ಕರ್ನಾಟಕ

ಟಿಕೆಟ್ ಪಡೆದ ಜಾಣರು : ಕಿತ್ತಾಟದ ನಡುವೆ ಅಭ್ಯರ್ಥಿಗಳ ಆಖೈರು ರಾಜ್ಯಸಭೆ-ವಿಧಾನ ಪರಿಷತ್ ಚುನಾವಣೆ

Pinterest LinkedIn Tumblr

con-BJP-jds-715x350ಬೆಂಗಳೂರು, ಮೇ ೨೮- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್, ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿವೆ. ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫರ್ನಾಂಡೀಸ್ ಜೈರಾಂರಮೇಶ್ ಹೆಸರು ಅಂತಿಮವಾಗಿದ್ದು, ಮೂರನೇ ಅಭ್ಯರ್ಥಿಯಾಗಿ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ ಕಣಕ್ಕಿಳಿಯಲಿದ್ದಾರೆ. ವಿಧಾನ ಪರಿಷತ್‌ನ 7 ಸ್ಥಾನಗಳ ಪೈಕಿ ಕಾಂಗ್ರೆಸ್‌ಗೆ ಲಭ್ಯವಾಗುವ 4 ಸ್ಥಾನಗಳಿಗೆ ಹಿರಿಯ ಕಾಂಗ್ರೆಸ್ ಮುಖಂಡ ಮೋಹನ್ ಕೊಂಡಜ್ಜಿ, ಬೆಂಗಳೂರಿನ ಮಾಜಿ ಮೇಯರ್ ಪಿ.ಆರ್. ರಮೇಶ್, ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಜೆ.ಸಿ. ಚಂದ್ರಶೇಖರ ಇವರ ಹೆಸರು ಅಂತಿಮಗೊಂಡಿದ್ದು, ನಾಲ್ಕನೇ ಅಭ್ಯರ್ಥಿ ಸ್ಥಾನಕ್ಕೆ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹಾಗೂ ಎಲ್. ಹನುಮಂತಯ್ಯ ನಡುವೆ ಪೈಪೋಟಿ ನಡೆದು, ಅಂತಿಮವಾಗಿ ಆರ್.ವಿ. ತಿಮ್ಮಾಪುರವರಿಗೆ ಟಿಕೇಟ್ ನಿಕ್ಕಿಯಾಗಿದೆ.

ದೆಹಲಿಗೆ ನಿನ್ನೆ ತೆರಳಿದ್ದ ಸಿ.ಎಂ. ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿಯವರ ಜೊತೆ ಚರ್ಚಿಸಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದರು.

ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರಾಗಿ ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ, ಆಭರಣ ವ್ಯಾಪಾರಿ ಕೆ.ಪಿ. ನಂಜುಂಡಿ ಇವರ ಹೆಸರು ಅಂತಿಮಗೊಂಡಿದ್ದು, ಮೂರನೇ ಸ್ಥಾನಕ್ಕೆ ಕೊಡಗಿನ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಅಚ್ಚಯ್ಯ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ನಡುವೆ ಪೈಪೋಟಿ ಇದ್ದು, ಅಂತಿಮವಾಗಿ ಸಿ.ಎಂ. ವಿವೇಚನೆಗೆ ಈ ಅಭ್ಯರ್ಥಿ ಆಯ್ಕೆಯನ್ನು ನೀಡಲಾಗಿದೆ.

ರಾಜ್ಯಸಭೆ 3ನೇ ಅಭ್ಯರ್ಥಿ

ಡಿ.ಕೆ.ಶಿ.ಗೆ ಜವಾಬ್ದಾರಿ ಇಂದು ಸಂಜೆಯೊಳಗಾಗಿ ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗಲಿದ್ದು, ರಾಜ್ಯಸಭೆಗೆ ಮೂರನೇ ಅಭ್ಯರ್ಥಿಯಾಗಲಿರುವ ಕೆ.ಸಿ. ರಾಮಮೂರ್ತಿಯವರ ಗೆಲುವಿನ ಜವಾಬ್ದಾರಿಯನ್ನು ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರಿಗೆ ವಹಿಸಿದ್ದಾರೆ.

ಬಿಜೆಪಿಯಿಂದ ಸೋಮಣ್ಣ, ವೆಂಕಯ್ಯ

ಬಿಜೆಪಿ ಸಹ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ರಾಜ್ಯಸಭೆಗೆ ಕೇಂದ್ರ ಸಚಿವ ವೆಂಕಯ್ಯನಾಯ್ಡು. ವಿಧಾನ ಪರಿಷತ್‌ಗೆ ಮಾಜಿ ಸಚಿವ ವಿ. ಸೋಮಣ್ಣರವರ ಹೆಸರು ಅಂತಿಮಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಆರ್.ಎಸ್.ಎಸ್ ಮುಖಂಡ ಡಿ.ಕೆ. ಸದಾಶಿವರವರಿಗೆ ಟಿಕೇಟ್ ನೀಡಲು ಒಲವು ಹೊಂದಿದ್ದರಾದರೂ ಮುಖಂಡರ ಒತ್ತಡಕ್ಕೆ ಮಣಿದು ಕೊನೆಗೆ ವಿ. ಸೋಮಣ್ಣರವರಿಗೆ ಟಿಕೇಟ್ ನೀಡಲು ಸಮ್ಮತಿ ವ್ಯಕ್ತಪಡಿಸಿದ್ದು ಕಾರಣ ವಿ. ಸೋಮಣ್ಣರವರ ಆಯ್ಕೆ ಸುಗಮವಾಗಿದೆ.

ಬಿಜೆಪಿಯಿಂದ ವಿಧಾನ ಪರಿಷತ್‌ಗೆ ಎರಡನೇ ಅಭ್ಯರ್ಥಿಯನ್ನು ಇಳಿಸುವ ಬಗ್ಗೆ ಇನ್ನೂ ತೀರ್ಮಾನ ಅಂತಿಮವಾಗಿಲ್ಲ. ಪಕ್ಷ ಒಪ್ಪಿದರೆ ಎರಡನೇ ಅಭ್ಯರ್ಥಿಯಾಗಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಕಣಕ್ಕಿಳಿಯಲಿದ್ದಾರೆ.

ಜೆಡಿಎಸ್ ಉದ್ಯಮಿಗೆ ಮಣೆ

ಜೆಡಿಎಸ್‌ನಿಂದ ಉದ್ಯಮಿ ಮಂಗಳೂರು ಮೂಲದ ಫಾರೂಕ್‌ರವರಿಗೆ ಟಿಕೇಟ್ ಖಚಿತವಾಗಿದ್ದು, ಕಾಂಗ್ರೆಸ್ ಪಕ್ಷ ಸಹ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಜೆಡಿಎಸ್‌ನ ಭಿನ್ನಮತೀಯ ಶಾಸಕರು ಹೇಳಿರುವುದರಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸುಲಭವಲ್ಲ. ಹಾಗಾಗಿ ಚುನಾವಣೆ ಕುತೂಹಲ ಮೂಡಿಸಿದೆ.

ಜೆಡಿಎಸ್‌ ತನ್ನ ಪಾಲಿಗೆ ಬರುವ ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಹಾಸನದ ಕೆ.ವಿ. ನಾರಾಯಣಸ್ವಾಮಿಯವರ ಹೆಸರನ್ನು ಅಂತಿಮಗೊಳಿಸಿದೆ. ಇವರೆಲ್ಲಾ ಬರುವ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಈ ತಿಂಗಳ 31 ರಂದು ಕಡೆಯ ದಿನ.

Comments are closed.