ಕರ್ನಾಟಕ

ವೀರಾಜಪೇಟೆ ಬಳಿ ಕಾರು – ಲಾರಿ ನಡುವೆ ಭೀಕರ ಅಪಘಾತಕ್ಕೆ 3 ಬಲಿ

Pinterest LinkedIn Tumblr

virajapete

ಮೈಸೂರು: ಕಾರು ಹಾಗೂ ಲಾರಿ ನಡುವೆ ನಡೆದ ಮುಖಾಮುಖಿ ಡಿಕ್ಕಿ ಪರಿಣಾಮ ಮೂರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ವೀರಾಜಪೇಟೆ ತಾಲೂಕಿನ ಪೆರುಂಬಾಡಿ ಗ್ರಾಮದ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಕೇರಳದ ವಡಗರ ಗ್ರಾಮದ ನಿವಾಸಿಗಳಾದ ಮೆಹರಾಜ್(17), ಆಸೀಪ್ (28) ಹಾಗೂ ಯೂನಿಫ್ (18) ಎಂಬುವವರೇ ಅಪಘಾತದಲ್ಲಿ ದುರ್ಮರಣ ಹೊಂದಿದ ದುರ್ದೈವಿಗಳು.

ಕೇರಳದ ವಡಗರ ಗ್ರಾಮದಿಂದ ತವೇರ ಕಾರಿನಲ್ಲಿ ಮೆಹರಾಜ್, ಆಸೀಪ್, ಯೂನಿಫ್ ಮಿನ್ ಹಾಜ್, ಆಶಿಕ್ ಸೇರಿದಂತೆ 10 ಮಂದಿ ಬೆಂಗಳೂರಿಗೆ ಬರುತ್ತಿದ್ದರು. ಸಕಲೇಶ್‌ಪುರದಿಂದ ಶುಂಠಿ ತುಂಬಿದ ಲಾರಿ ಕೇರಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ವೀರಾಜಪೇಟೆ ತಾಲೂಕಿನ ಪೆರಂಬಾಡಿ ಗ್ರಾಮದ ಬಳಿ ಲಾರಿಗೆ ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿ ಕಾರಿನ ಮೇಲೆ ಉರುಳಿ ಬಿದ್ದಿತು ಎನ್ನಲಾಗಿದೆ.

ಈ ದುರ್ಘಟನೆಯಲ್ಲಿ ಮೆಹರಾಜ್, ಆಸೀಫ್, ಯೂನಿಫ್ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಇಹಲೋಕ ತ್ಯಜಿಸಿದರು. ಗಂಭೀರವಾಗಿ ಗಾಯಗೊಂಡ ಮಿನ್ ಹಾಜ್ (19) ಆಶಿಕ್ ರವರನ್ನು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸಣ್ಣಪುಟ್ಟ ಗಾಯಗಳಾದ 5 ಮಂದಿಯನ್ನು ಕೇರಳಕ್ಕೆ ವಾಪಸು ಕಳುಹಿಸಲಾಗಿದೆ.

ಈ ಭೀಕರ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಹೊರತೆಗೆಯಲು ಪೋಲಿಸರು ಹರ ಸಾಹಸಪಟ್ಟರು. ಕಾರು ಲಾರಿಗೆ ರಭಸವಾಗಿ ಡಿಕ್ಕಿಯಾದ್ದರಿಂದ ಸಂಪೂರ್ಣ ಅಪ್ಪಚ್ಚಿಯಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ವೀರಾಜಪೇಟೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.