ಕರ್ನಾಟಕ

ತಮ್ಮ ಕುಟುಂಬ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ 55ನೆ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್

Pinterest LinkedIn Tumblr

ravi

ಬೆಂಗಳೂರು: ಸ್ಯಾಂಡಲ್‌ವುಡ್‌ನ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ನಿನ್ನೆ ತಮ್ಮ 55ನೆ ವರ್ಷದ ಹುಟ್ಟುಹಬ್ಬವನ್ನು ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಕುಟುಂಬ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು. ಪ್ರತಿವರ್ಷವೂ ತಮ್ಮ ಹುಟ್ಟುಹಬ್ಬದಂದು ದೇವಸ್ಥಾನಕ್ಕೆ ತೆರಳುವ ರವಿಚಂದ್ರನ್, ಈ ಬಾರಿ ತಮ್ಮ ನಿವಾಸದಲ್ಲೇ ಆಚರಿಸಿಕೊಳ್ಳುವ ಕಾರಣವೇನೆಂದರೆ, ಬಹುನಿರೀಕ್ಷೆಯ ಅಪೂರ್ವ ಚಿತ್ರ ಬಿಡುಗಡೆಗೊಂಡಿರುವುದು.

ಅಭಿಮಾನಿಗಳಿಗಾಗಿ ಈ ಬಾರಿ 2 ಆವೃತ್ತಿಯಲ್ಲಿ ಚಿತ್ರವನ್ನು ಸಿದ್ಧಪಡಿಸಿರುವುದು ವಿಶೇಷ. ಈಗಾಗಲೇ ಒಂದು ಆವೃತ್ತಿ ಬಿಡುಗಡೆಗೊಂಡು ಪ್ರೇಕ್ಷಕರ ಗಮನ ಸೆಳೆದರೆ, 2ನೆ ಆವೃತ್ತಿಯಲ್ಲಿ ಮತ್ತಷ್ಟು ಬದಲಾವಣೆ ಮಾಡಿಕೊಂಡು ಪ್ರೇಕ್ಷಕರ ನಿರೀಕ್ಷೆಯನ್ನು ಇಮ್ಮಡಿಗೊಳಿಸುವ ಪ್ರಯತ್ನದಲ್ಲಿ ಇದ್ದಾರೆ. ಈ ಅಪೂರ್ವ ಚಿತ್ರವನ್ನು ಮತ್ತೊಂದು ಪ್ರೇಮಲೋಕವಾಗಿಸುವ ಪ್ರಯತ್ನದಲ್ಲಿರುವ ಕ್ರೇಜಿಸ್ಟಾರ್, ತಾಂತ್ರಿಕತೆಯಲ್ಲೂ ಕೂಡ ಚಿತ್ರವನ್ನು ಬಹಳ ವಿಭಿನ್ನವಾಗಿ ಸಿದ್ಧಪಡಿಸಿದ್ದು, ಛಾಯಾಗ್ರಾಹಕ ಜಿ.ಎಸ್.ವಿ.ಸೀತಾರಾಮ್ ಅವರ ಕ್ಯಾಮೆರಾ ಕೈಚಳಕ ನೋಡುಗರನ್ನು ನಿಬ್ಬೆರಗಾಗಿಸುವಂತೆ ಇದೆಯಂತೆ.

ಈ ಬಾರಿ ಚಿಕ್ಕಮಗಳೂರಿನ ಚೆಲುವೆ ಅಪೂರ್ವಳನ್ನು ಬೆಳ್ಳಿ ಪರದೆ ಮೇಲೆ ಪರಿಚಯಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಕನ್ನಡದ ಬೆಡಗಿಯನ್ನು ಪರಿಚಯಿಸಿದ್ದಾರೆ. ಈ ಚಿತ್ರವು ಈಗಾಗಲೇ ಪ್ರೇಕ್ಷಕರ ಮನಸನ್ನು ಗೆದ್ದಿರುವುದರಿಂದ ಈ ಬಾರಿಯ ಕ್ರೇಜಿಸ್ಟಾರ್ ಅವರ ಹುಟ್ಟುಹಬ್ಬ ಮತ್ತಷ್ಟು ಮೆರಗು ಪಡೆದಿದೆ ಎನ್ನಬಹುದು. ರಾಜ್ಯದ ಮೂಲೆ ಮೂಲೆಗಳಿಂದ ರಾಜಾಜಿನಗರದಲ್ಲಿರುವ ರವಿಚಂದ್ರನ್ ಅವರ ನಿವಾಸಕ್ಕೆ ಆಗಮಿಸಿದ ಸಹಸ್ರಾರು ಅಭಿಮಾನಿಗಳು ತಮ್ಮ ನೆಚ್ಚಿನ ಆರಾಧ್ಯ ದೈವನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

ಇನ್ನು ಕ್ರೇಜಿಸ್ಟಾರ್‌ರ ಬಹುನಿರೀಕ್ಷೆಯ ಮಂಜಿನ ಹನಿ ಚಿತ್ರವೂ ಕೂಡ ಅತಿ ಶೀಘ್ರದಲ್ಲೇ ಬೆಳ್ಳಿಪರದೆ ಮೇಲೆ ಬರುವ ನಿರೀಕ್ಷೆ ಇದ್ದು, ಅದಕ್ಕೆ ತಾಂತ್ರಿಕತೆಯ ಹೊಸ ರೂಪವನ್ನು ನೀಡಲು ರವಿಚಂದ್ರನ್ ಅವರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ಒಟ್ಟಾರೆ ಕಲಾವಿದನ ಹುಟ್ಟುಹಬ್ಬ ಬಹಳ ಅರ್ಥಪೂರ್ಣವಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಹಾಗೂ ತಮ್ಮ ಜೀವಕ್ಕೆ ಜೀವವಾಗಿರುವ ಸಿನಿಮಾ ಬಿಡುಗಡೆಗೊಂಡಿರುವ ಸಂತೋಷದಲ್ಲಿ ಆಚರಿಸಿಕೊಳ್ಳುತ್ತಿರುವುದು ಸಂತೋಷವೇ ಸರಿ ಎನ್ನಬಹುದು.

Comments are closed.