ಬೆಂಗಳೂರು, ಮೇ ೨೫- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಲು ಗೃಹ ಕಛೇರಿ ಕೃಷ್ಣಾಗೆ ಬಂದ ದಲಿತ ಮಹಿಳೆಗೆ ಅಪಮಾನ ಮಾಡಿ ಆಕೆಯನ್ನು ಬಂಧಿಸಲು ಕಾರಣರಾದ ಗೃಹ ಕಛೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಕಛೇರಿ ಮುಂದೆ ಧರಣಿ ನಡೆಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದಿಲ್ಲಿ ಪುನರುಚ್ಚರಿಸಿದರು.
ಅಹವಾಲು ಹೇಳಿಕೊಳ್ಳಲು ಮುಖ್ಯಮಂತ್ರಿ ಕಛೇರಿಗೆ ಬಂದ ಮಹಿಳೆಯ ಮನವಿಯನ್ನು ಅಧಿಕಾರಿಗಳು ಸ್ವೀಕರಿಸಿಕೊಳ್ಳಬಹುದಿತ್ತು. ಈ ವಿಚಾರವನ್ನು ಆನಂತರ ಮುಖ್ಯಮಂತ್ರಿ ಅವರ ಗಮನಕ್ಕೂ ತರಬಹುದಿತ್ತು. ಅದರ ಬದಲು ಗಂಟೆಗಟ್ಟಲೆ ಕಾಯಿಸಿ ಅಪಮಾನ ಮಾಡಿ ನಂತರ ಪೊಲೀಸರಿಗೆ ಒಪ್ಪಿಸಿದ ಅಧಿಕಾರಿಗಳ ಧೋರಣೆ ಖಂಡನೀಯ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಲಿತ ಮಹಿಳೆಯ ಅಹವಾಲು ಸ್ವೀಕರಿಸದ ಅಧಿಕಾರಿಗಳಿಂದ ಕರ್ತವ್ಯಲೋಪ ಉಂಟಾಗಿದೆ. ಈ ಕಾರಣಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತ ಮಹಿಳೆ ಮುಖ್ಯಮಂತ್ರಿ ಕಛೇರಿಗೆ ಬಾಂಬ್ ಇಟ್ಟುಕೊಂಡು ಬಂದಿರಲಿಲ್ಲ. ತಾವು ವಾಸವಾಗಿರುವ ಮನೆಗೆ ಹಕ್ಕುಪತ್ರ ಕೇಳುವ ಸಂಬಂಧ ಬಂದಿದ್ದರು. ಕನಿಷ್ಠ ಪಕ್ಷ ಆಕೆಯಿಂದ ಮನವಿಯನ್ನು ಅಧಿಕಾರಿಗಳು ಸ್ವೀಕರಿಸಿ ಸಮಾಧಾನಪಡಿಸಬೇಕಾಗಿತ್ತು ಎಂದರು.
ಇನ್ನೆರಡು ದಿನಗಳಲ್ಲಿ ಈ ವಿಚಾರದಲ್ಲಿ ಆಕೆಗೆ ನ್ಯಾಯ ದೊರಕಿಸದಿದ್ದಲ್ಲಿ ಕೃಷ್ಣಾ ಎದುರು ಧರಣಿ ಮಾಡುತ್ತೇನೆ. ಈ ವಿಚಾರದಲ್ಲಿ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ಬಿಡಿಎ ಮತ್ತಿತರ ಸಂಸ್ಥೆಗಳಿಂದ ಕೆರೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವುದಿಲ್ಲ ಎಂದು ಸಿದ್ಧರಾಮಯ್ಯನವರು ನಿನ್ನೆ ನಗರ ಪ್ರದಕ್ಷಿಣೆ ವೇಳೆ ಹೇಳಿರುವುದಕ್ಕೆ ಆಕ್ಷೇಪಿಸಿದ ಅವರು, ಖಾಸಗಿಯವರು ಕೆರೆ ಒತ್ತುವರಿ ಮಾಡಿಕೊಂಡಿರುವುದನ್ನು ಮಾತ್ರ ತೆರವುಗೊಳಿಸುವುದಾಗಿ ಹೇಳಿದ್ದಾರೆ. ಖಾಸಗಿಯವರಿಗೆ ಬಡಾವಣೆ ನಿರ್ಮಿಸಲು ಅನುಮತಿ ಕೊಟ್ಟವರಾದರೂ ಯಾರು ಎಂದು ಪ್ರಶ್ನಿಸಿದರು.
ಬೇಡಿಕೆ ಈಡೇರಿಸಿ
ಪೊಲೀಸ್ ಪೇದೆಗಳು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ನಾಳೆಗೆ 2 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ವಿಕಾಸಪರ್ವ’ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಎರಡು ವರ್ಷಗಳಲ್ಲಿ ಬಿಜೆಪಿ ನಾಯಕರ ವಿಕಾಸ ಆಗಿದೆಯೇ ಹೊರತು, ದೇಶದ ವಿಕಾಸ ಕಾಣುತ್ತಿಲ್ಲ ಎಂದರು.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುವುದನ್ನು ಬಿಟ್ಟು ದೇಶದ ಸಮಸ್ಯೆಗಳಪರಿಹಾರಕ್ಕೆ ಪ್ರಯತ್ನಿಸಬೇಕು ಎಂದರು.