ಕರ್ನಾಟಕ

ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ: ಯಡಿಯೂರಪ್ಪ ವಿಶ್ವಾಸ

Pinterest LinkedIn Tumblr

yaddi

ಮಂಡ್ಯ: ಬರುವ ಜೂ. 9ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ನಾಲ್ಕೂ ಜಿಲ್ಲೆಗಳಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲೂ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವಾರು ಮಂದಿ ಬಿಜೆಪಿಗೆ ಬೆಂಬಲ ನೀಡುತ್ತಿರುವುದರ ಬಗ್ಗೆ ಪ್ರವಾಸದಲ್ಲಿ ತಿಳಿದಿದ್ದೇನೆ ಎಂದರು.

ಮುಂದಿನ ವಿಧಾನ ಸಭಾ ಚುನಾವಣೆಯೊಳಗೆ ಮಂಡ್ಯ, ಹಾಸನ ಜಿಲ್ಲೆಗಳಲ್ಲೂ ಕನಿಷ್ಠ ಮೂರ್ನಾಲ್ಕು ಮಂದಿ ಬಿಜೆಪಿ ಶಾಸಕರು ಆರಿಸಿ ಬರುವ ರೀತಿಯಲ್ಲಿ ಪಕ್ಷವನ್ನು ಸನ್ನದ್ಧಗೊಳಿಸಲಾಗುವುದು. ಅದಕ್ಕಾಗಿಯೇ ವರಿಷ್ಠರು ತಮಗೆ ಈ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೇಳಿದರು.

ತಮಗೆ ರಾಜಕೀಯವಾಗಿ ಸ್ಥಾನಮಾನ ನೀಡಿರುವುದು ಶಿವಮೊಗ್ಗ ಜಿಲ್ಲೆಯವರಾದರೂ, ಹುಟ್ಟೂರು ಮಂಡ್ಯ ಜಿಲ್ಲೆಯ ಜನರೂ ನನ್ನ ಕೈ ಬಲಪಡಿಸುತ್ತಾರೆಂಬ ವಿಶ್ವಾಸ ಇದೆ. ಈ ಹಿನ್ನೆಲೆಯಲ್ಲಿ ಪಕ್ಷದೊಳಗೆ ಎಲ್ಲರಿಗೂ ಜವಾಬ್ದಾರಿಗಳನ್ನು ನೀಡಿ ಮುಂದಿನ ಚುನಾವಣೆ ವೇಳೆಗೆ ಪಕ್ಷವನ್ನು ಅದಿಕಾರಕ್ಕೆ ತರುವ ಪ್ರಯತ್ನ ನಡೆಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬರಪರಿಸ್ಥಿತಿ ನಿರ್ವಹಣೆ ವಿಪಲ

ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಬರ ಪರಿಸ್ಥಿತಿ ಎದುರಾಗಿದೆ. ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರಿಲ್ಲದೆ ಬರಿದಾಗಿದೆ. ಕುಡಿಯಲು ನೀರಿಲ್ಲದೆ ಆಹಾಕಾರ ಉಂಟಾಗಿದೆ. ಜನ ಜಾನುವಾರುಗಳಿಗೂ ನೀರಿಲ್ಲದೆ ಪರಿತಪಿಸುವಂತಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ರಾಜ್ಯದ ಕಾಂಗ್ರೆಸ್ ನೇತೃತ್ವದ ಸಿದ್ದಾರಾಮಯ್ಯನವರ ಸರ್ಕಾರ ಸಂಪೂರ್ಣ ವಿಪಲವಾಗಿದೆ ಎಂದು ಕಿಡಿಕಾರಿದರು.

ಅಹಿಂದ ವರ್ಗದವರಿಗೆ ಯೋಜನೆ ಇಲ್ಲ

ಅಹಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬಿಂಬಿಸಿಕೊಳ್ಳುತ್ತಿದ್ದರೂ, ಈ ವರ್ಗದ ಜನರ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ರಾಜ್ಯ ಸರ್ಕಾರ ಸೋತಿದೆ. ತಮ್ಮ ಅದಿಕಾರಾವದಿಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದೇವೆ. ಎಲ್ಲ ಸಮುದಾಯಗಳ ಮಹನೀಯರ ಜಯಂತಿ ಆಚರಣೆಗೆ ತಂದಿದ್ದೇವೆ. ಕೆಲವು ಸಮುದಾಯಗಳ ಅಭಿವೃದ್ಧಿಗೆಂದೇ ನಿಗಮಗಳನ್ನು ಸ್ಥಾಪಿಸಲಾಗಿತ್ತು. ನನ್ನ ಮೂರು ವರ್ಷಗಳ ಅದಿಕಾರಾವದಿಯಲ್ಲಿ ಮಾಡಿರುವ ಸಾಧನೆಗಳನ್ನು ಪರಾಮರ್ಶಿಸಿ, ಈಗಿನ ಸರ್ಕಾರದ ಆಡಳಿತವನ್ನು ಪರಾಮರ್ಶಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ಮೋದಿಯವರಿಂದ ಉತ್ತಮ ಆಡಳಿತ

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರಮೋದಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಅಮೆರಿಕಾ, ಚೈನಾದಂತಹ ರಾಷ್ಟ್ರಗಳು ಮೋದಿಯವರ ಆಡಳಿತ ವೈಖರಿಯನ್ನು ಕೊಂಡಾಡುತ್ತಿವೆ. ಆರ್ಥಿಕ ಮಟ್ಟ ಚೇತರಿಕೆ ಕಂಡಿದೆ. ದಿನದ 18 ರಿಂದ 20 ಗಂಟೆಗಳ ಕಾಲ ಮೋದಿಯವರು ಕೆಲಸ ಮಾಡುತ್ತಾರೆ ಎಂದು ವಿವರಿಸಿದರು.

ಅಂಬೇಡ್ಕರ್‍ರವರನ್ನೇ ಸೋಲಿಸಿದ ಕಾಂಗ್ರೆಸ್

ಸಂವಿಧಾನ ಶಿಲ್ಪಿ, ಶೋಷಿತ ವರ್ಗಗಳ ನೇತಾರ ಡಾ. ಬಿ.ಆರ್. ಅಂಬೇಡ್ಕರ್‍ರಂತಹ ಮಹನೀಯರನ್ನೇ ಕಾಂಗ್ರೆಸ್ ಪಕ್ಷ ಸೋಲಿಸಿತ್ತು. ಅವರ ಶವ ಸಂಸ್ಕಾರ ಮಾಡಲು ಬಿಡಲಿಲ್ಲ. ಅಂತಿಮವಾಗಿ ಅವರ ಶವವನ್ನು ಮುಂಬೈಗೆ ತಂದು ಸಂಸ್ಕಾರ ಮಾಡಬೇಕಾಯಿತು. ಇಂತಹ ಪಕ್ಷಕ್ಕೆ ಮತ ನೀಡಬೇಕು ಎಂದು ಪ್ರಶ್ನಿಸಿದರು.

Comments are closed.