn Tumblr

cm

ಮೈಸೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಗಣ್ಯರು, ಸಾಹಿತಿಗಳು, ದಿವಂಗತ ದೇಜಗೌ ರವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಸೋಮವಾರ ನಿಧನರಾದ ದೇಜಗೌ ಅವರ ಪಾರ್ಥಿವ ಶರೀರವನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನ ಪ್ರೊ.ವೆಂಕಣ್ಣಯ್ಯ ವೇದಿಕೆಯಲ್ಲಿ ಇರಿಸಲಾಗಿತ್ತು. ವಿಮಾನ ನಿಲ್ದಾಣದಿಂದ ನೇರವಾಗಿ ಪ್ರೊ.ವೆಂಕಣ್ಣಯ್ಯ ವೇದಿಕೆಗೆ ತೆರಳಿ ಅಂತಿಮ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ದೇಜಗೌ ಅಪ್ಪಟ ಕನ್ನಡ ಅಭಿಮಾನಿಯಾಗಿದ್ದರು. ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಮೈಸೂರು ವಿವಿಯಲ್ಲಿ ಕನ್ನಡ ಅಧ್ಯಯನ ಸಂಸ್ಥೆಯನ್ನು ಕುವೆಂಪುರವರ ಹೆಸರಿನಲ್ಲಿ ಸ್ಥಾಪಿಸಿದ್ದರು. ಕಡು ಬಡತನದ ಕುಟುಂಬದಲ್ಲಿ ಜನಿಸಿದ ಅವರು ಹಂತ ಹಂತವಾಗಿ ಮೇಲೆ ಬಂದು ಮೈಸೂರು ವಿವಿ ಕುಲಪತಿ ಸ್ಥಾನ ಅಲಂಕರಿಸಿದ್ದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಬರಲು ಕಾರಿಣಿ ಭೂತರಾಗಿದ್ದವರಲ್ಲಿ ಇವರೇ ಪ್ರಮುಖರು. ಪಂಪ ಪ್ರಶಸ್ತಿ, ಪದ್ಮಶ್ರೀ, ಗೊರೂರು ರತ್ನ, ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಬಾಜನರಾಗಿದ್ದ ಅವರು ಕನ್ನಡ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಕೃತಿಗಳು, ಆದರ್ಶ ಜೀವನ ಎಲ್ಲರಿಗೂ ಆದರ್ಶಮಯವಾದದ್ದು. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ನಷ್ಟ ಉಂಟಾಗಿದೆ ಎಂದು ಗುಣಗಾನ ಮಾಡಿದರು.

ದೇಜಗೌ ರವರು ನನಗೆ ಕಳೆದ 5 ದಶಕಗಳಿಂದ ಒಡನಾಡಿಯಾಗಿ ಮಾರ್ಗದರ್ಶಕರಾಗಿದ್ದರು. ಬಸವಣ್ಣ, ಸ್ವಾಮಿವಿವೇಕಾನಂದರ ಬಗ್ಗೆ ಅಪಾರ ಗೌರವ ಹೊಂದಿದ್ದರು. ವೈಚಾರಿಕತೆಯ ವಿರುದ್ಧವು ಹೋರಾಟ ನಡೆಸಿದ್ದರು. ಕಳೆದ ಹತ್ತು ವರ್ಷಗಳ ಹಿಂದೆ ಅವರ ಪತ್ನಿ ಇದೇ ದಿನದಂದು ಸಾವನ್ನಪ್ಪಿದ್ದರು. ಇವರೂ ಸಹ ಇದೇ ದಿನದಂದು ಸಾವನ್ನಪ್ಪಿರುವುದು ಕಾಕತಾಳೀಯ ಎಂದ ಅವರು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು.

ಅಂತಿಮ ದರ್ಶನ ಪಡೆದ ಗಣ್ಯರು

ಸಾಹಿತ್ಯ ದಿಗ್ಗಜ, ನಾಡೋಜ, ಶತಾಯುಷಿ, ದೇಜಗೌ ರವರ ಅಂತಿಮ ದರ್ಶನವನ್ನು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಆದಿ ಚುಂಚನಗಿರಿ ಮಠಾಧೀಶರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್, ಸಕ್ಕರೆ ಸಚಿವ ಮಾಹದೇವ್ ಪ್ರಸಾದ್, ಹೆಚ್.ಸಿ. ಮಹದೇವಪ್ಪ, ಶಾಸಕ ಪುಟ್ಟಣ್ಣಯ್ಯ, ಮೇಯರ್ ಭೈರಪ್ಪ, ಉಪಮೇಯರ್ ವನಿತಾಪ್ರಸನ್ನ, ಜಿ ಪಂ ಅಧ್ಯಕ್ಷೆ ನಯಿಮಾ ಸುಲ್ತಾನ್, ಮಾಜಿ ಸಚಿವ ರಾಮದಾಸ್, ಶಾಸಕರಾದ ತನ್ವೀರ್ ಸೇಟ್, ಜಿ ಟಿ ದೇವೇಗೌಡ, ವಾಸು, ಎಂ ಕೆ ಸೋಮಶೇಖರ್, ಕಾಡಾ ಅಧ್ಯಕ್ಷ ದಾಸೇಗೌಡ, ಮೂಡ ಅಧ್ಯಕ್ಷ ಮೋಹನ್ ಕುಮಾರ್, ಅರಗು ಬಣ್ಣದ ಕಾರ್ಖಾನೆ ಅಧ್ಯಕ್ಷ ಆರ್ ಅನಂತು, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್ ಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರೆಹನಾ ಬಾನು ಸಾಹಿತಿಗಳಾದ ಸಿಪಿಕೆ, ಮಳಲಿ ವಸಂತ್ ಕುಮಾರ್, ಕೆ ಎಸ್ ಭಗವಾನ್, ಕಸಾಪ ಅಧ್ಯಕ್ಷರಾದ ವೈ ಡಿ ರಾಜಣ್ಣ, ಮಾಜಿ ಅಧ್ಯಕ್ಷರಾದ ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ಮೈಸೂರು ವಿವಿ ಕುಲಪತಿ ಪ್ರೊ ರಂಗಪ್ಪ, ಡಾ ಶಿವರಾಜಪ್ಪ, ಪ್ರೊ ಭೈರವಮೂರ್ತಿ, ಎಸ್ ಎಲ್ ಭೈರಪ್ಪ, ಡಾ ಲತಾ ರಾಜಶೇಖರ್, ಕೆ ಎಸ್ ಶಿವರಾಮ್ ಸೇರಿದಂತೆ ಸಹಸ್ರಾರು ಮಂದಿ ಗಣ್ಯರು, ಅಭಿಮಾನಿಗಳು ಪಾಲ್ಗೊಂಡು ಅಂತಿಮ ದರ್ಶನ ಪಡೆದರು.

ಅಂತ್ಯಕ್ರಿಯೆ

ದೇಜಗೌ ರವರ ಅಂತ್ಯಕ್ರಿಯೆ ಜಯಲಕ್ಷ್ಮಿಪುರಂ ನಲ್ಲಿನ ಕಾಳಿದಾಸ ರಸ್ತೆಯಲ್ಲಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಧ್ಯಾಹ್ನ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಸಚಿವರು, ಸಾಹಿತಿಗಳು, ಗಣ್ಯರು ಅಭಿಮಾನಿಗಳು, ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯೆಕ್ರಿಯೆಯೂ ಅವರ ಪತ್ನಿಯ ಸಮಾದಿ ಪಕ್ಕದಲ್ಲಿಯೇ ನೆರವೇರಿಸಲಾಯಿತು.

Comments are closed.