ಕರ್ನಾಟಕ

ಉತ್ತರಾಖಾಂಡ್ ನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕರ್ನಾಟಕದ 100 ಮಂದಿ ಸಂಕಷ್ಟದಲ್ಲಿ

Pinterest LinkedIn Tumblr

kannadigaru

ಬೆಂಗಳೂರು: ಕಳೆದೆರಡು ದಿನಗಳ ಹಿಂದೆ ಉತ್ತರಾಖಾಂಡ್ ನಲ್ಲಿ ಸಂಭವಿಸಿದ ಮೇಘ ಸ್ಫೋಟದ ಪರಿಣಾಮ ಈಗಾಗಲೇ ಅಲ್ಲಿನ ಸಾಕಷ್ಟು ಪ್ರದೇಶಗಳು ಜಲಾವೃತ್ತವಾಗಿದ್ದು, ಇದೀಗ ಕರ್ನಾಟಕದ 100 ಮಂದಿ ಉತ್ತರಾಖಾಂಡ್ ನಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ನವದೆಹಲಿಯಲ್ಲಿರುವ ಕರ್ನಾಟಕ ಭವನದ ಅಧಿಕಾರಿಗಳು ಮಾಹಿತಿ ನೀಡಿದ್ದು, ಕರ್ನಾಟಕದ 100 ಮಂದಿ ಉತ್ತರಾಖಾಂಡ್ ನಲ್ಲಿ ಸಿಲುಕಿಕೊಂಡಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ, ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಉತ್ತರಾಖಾಂಡ್ ನಲ್ಲಿ ಭಾರೀ ಮಳೆ ಸಂಭವಿಸುತ್ತಿದ್ದಂತೆ ಯಾತ್ರಾರ್ಥಿಗಳ ವಾಹನ ತೆಹ್ರಿ ಜಿಲ್ಲೆಯಲ್ಲಿದ್ದ ಸೇತುವೆ ಮೂಲಕ ಕುಗ್ರಾಮವೊಂದಕ್ಕೆ ಹೋಗಿದ್ದಾರೆ. ಭಾರೀ ಮಳೆಯಾಗುತ್ತಿದ್ದ ಕಾರಣ ಅಲ್ಲಿನ ಮುಖ್ಯರಸ್ತೆ ಹಾನಿಗೊಳಗಾಗಿದೆ. ಹೀಗಾಗಿ ವಾಹನಗಳು ಚಲಿಸಲು ಸಾಧ್ಯವಾಗದೆ ಯಾತ್ರಾರ್ಥಿಗಳು ಅಲ್ಲಿಯೇ ಸಿಲುಕಿಕೊಂಡಿದ್ದಾರೆನ್ನಲಾಗಿದೆ.

3 ಗುಂಪಿನ ಎರಡು ಬಸ್ ಜನರು ಕುಗ್ರಾಮಕ್ಕೆ ಹೋಗಿದ್ದಾರೆ. ಇದರಲ್ಲಿ 1 ಗುಂಪಿನ ಜನ ಬೆಂಗಳೂರಿನವರಾಗಿದ್ದು, ಮತ್ತೊಂದು ಗುಂಪು ತುಮಕೂರು ಜಿಲ್ಲೆಯವರಾಗಿದ್ದಾರೆ. ಇದರಲ್ಲಿ 12 ಮಂದಿ ಧಾರವಾಡದವರಾಗಿದ್ದಾರೆ. ಪ್ರಸ್ತುತ ಜಿಲ್ಲೆಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸಂಪರ್ಕಿಸಿದ್ದು, ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಧಾರವಾಡ ಮೂಲದ ಯಾತ್ರಾರ್ಥಿಯೊಬ್ಬರ ಸಂಬಂಧಿಕ ಗಿರೀಶ್ ಎಂಬುವವರು ಮಾತನಾಡಿದ್ದು, ಭಾನುವಾರ ಬೆಳಗಿನ ಜಾವ 3.30ರ ಸುಮಾರಿಗೆ ನನ್ನ ತಾಯಿಯೊಂದಿಗೆ ಮಾತನಾಡಿದ್ದೆ. ನಂತರ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಗಿರೀಶ್ ಅವರ ತಾಯಿ ಸುಧಾಭಾಯಿ ರಾಮ್ ತೀರ್ತಾ (71) ಹಾಗೂ ಕುಟುಂಬ 11 ಮಂದಿ ಮೇ. 21 ರಂದು ಧಾರವಾಡದಿಂದ ದೆಹಲಿಗೆ ರೈಲಿನಲ್ಲಿ ತೆರಳಿದ್ದರು. ಇದರಂತೆ ದೆಹಲಿಯಿಂದ ವಾಹನವೊಂದರಲ್ಲಿ ಉತ್ತರಾಖಾಂಡ್ ಗೆ ತೆರಳಿದ್ದರು.

ಇನ್ನು ಯಾತ್ರಾರ್ಥಿಗಳ ರಕ್ಷಣೆಗೆ ದೆಹಲಿ ಅಧಿಕಾರಿಗಳು ಮುಂದಾಗಿದ್ದು, ದೆಹಲಿ ನಿವಾಸ ಆಯುಕ್ತರಾಗಿರುವ ಅತುಲ್ ಕುಮಾರ್ ತಿವಾರಿ ತಂಡ ಉತ್ತರಾಖಾಂಡ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಇದರಂತೆ ಯಾತ್ರಾರ್ಥಿಗಳ ರಕ್ಷಣೆಗೆ ವಿಪತ್ತು ನಿರ್ವಹಣಾ ಇಲಾಖೆ ಮುಂದಾಗಿದ್ದು, ಎ 24/7 ಕಂಟ್ರೋಲ್ ರೂಂನ್ನು ನಿಯೋಜಿಸಿ ನಗರ ಜನತೆ ಸಂರಕ್ಷಣೆಗಾಗಿ (080-22340676) ಸಹಾಯವಾಣಿಯನ್ನು ತೆರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

Comments are closed.