ಕರ್ನಾಟಕ

ಪರಿಷತ್‌ಗೆ ನಂಜುಂಡಿ, ಬರಗೂರು ನೇಮಕ?

Pinterest LinkedIn Tumblr

Baraguru-ramachandrappaಬೆಂಗಳೂರು : ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಸುಲಲಿತವಾಗಿ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್‌ ಯಶಸ್ವಿಯಾದರೂ, ವಿಧಾನಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಹೈಕಮಾಂಡ್‌ ಕೋಟಾ ಅಡ್ಡಿಯಾಗಿದೆ.

ಹೀಗಾಗಿ, ತನ್ನ ಕೋಟಾಗೆ ಅನುಗುಣವಾಗಿ ಅಭ್ಯರ್ಥಿಗಳ ಹೆಸರನ್ನು ಪರಿಷ್ಕರಿಸಲಿರುವ ಹೈಕಮಾಂಡ್‌ ಶನಿವಾರ ಪಟ್ಟಿ ಪ್ರಕಟಿಸಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ರಾಜ್ಯಸಭೆಗೆ ಮೂರನೇ ಅಭ್ಯರ್ಥಿಯಾಗಿ ಕೆ.ಸಿ.ರಾಮಮೂರ್ತಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಸಜ್ಜಾಗಿದ್ದರೂ, ಪರಿಷತ್‌ ಚುನಾವಣೆಯಲ್ಲಿ ಈ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ. ಕಣದಲ್ಲಿರುವ ಪಕ್ಷೇತರ ಅನಿಲಕುಮಾರ್‌ ಅವರನ್ನು ಬೆಂಬಲಿಸುವ ಮಟ್ಟಕ್ಕೆ ತನ್ನ ಪಾತ್ರ ಸೀಮಿತಗೊಳಿಸಿಕೊಂಡಿದೆ.

ಉಳಿದಂತೆ ವಿಧಾನಸಭೆಯಿಂದ ಪರಿಷತ್ತಿಗೆ ಸುಲಭವಾಗಿ ಗೆಲ್ಲಲು ಸಾಧ್ಯವಿರುವ ನಾಲ್ಕು ಸ್ಥಾನಗಳು ಮತ್ತು ಮೂರು ನಾಮ ನಿರ್ದೇಶನ ಸ್ಥಾನಗಳು ಸೇರಿ ಒಟ್ಟು ಏಳು ಸ್ಥಾನಗಳ ಪೈಕಿ ಹೈಕಮಾಂಡ್‌ ತನ್ನ ಕೋಟಾ ಆಗಿ ಮೂರು ಮಂದಿಯನ್ನು ಸೂಚಿಸಿದ್ದರಿಂದ ಸಮಸ್ಯೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅವರು ಒಯ್ದಿದ್ದ ಪಟ್ಟಿಯ ಜೊತೆಗೆ ಹೈಕಮಾಂಡ್‌ ಕೂಡ ತನ್ನ ಪಟ್ಟಿಯನ್ನು ಸೇರಿಸಿದ್ದರಿಂದ ತುಸು ಗೊಂದಲವಾಗಿದ್ದು, ಜಾತಿ ಹಾಗೂ ಪ್ರಾಂತೀಯ ಸಮೀಕರಣ ಹೊಂದಿಸಬೇಕಿದೆ. ಹೀಗಾಗಿ ರಾಜ್ಯ ನಾಯಕರು ನೀಡಿದ ಹೆಸರುಗಳನ್ನು ಸ್ವೀಕರಿಸಿರುವ ಹೈಕಮಾಂಡ್‌ ಶನಿವಾರ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಲಿಂಗಪ್ಪ,ಪಿಆರ್‌ ರಮೇಶ್‌, ಕೆ.ಪಿ. ನಂಜುಂಡಿ, ಬರಗೂರು ಖಚಿತ?
ನಂಬಲರ್ಹ ಮೂಲಗಳ ಪ್ರಕಾರ ವಿಧಾನಸಭೆಯಿಂದ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನೇರವಾಗಿ ಗೆಲ್ಲಲು ಸಾಧ್ಯವಿರುವ ನಾಲ್ಕು ಸ್ಥಾನಗಳಿಗೆ ಒಕ್ಕಲಿಗರಿಂದ ಸಿ.ಎಂ. ಲಿಂಗಪ್ಪ, ಹಿಂದುಳಿದವರಿಂದ ಪಿ.ಆರ್‌. ರಮೇಶ್‌ ಹೆಸರು ಅಂತಿಮಗೊಂಡಿದ್ದರೆ, ಲಿಂಗಾಯತರ ಪೈಕಿ ಕೊಂಡಜ್ಜಿ ಮೋಹನ್‌ ಮತ್ತು ರಾಣಿ ಸತೀಶ್‌ ಮತ್ತು ಪರಿಶಿಷ್ಟರ ಪೈಕಿ ಆರ್‌.ಬಿ. ತಿಮ್ಮಾಪುರ, ಎಂ.ಎಸ್‌. ಬಸವರಾಜು ಅವರಿಬ್ಬರ ಪೈಕಿ ಒಬ್ಬರ ಹೆಸರು ಅಂತಿಮಗೊಳ್ಳಬಹುದು ಎನ್ನಲಾಗಿದೆ.

ಇನ್ನು ನಾಮನಿರ್ದೇಶನದ ಪೈಕಿ ಬರಗೂರು ರಾಮಚಂದ್ರಪ್ಪ ಮತ್ತು ಕೆ.ಪಿ. ನಂಜುಂಡಿ ಅವರ ಹೆಸರು ಬಹುತೇಕ ಖಚಿತಗೊಂಡಿದೆ. ನಟಿ ಭಾವನಾ ಅವರ ಹೆಸರು ಪಟ್ಟಿಯಲ್ಲಿದೆ. ಇದಲ್ಲದೆ, ಮುಸ್ಲಿಂ ಮಹಿಳೆಯೊಬ್ಬರ ಹೆಸರು ಇದೆ ಎನ್ನಲಾಗಿದೆ.

ಸಂಭಾವ್ಯರ ಪಟ್ಟಿ
ವಿಧಾನಸಭೆಯಿಂದ ವಿಧಾನಪರಿಷತ್ತಿಗೆ
ಪರಿಶಿಷ್ಟರು- ಆರ್‌.ಬಿ. ತಿಮ್ಮಾಪುರ ಅಥವಾ ಎಂ.ಎಸ್‌. ಬಸವರಾಜು

ಲಿಂಗಾಯತರು- ರಾಣಿ ಸತೀಶ್‌ ಅಥವಾ ಕೊಂಡಜ್ಜಿ ಮೋಹನ್‌

ಹಿಂದುಳಿದ ವರ್ಗ- ಪಿ.ಆರ್‌. ರಮೇಶ್‌

ಒಕ್ಕಲಿಗ- ಸಿಎಂ. ಲಿಂಗಪ್ಪ

ನಾಮನಿರ್ದೇಶನ ಬರಗೂರು ರಾಮಚಂದ್ರಪ್ಪ ಕೆ.ಪಿ. ನಂಜುಂಡಿ ಭಾವನಾ ಅಥವಾ ಮುಸ್ಲಿಂ ಮಹಿಳೆ
-ಉದಯವಾಣಿ

Comments are closed.