ಕರ್ನಾಟಕ

ಚಾಮುಂಡಿ ಬೆಟ್ಟ ತಿರುಪತಿ ಆಗುವುದು ಬೇಡ : ಎಸ್.ಎಲ್.ಭೈರಪ್ಪ

Pinterest LinkedIn Tumblr

slಮೈಸೂರು, ಮೇ 29- ಪುರಾಣ ಪ್ರಸಿದ್ಧ ಶ್ರೀ ಚಾಮುಂಡೇಶ್ವರಿ ಬೆಟ್ಟಕ್ಕೆ ಚತುಷ್ಪಥ ರಸ್ತೆ ಹಾಗೂ ಕಾಂಪ್ಲೆಕ್ಸ್ ನಿರ್ಮಾಣ ವಿರೋಧಿಸಿ ಲೆಟ್ಸ್ ಡೂ ಇಟ್ ಸಂಸ್ಥೆಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಭಟನೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ಚಾಮುಂಡಿ ಬೆಟ್ಟ ಹಾಗೆಯೇ ಇರಲಿ ಇದು ತಿರುಪತಿ ಆಗುವುದು ಬೇಡ ಎಂದು ಆಗ್ರಹಿಸಿದರು.

ಚಾಮುಂಡಿ ಬೆಟ್ಟದಲ್ಲಿ ಕೇವಲ ಮರ-ಗಿಡ ಬೆಳೆಸಿ ಉಳಿಸುವುದಷ್ಟೇ ಅಲ್ಲ, ಬೆಟ್ಟದಲ್ಲಿನ ಕಲ್ಲು , ಮಣ್ಣು ಕೂಡ ರಕ್ಷಣೆಯಾಗಬೇಕು, ಇಲ್ಲದಿದ್ದರೆ ರಾಮನಗರದ ಬೆಟ್ಟದ ಬಂಡೆ ಕರಗಿದಂತಾಗುತ್ತದೆ. ಆ ರೀತಿ ಆಗಬಾರದು ಎಂದು ಹೇಳಿದರು. ಬೆಟ್ಟದಲ್ಲಿ ಭಾರೀ ವಾಹನ ಪಾರ್ಕಿಂಗ್ ಲಾಟ್, ಕಾಂಪ್ಲೆಕ್ಸ್, ಮಾಲ್ ನಿರ್ಮಾಣದ ಅಗತ್ಯವಿಲ್ಲ. ಇಲ್ಲಿಗೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕು. ಅದು ಬಿಟ್ಟು ತಿರುಪತಿ ಮಾದರಿ ಮಾಡಲು ಹೋದರೆ ಬೆಟ್ಟದ ಪರಿಸರಕ್ಕೆ, ಪ್ರಕೃತಿ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಬೆಟ್ಟ ಕುಸಿಯುವಂತೆ ಮಾಡಬಾರದು ಎಂದು ಖಾರವಾಗಿ ಹೇಳಿದರು.

ಮಹಾರಾಣಿ ಪ್ರಮೋದಾದೇವಿ ಒಡೆಯರ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಚಾಮುಂಡಿ ಬೆಟ್ಟದ ನೂತನ ಅಭಿವೃದ್ದಿ ಬೇಡ ಎಂದು ಆಗ್ರಹಿಸಿದರು. ಈ ರೀತಿಯ ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಚಾಮುಂಡಿ ಬೆಟ್ಟದಲ್ಲಿ ಕಾಂಪ್ಲೆಕ್ಸ್ , ಶಾಪಿಂಗ್ ಮಾಲ್‌ನಂತಹ ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಬಾರದು, ಚಾಮುಂಡಿ ಬೆಟ್ಟದ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಆಗ್ರಹಿಸಿದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಗತ್ಯಬಿದ್ದರೆ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಯುವರಾಜ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್, ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ, ಪತ್ರಿಕೋದ್ಯಮಿ ಕೆ.ಬಿ.ಗಣಪತಿ, ಲೆಟ್ಸ್ ಡು ಇಟ್ ಸಂಸ್ಥೆಯ ಪ್ರಶಾಂತ್, ಸುಧೀರ್ ಮತ್ತಿತರರು ಪಾಲ್ಗೊಂಡಿದ್ದರು. ಎಸ್.ಎಲ್.ಭೈರಪ್ಪ ಅವರು ಪ್ರತಿಭಟನೆಗೆ ಚಾಲನೆ ನೀಡಿದ ನಂತರ ನೂರಾರು ಮಂದಿ ಯುವಕ, ಯುವತಿಯರು, ಸಾರ್ವಜನಿಕರು ಕಪ್ಪು ಟೀಶರ್ಟ್ ಧರಿಸಿ ಬೆಟ್ಟ ಹತ್ತಿ ಹೋಗಿ ಮಹಿಷಾಸುರನ ಪ್ರತಿಮೆ ಬಳಿ ಕುಳಿತು ಧರಣಿ ನಡೆಸುವ ಮೂಲಕ ಚಾಮುಂಡಿ ಬೆಟ್ಟವನ್ನು ವಿರೂಪಗೊಳಿಸಬಾರದು ಎಂಬ ಸಂದೇಶ ನೀಡಿದರು.

ಚಾಮುಂಡಿ ಬೆಟ್ಟವನ್ನು ಕಾಂಕ್ರೀಟ್ ಕಾಡು ಮಾಡಬೇಡಿ, ಬೆಟ್ಟದ ಪಾವಿತ್ರ್ರತೆ ಉಳಿಸಿ ಬೆಟ್ಟವನ್ನು ಬೆಟ್ಟವಾಗೇ ಉಳಿಯಲು ಬಿಡಿ ಮುಂತಾದ ಘೋಷಣೆಗಳುಳ್ಳ ಭಿತ್ತಿಪತ್ರವನ್ನು ಪ್ರತಿಭಟನಾಕಾರರು ಪ್ರದರ್ಶಿಸಿ ಹಂಚಿದರು.

Comments are closed.