ಕರ್ನಾಟಕ

ಬಲಿಷ್ಠ ತಂಡ-ಅತ್ಯುತ್ತಮ ಫಾರ್ಮ್ ನಲ್ಲಿದ್ದ ಆರ್ ಸಿಬಿ ಫೈನಲ್ ನಲ್ಲಿ ಸೋತದ್ದಕ್ಕೆ ಕಾರಣ ಇಲ್ಲಿದೆ….ಓದಿ…

Pinterest LinkedIn Tumblr

rcb

ಬೆಂಗಳೂರು: ಟೂರ್ನಿ ಆರಂಭದಲ್ಲಿ ಪ್ಲೇ ಆಫ್ ಹಂತಕ್ಕೇರುವುದೇ ಅನುಮಾನದಂತಿದ್ದ ರಾಯಲ್ ಚಾಲೆಂಜರ್ಸ್ ತಂಡ ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಮತ್ತು ಚಾಣಾಕ್ಷ ನಾಯಕತ್ವದ ನೆರವಿನಿಂದ ಸತತ ನಾಲ್ಕು ಪಂದ್ಯಗಳ ಗೆಲುವಿನಿಂದ ಯಶಸ್ವಿಯಾಗಿ ಫೈನಲ್ ಗೇರಿತ್ತು. ಕೊನೆ ಕೊನೆಯ ಹಂತದಲ್ಲಿ ಮಂಕಾಗಿದ್ದ ಕ್ರಿಸ್ ಗೇಯ್ಲ್ ಕೂಡ ಸಿಡಿಯಲಾರಂಭಿಸಿದ್ದರು. ಎಬಿಡಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಹೀಗಿದ್ದರೂ ಆರ್ ಸಿಬಿ ಫೈನಲ್ ನಲ್ಲಿ ಸೋತಿದ್ದೇಕೆ.

ಆರ್ ಸಿಬಿ ಸೋಲಿನ ಹಿಂದಿನ 10 ಪ್ರಮುಖ ಕಾರಣಗಳು ಇಲ್ಲಿವೆ.
1.ವಿನ್ನರ್ ಡೇವಿಡ್ ವಾರ್ನರ್ ಚಾಣಾಕ್ಷ ನಾಯಕತ್ವ
ಇಡೀ 2016ರ ಐಪಿಎಲ್ ಟೂರ್ನಿಯಲ್ಲಿ ಓರ್ವ ವ್ಯಕ್ತಿಯಿಂದ ಅಂತಿಮ ಘಟ್ಟಕ್ಕೆ ಬಂದ ಏಕೈಕ ತಂಡವೆಂದರೆ ಅದು ಸನ್ ರೈಸರ್ಸ್ ಹೈದರಾಬಾದ್ ತಂಡ. ನಾಯಕ ಡೇವಿಡ್ ವಾರ್ನರ್ ಅವರ ಏಕಾಂಗಿ ಹೋರಾಟ ಆ ಹೈಜದರಾಬಾದ್ ತಂಡವನ್ನು ಅಂತಿಮಘಟ್ಟಕ್ಕೆ ತಂದು ನಿಲ್ಲಿಸಿತ್ತು. ಅಂತಿಮ ಹೋರಾಟದಲ್ಲೂ ಡೇವಿಡ್ ವಾರ್ನರ್ ಅಬ್ಬರದ 69 ರನ್ ಗಳಿಸಿದ್ದರು. ಇನ್ನು ನಾಯಕತ್ವ ವಿಚಾರಕ್ಕೆ ಬರುವುದಾದರೆ, ತಾವು ನೀಡಿದ 209 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಬೆಂಗಳೂರು ತಂಡವನ್ನು ಕಟ್ಟಿಹಾಕಲು ಬೇಕಾದ ಎಲ್ಲ ಕ್ರಮಗಳನ್ನು ವಾರ್ನರ್ ಕೈಗೊಂಡಿದ್ದರು. ಆರ್ ಸಿಬಿ ತಂಡದ ಆರಂಭಿಕರಾದ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಅಪಾಯಕಾರಿಯಾಗುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಸ್ಟ್ರಾಟೆಜಿಕ್ ಟೈಮ್ ಔಟ್ ತೆಗೆದುಕೊಂಡ ವಾರ್ನರ್ ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಕೊಂಚ ಬದಲಾವಣೆ ಮಾಡಿದರು. ಇದರ ಫಲವೇ ಏನೋ ಎಂಬಂತೆ 11ನೇ ಓವರ್ ನಲ್ಲಿ ಕ್ರಿಸ್ ಗೇಯ್ಲ್ ಮತ್ತು 13ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. ಇದು ಆರ್ ಸಿಬಿ ಮೇಲೆ ತೀವ್ರ ಒತ್ತಡ ಹೇರಿತು. ಬಳಿಕ ಬಂದ ಎಬಿ ಡಿವಿಲಿಯರ್ಸ್ ಅಪಾಯಕಾರಿಯಾಗುವ ಮುನ್ಸೂಚನೆ ಪಡೆಯುತ್ತಿದ್ದಂತೆಯೇ ಮತ್ತೆ ಬೌಲಿಂಗ್ ನಲ್ಲಿ ಬದಲಾವಣೆ ತಂದ ವಾರ್ನರ್ ಬಿಪುಲ್ ಶರ್ಮಾ ಅವರಿಗೆ ಬಾಲ್ ನೀಡಿದರು. ಇದೂ ಕೂಡ ಫಲ ನೀಡಿ ಎಬಿಡಿ 14ನೇ ಓವರ್ ನಲ್ಲಿ ಔಟ್ ಆದರು. ಇದೇ ಒತ್ತಡವನ್ನು ಆರ್ ಸಿಬಿ ಮೇಲೆ ಮುಂದುವರೆಸಿದ ವಾರ್ನರ್ ಕ್ಷೇತ್ರ ರಕ್ಷಣೆ ಹಾಗೂ ಬೌಲಿಂಗ್ ನಲ್ಲಿ ಆಗ್ಗಿಂದ್ದಾಗ್ಗೆ ಬದಲಾವಣೆ ತಂದರು. ಆ ಮೂಲಕ ಆರ್ ಸಿಬಿ ಬ್ಯಾಟ್ಸಮನ್ ಗಳ ಮೇಲೆ ಒತ್ತಡ ಹೇರಿ ನಿಗದಿತವಾಗಿ ವಿಕೆಟ್ ಬೀಳುವಂತೆ ನೋಡಿಕೊಂಡರು.

ಅಂತಿಮ ಓವರ್ ನಲ್ಲಿ ಅತಿ ದುಬಾರಿಯಾದ ಶೇನ್ ವಾಟ್ಸನ್
ಇಡೀ ಪಂದ್ಯದ ಪ್ರಮುಖ ತಿರುವು ಎಂದೇ ಹೇಳಲಾಗುತ್ತಿರುವ ಆರ್ ಸಿಬಿ ತಂಡದ ಬೌಲಿಂಗ್ ನ ಅಂತಿಮ ಓವರ್. ಈ ಓವರ್ ನಲ್ಲಿ ಹೈದರಾಬಾದ್ ತಂಡ ಬರೊಬ್ಬರಿ 24 ರನ್ ಸಿಡಿಸಿತು. ಈ ಓವರ್ ಅನ್ನು ಕೊಂಚ ಕಠಿಣವಾಗಿಸಿದ್ದರೂ, ಹೈದರಾಬಾದ್ ತಂಡದ ಗೆಲುವು ಮರೀಚಿಕೆಯಾಗುತ್ತಿತ್ತು ಎಂದು ಕ್ರಿಕೆಟ್ ಪಂಡಿತರು ಹೇಳಿದ್ದಾರೆ. ಕೇವಲ 6 ಎಸೆತದಲ್ಲಿ 24 ರನ್ ನೀಡಿದ ವಾಟ್ಸನ್ ನಿಜಕ್ಕೂ ಆರ್ ಸಿಬಿ ಪಾಲಿಗೆ ವಿಲನ್ ಆಗಿ ಕಂಡಿದ್ದರು. 3 ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ ಬರೊಬ್ಬರಿ 24 ರನ್ ನೀಡಿದ್ದರು. ಕೊನೆಯ ಎಸೆತದಲ್ಲೂ ಕೂಡ ಕಟ್ಟಿಂಗ್ ಸಿಕ್ಸರ್ ಭಾರಿಸುವ ಮೂಲಕ ಹೈದರಾಬಾದ್ ತಂಡದ ಮೊತ್ತವನ್ನು 208ಕ್ಕೆ ಹಿಗ್ಗಿಸಿದರು.

ಅತಿಯಾದ ಆರ್ ಸಿಬಿ ಆತ್ಮವಿಶ್ವಾಸ
ತವರು ನೆಲ ಮತ್ತು ಅಜೇಯ ದಾಖಲೆ ಹೊಂದಿದ್ದ ಆರ್ ಸಿಬಿಗೆ ಫೈನಲ್ ಪಂದ್ಯದಲ್ಲಿ ಅತಿಯಾದ ಆತ್ಮ ವಿಶ್ವಾಸವೇ ಮುಳುವಾಯಿತು ಎಂದು ಹೇಳಬಹುದು. ಅತ್ಯುತ್ತಮ ಬ್ಯಾಟಿಂಗ್ ಲೈನ್ ಅಪ್, ಇತ್ತೀಚೆಗಷ್ಟೇ ಫಾರ್ಮ್ ಕಂಡುಕೊಂಡಿರುವ ಬೌಲರ್ ಗಳು, ತವರು ನೆಲ ಇಂತಹ ಹಲವು ಅಂಶಗಳಿಂದ ರಾಯಲ್ ಚಾಲೆಂಜರ್ಸ್ ತಂಡ ಅತಿಯಾದ ಆತ್ಮ ವಿಶ್ವಾಸದಲ್ಲಿತ್ತು. ಪ್ರಮುವಾಗಿ ನಾಯಕ ಕೊಹ್ಲಿ ವಿದೇಶಿ ಬೌಲರ್ ಗಳ ಮೇಲಿರಿಸಿದ ಅತಿಯಾದ ನಂಬಿಕೆ ಆರ್ ಸಿಬಿ ತಂಡಕ್ಕೆ ಮುಳುವಾಯಿತು. ಆದಾಗಲೇ ದುಬಾರಿಯಾಗಿದ್ದ ಶೇನ್ ವಾಟ್ಸನ್ ಕೈಗೆ ಕೊನೆಯ ಓವರ್ ಎಸೆಯಲು ಬಾಲ್ ನೀಡುವ ಬದಲು ಭಾರತೀಯ ಬೌಲರ್ ಗಳಿಗೆ ಚೆಂಡು ನೀಡಿದ್ದರೆ ಬಹುಶಃ ಹೈದರಾಬಾದ್ ರನ್ ವೇಗಕ್ಕೆ ಕಡಿವಾಣ ಹಾಕಬಹುದಿತ್ತು.

ಮಧ್ಯಮ ಕ್ರಮಾಂಕದ ದಿಢೀರ್ ಕುಸಿತ
ಇನ್ನು ಬ್ಯಾಟಿಂಗ್ ನಲ್ಲಿ ಆರ್ ಸಿಬಿ ಕೆಲವೇ ಆಟಗಾರರನ್ನು ನೆಚ್ಚಿಕೊಂಡಿರುವುದೇ ನಿನ್ನೆಯ ಸೋಲಿಗೆ ಪ್ರಮುಖ ಕಾರಣ ಎಂದ ಹೇಳಬಹುದು. ಕ್ರಿಸ್ ಗೇಯ್ಲ್, ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ವಿಕೆಟ್ ಬೀಳುತ್ತಿದ್ದಂತೆಯೇ ಆರ್ ಸಿಬಿಯ ಇತರೆ ಬ್ಯಾಟ್ಸಮನ್ ಗಳು ನಿಜಕ್ಕೂ ಒತ್ತಡಕ್ಕೊಳಗಾಗಿದ್ದರು. ಆದರೆ ಆ ಒತ್ತಡವನ್ನು ನಿಭಾಯಿಸುವಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗಿ, ಇಲ್ಲದ ಹೊಡೆತಗಳಿಗೆ ಕೈಹಾಕಿ ಪಂದ್ಯ ಕೈ ಚೆಲ್ಲಿದರು. ಇದ್ದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಸ್ಟುವರ್ಟ್ ಬಿನ್ನಿ ಔಟ್ ಆದ ಪರಿ.

ಫೀಲ್ಡಿಂಗ್ ಮಿಸ್ಟೇಕ್ಸ್
ಕ್ರಿಕೆಟ್ ಯಾವುದೇ ಮಾದರಿ ಇರಲಿ..ಎಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ಇರುತ್ತದೆಯೋ ಅಲ್ಲಿ ಗೆಲುವು ಸುಲಭವಾಗುತ್ತದೆ. ಈ ಮಾತಿಗೆ ನಿನ್ನೆಯ ಐಪಿಎಲ್ ಫೈನಲ್ ಪಂದ್ಯ ಕೂಡ ಹೊರತಾಗಿರಲಿಲ್ಲ. ಹೈದರಾಬಾದ್ ತಂಡ ಬ್ಯಾಟಿಂಗ್ ಮಾಡುವಾಗ ಆರ್ ಸಿಬಿ ಆಟಗಾರರು ಸಾಕಷ್ಟು ತಪ್ಪುಗಳನ್ನು ಮಾಡಿದ್ದರು. ವಿಕೆಟ್ ಹಿಂದೆ ಕೆಎಲ್ ರಾಹುಲ್ ವಿಫಲರಾಗಿ 2 ಬೌಂಡರಿಗಳನ್ನು ಬಿಟ್ಟುಕೊಟ್ಟರು. ಇನ್ನು ಬೌಲಿಂಗ್ ವೇಳೆ ಶಿಖರ್ ಧವನ್ ನೀಡಿದ ಕ್ಯಾಚ್ ಅನ್ನು ಕ್ರಿಸ್ ಗೇಯ್ಲ್ ಕೈ ಚೆಲ್ಲಿದ್ದರು. ಡೇವಿಡ್ ವಾರ್ನರ್ ನೀಡಿದ ಕ್ಯಾಚ್ ಅನ್ನು ಕೈಚೆಲ್ಲಿದ ರಾಹುಲ್ ಅದು ಬೌಂಡರಿ ಹೋಗಲು ಪರೋಕ್ಷವಾಗಿ ಕಾರಣರಾದರು. ಬಹುಶಃ ಆ ಎಸೆತದಲ್ಲಿ ವಾರ್ನರ್ ರನ್ನು ಕಟ್ಟಿಹಾಕಿದ್ದರೆ ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿತ್ತು.

ಬೆನ್ ಕಟ್ಟಿಂಗ್ ಆಲ್ ರೌಂಡ್ ಆಟ
ಇನ್ನು ಹೈದರಾಬಾದ್ ಪದ ಸ್ಲಾಗ್ ಓವರ್ ಗಳಲ್ಲಿ ಆರ್ ಸಿಬಿ ಬೌಲರ್ ಗಳನ್ನು ಕಾಡಿದ್ದ ನಿಜಕ್ಕೂ ಆ ತಂಡದ ಕೆಳ ಕ್ರಮಾಂಕದ ಆಟಗಾರ ಬೆನ್ ಕಟ್ಟಿಂಗ್. ವಾನ೯ರ್, ಯುವರಾಜ್ ಔಟಾದ ಬಳಿಕ 200ಕ್ಕಿ೦ತ ಅಧಿಕ ಮೊತ್ತವನ್ನು ಪೇರಿಸುವ ಸನ್‍ರೈಸರ್ಸ್ ಆಸೆ ಮ೦ಕಾಗಿತ್ತು. ಆದರೆ, ಇದನ್ನು ಸಾಧಿಸಿ ತೋರಿಸಿದ್ದು ಬೆನ್ ಕಟ್ಟಿ೦ಗ್ (39*ರನ್, 15 ಎಸೆತ, 3 ಬೌ೦ಡರಿ, 4 ಸಿಕ್ಸರ್). ಯುವರಾಜ್ ಔಟ್ ಅಗಿ ಪೆವಿಲಿಯನ್ ಸೇರಿದ್ದ ವೇಳೆ 16.1 ಓವರ್‍ಗಳಲ್ಲಿ 148 ರನ್ ಪೇರಿಸಿದ್ದ ಸನ್‍ರೈಸರ್ಸ್‍ಗೆ ಕೊನೆಯ 2 ಓವರ್‍ಗಳಲ್ಲಿ ಆಸೀಸ್ ಆಟಗಾರ ಕಟ್ಟಿ೦ಗ್ ಸ್ಪೋಟಕ ಆಟವಾಡುವ ಮೂಲಕ ನೆರವಾದರು. ಕ್ರಿಸ್ ಜೋಡಾ೯ನ್ ಎಸೆದ 19ನೇ ಓವರ್‍ನಲ್ಲಿ 16 ರನ್ ಬ೦ದರೆ, ವ್ಯಾಟ್ಸನ್ ಎಸೆದ ಅ೦ತಿಮ ಓವರ್‍ನಲ್ಲಿ ಬರೋಬ್ಬರಿ 24 ರನ್‍ಗಳು ಹರಿದವು. ಇದರಲ್ಲಿ ಕಟ್ಟಿ೦ಗ್ ಒಬ್ಬರೇ 3 ಸಿಕ್ಸರ್ ಹಾಗೂ 1 ಬೌ೦ಡರಿ ಬಾರಿಸಿದರು. ಅದರ್ಲೂ 2ನೇ ಎಸೆತದಲ್ಲಿ ಬಾರಿಸಿದ ಸಿಕ್ಸರ್ 117 ಮೀಟರ್ ದೂರ ಸಾಗಿದ್ದಲ್ಲದೆ, ಚಿನ್ನಸ್ವಾಮಿ ಮ್ಯೆದಾನದ ಆಚೆ ಹಾರಿಹೋಯಿತು! ಕೊನೆಯ 3 ಓವರ್‍ಗಳಲ್ಲಿ 52 ರನ್ ದೋಚಿದ ಸನ್ ಸುಲಭವಾಗಿ 200ಕ್ಕಿ೦ತ ಅಧಿಕ ಮೊತ್ತ ಪೇರಿಸಿ ಸ೦ಭ್ರಮಿಸಿತು.

ದುಬಾರಿಯಾದ ಆರ್ ಸಿಬಿ ವಿದೇಶಿ ಬೌಲರ್ ಗಳು
ಈ ಹಿಂದಿನ ಪಂದ್ಯದಲ್ಲಷ್ಟೇ ಫಾರ್ಮ್ ಕಂಡುಕೊಂಡಿದ್ದ ಆರ್ ಸಿಬಿ ಬೌಲರ್ ಗಳು ನಿರ್ಣಾಯಕವಾಗಿದ್ದ ಫೈನಲ್ ಪಂದ್ಯದಲ್ಲಿ ನಿಜಕ್ಕೂ ದುಬಾರಿಯಾಗಿ ಪರಿಣಮಿಸಿದ್ದರು. ಪ್ರಮುಖವಾಗಿ ನಾಯಕ್ ವಿರಾಟ್ ಕೊಹ್ಲಿ ವಿದೇಶಿ ಬೌಲರ್ ಗಳ ಮೇಲೆ ಹೊಂದಿದ್ದ ಅತಿಯಾದ ಆತ್ಮ ವಿಶ್ವಾಸ ತಂಡಕ್ಕೆ ಹೊರೆಯಾಯಿತು ಎನಿಸುತ್ತದೆ. ತಂಡದ ಪ್ರಮುಖ ಬೌಲರ್ ಗಳಾಗಿದ್ದ ಶೇನ್ ವಾಟ್ಸನ್ ಮತ್ತು ಕ್ರಿಸ್ ಜೋರ್ಡಾನ್ ಅತೀ ಹೆಚ್ಚು ರನ್ ಗಳನ್ನು ನೀಡುವ ಮೂಲಕ ಹೈದರಾಬಾದ್ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾಗಿದ್ದರು. ಜೋರ್ಡಾನ್ 19ನೇ ಓವರ್ ನಲ್ಲಿ 16 ರನ್ ನೀಡಿದರೆ 20ನೇ ಓವರ್ ನಲ್ಲಿ ವಾಟ್ಸನ್ ಬರೊಬ್ಬರಿ 24 ರನ್ ನೀಡಿದರು.

ಬೌಲರ್ ಗಳಿಂದಲೇ ಹೈದರಾಬಾದ್ ಗೆ ಚಾಂಪಿಯನ್ ಪಟ್ಟ
ಇಡೀ ಟೂರ್ನಿಯಲ್ಲಿ ತನ್ನ ಮೊನಚಾದ ಬೌಲಿಂಗ್ ದಾಳಿಯಿಂದಲೇ ಗಮನ ಸೆಳೆದಿದ್ದ ಸನ್ ರೈಸರ್ಸ್ ತಂಡ ಫೈನಲ್ ಪಂದ್ಯದಲ್ಲೂ ತನ್ನ ಮಾರಕ ಬೌಲಿಂಗ್ ನಿಂದಲೇ ಟ್ರೋಫಿಗೆ ಮುತ್ತಿಟ್ಟಿತು. ಟೂರ್ನಿಯಲ್ಲಿ ಅತೀ ಹೆಚ್ಚು (23) ವಿಕೆಟ್ ಪಡೆದ ಭುವನೇಶ್ವರ್ ಕುಮಾರ್, ಆಕ್ರಮಣಕಾರಿ ಬೌಲರ್ ಮುಸ್ತಫಿಜುರ್ ರೆಹಮಾನ್, ಪ್ರಸ್ತುತ ಗಾಯಗೊಂಡಿರುವ ಆಶೀಶ್ ನೆಹ್ರಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು.

ಬೌಲಿಂಗ್ ರೊಟೇಷನ್ ನಲ್ಲಿ ಎಡವಿದ ಕೊಹ್ಲಿ
ಫೈನಲ್ ನಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ತೆಗೆದುಕೊಂಡ ಕೆಲವು ನಿರ್ಣಯಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಪ್ರಮಖವಾಗಿ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯಲ್ಲಿ ಕೊಹ್ಲಿ ಮಾಡಿದ ಯಡವಟ್ಟು ನಿರ್ಣಯಗಳು ಪಂದ್ಯ ಆರ್ ಸಿಬಿ ಕೈಜಾರುವಂತೆ ಮಾಡಿತ್ತು. ಬೌಲಿಂಗ್ ನಲ್ಲಿ ಅದಾಗಲೇ ದುಬಾರಿಯಾಗಿದ್ದ ಕ್ರಿಸ್ ಜೋರ್ಡಾನ್ ಮತ್ತು ಶೇನ್ ವಾಟ್ಸನ್ ಗೆ ಅಂತಿಮ ಹಂತದ ಓವರ್ ಗಳನ್ನು ನೀಡಿದ್ದು ನಿಜಕ್ಕೂ ಅಚ್ಚರಿಗೆ ಕಾರಣವಾಗಿತ್ತು. ಇನ್ನೂ ಆಶ್ಚರ್ಯಕರ ಅಂಶವೆಂದರೆ ವಾಟ್ಸನ್ ಮತ್ತು ಜೋರ್ಡಾನ್ ದುಬಾರಿಯ ಹೊರತಾಗಿಯೂ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿಗೆ ಫೈನಲ್ ನಲ್ಲಿ ಒಂದೂ ಒವರ್ ಎಸೆಯುವ ಆವಕಾಶವೇ ನೀಡದೇ ಇದ್ದದ್ದು ವಿರಾಟ್ ಕೊಹ್ಲಿ ನಿರ್ಧಾರಗಳನ್ನು ಪ್ರಶ್ನಿಸುವಂತಾಗಿದೆ.
(KP)

Comments are closed.