ಕರ್ನಾಟಕ

ಕಾಲೇಜು ಅತಿಥಿ ಉಪನ್ಯಾಸಕರ ಧರಣಿ

Pinterest LinkedIn Tumblr

upana

ಬೆಂಗಳೂರು, ಮೇ ೨೫: ಅತಿಥಿ ಉಪನ್ಯಾಸಕ ಸೇವೆ ವಿಲೀನಕ್ಕೆ ಕಾನೂನಾತ್ಮಕ ತೊಡಕುಗಳ ನಿವಾರಣೆಗೆ ತಜ್ಞರ ಸಮಿತಿ ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಉಪನ್ಯಾಸಕರ ಸಂಘದ ಸದಸ್ಯರು ನಗರದಲ್ಲಿಂದು ಧರಣಿ ನಡೆಸಿದರು.
ಸಂಘದ ಗೌರವಾಧ್ಯಕ್ಷ ಬಿ.ರಾಜಶೇಖರಮೂರ್ತಿ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ೧೪೫೩೧ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಸಮಾವೇಶ, ಉಪವಾಸ ಸತ್ಯಾಗ್ರಹ, ಪ್ರತಿಭಟನೆ, ತರಗತಿ ಬಹಿಷ್ಕಾರ ಮೂಲಕ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೂ ಮುಂದಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲು ಇನ್ನು ಕೆಲವೇ ದಿನಗಳಿವೆ. ಆದರೂ ಸರ್ಕಾರ ಇನ್ನು ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷ ಶ್ರೀನಿವಾಸಾಚಾರ್ ಮಾತನಾಡಿ, ೨೦೧೬-೧೭ನೇ ಸಾಲಿಗೆ ಹೊಸದಾಗಿ ಆನ್‌ಲೈನ್ ಮೂಲಕ ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳದೆ ಈಗ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಮುಂದುವರಿಸಬೇಕು. ಅತಿಥಿ ಉಪನ್ಯಾಸಕರ ಸೇವಾ ಹಿರಿತನ ಮತ್ತು ವಯೋಮಿತಿಯನ್ನು ಪರಿಗಣಿಸಿ ಸೇವೆಯನ್ನು ವಿಲೀನಗೊಳಿಸಬೇಕು. ಈ ಬಗ್ಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸು ತಜ್ಞರ ಸಮಿತಿ ರಚಿಸಬೇಕು. ಸೇವೆ ವಿಲೀನಗೊಳ್ಳುವವರೆಗೆ ಮಾಸಿಕ ೨೫ ಸಾವಿರ ವೇತನ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಹೆರಿಗೆಗೆ ವೇತನ ಸಹಿತ ಕನಿಷ್ಠ ೩ ತಿಂಗಳು ರಜೆ ನೀಡಬೇಕು ಎಂದು ಒತ್ತಾಯಿಸಿದರು.

ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಹಾಕಿದ್ದ ಎಂಟೆಕ್ ವಿದ್ಯಾರ್ಥಿಗಳ ಸೆರೆ
ಬೆಂಗಳೂರು,ಮೇ.೨೫-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಇಡಲಾಗಿದೆ ಎಂದು ಅಧ್ಯಾಪಕರ ಹೆಸರಿನಲ್ಲಿ ಬೆದರಿಕೆ ಹಾಕಿದ್ದ ಇಬ್ಬರು ಎಂಟೆಕ್ ವಿದ್ಯಾರ್ಥಿಗಳನ್ನು ಬಂಧಿಸುವಲ್ಲಿ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿರುವ ಬಸವೇಶ್ವರನಗರದ ರಾಘವೇಂದ್ರ, ಉಲ್ಲಾಳ ಉಪನಗರದ ಹೊಯ್ಸಳ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಕಳೆದ ಮೇ ೨೨ ರಂದು ವಿಮಾನನಿಲ್ದಾಣದ ಅಧಿಕಾರಿಗಳಿಗೆ ಇಮೇಲ್ ಮಾಡಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದಾರೆ.
ಇಮೇಲ್‌ನಲ್ಲಿ ಅಧಿಕಾರಿಗಳಿಗೆ ೧೦ ಮಿಲಿಯನ್ ಡಾಲರ್ ಕೊಡಬೇಕು ಮೇಲ್ ಮಾಡಿರುವ ಫೋಟೋಗಳಲ್ಲಿರುವ ನಾವು ದಾವೂದ್ ಕಡೆಯವರಾಗಿದ್ದು, ಅವರನ್ನು ಬಿಡಬೇಕು. ಇಲ್ಲವಾದ್ರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ವಿದ್ಯಾರ್ಥಿಗಳು ಮೂವರು ಅಧ್ಯಾಪಕರ ಹೆಸರು ಭಾವಚಿತ್ರ ಹಾಕಿ ಇ-ಮೇಲ್ ರವಾನಿಸಿದ್ದರು.
ಅಧ್ಯಾಪಕರಾದ ಪ್ರಸನ್ನ ರಾಜು, ಧನ್ ರಾಜು ಹಾಗೂ ಚಂದನ್ ರಾಜ್ ಅವರ ಹೆಸರಿನಲ್ಲಿ ಹೊಸದಾಗಿ ಇಮೇಲ್ ಸೃಷ್ಠಿಸಿ ಕಳುಹಿಸಿದ್ದರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಯಲಹಂಕ ಉಪನಗರ ಪೊಲೀಸರು ಆರೋಪಿಗಳನ್ನು ಬಂಧಿಸುಬಲ್ಲಿ ಯಶಸ್ವಿಯಾಗಿದ್ದಾರೆ ಎಂದು ಡಿಸಿಪಿ ಡಾ.ಪಿ.ಎಸ್.ಹರ್ಷ ಅವರು ತಿಳಿಸಿದ್ದಾರೆ.
ಅಧ್ಯಾಪಕರು ಕಿರುಕುಳ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ಪೊಲೀಸರಿಗೆ ಸಿಕ್ಕಿಸಲು ತಮ್ಮ ಅಧ್ಯಾಪಕರ ಇ-ಮೇಲ್‌ನಿಂದಲೇ ಈ ವಿದ್ಯಾರ್ಥಿಗಳು ಬೆದರಿಕೆ ಕಳುಹಿಸಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು.

ಪತಿಯ ಕಿರುಕುಳ ಪತ್ನಿ ನೇಣಿಗೆ ಶರಣು

ಬೆಂಗಳೂರು, ಮೇ ೨೫- ಗಂಡನ ಕಿರುಕುಳ ಹಾಗೂ ಅನೈತಿಕ ಸಂಬಂಧದಿಂದ ಬೇಸತ್ತ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಮ್ಮ (೩೦) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಕೊನಘಟ್ಟದ ಮುನಿಕೃಷ್ಣಪ್ಪ (ಕಿಟ್ಟಿ) ಎಂಬುವವನನ್ನು ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಮುನಿಕೃಷ್ಣಪ್ಪ ಪ್ರಜಾವಿಮೋಚನಾ ಚಳವಳಿ (ಸ್ವಾಭಿಮಾನ ಸಂಘದ) ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷರಾಗಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಗಂಡನ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಜಗಳ ನಡೆದಿದೆ. ಮುನಿಕೃಷ್ಣಪ್ಪ ಹೆಂಡತಿಗೆ ಮನಬಂದಂತೆ ಥಳಿಸಿ ಹೊರಹೋಗಿದ್ದಾನೆ. ಇದರಿಂದ ಮನನೊಂದ ಲಕ್ಷ್ಮಮ್ಮ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಇದನ್ನು ಕಂಡ ಅಕ್ಕಪಕ್ಕದವರು ಆಕೆಯನ್ನು ಕೂಡಲೇ ಯಲಹಂಕದ ನವಚೇತನ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ, ಸಾವನ್ನಪ್ಪಿದ್ದಾಳೆ. ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.

ಪರಿಚಿತ ಯುವತಿ ಮೇಲೆ ನಾಲ್ವರಿಂದ ಅತ್ಯಾಚಾರ
ಚಿಕ್ಕಬಳ್ಳಾಪುರ, ಮೇ ೨೫ – ಪರಿಚಯಸ್ಥ ಯುವತಿಯ ಮೇಲೆ ಆಟೋ ಚಾಲಕ ಹಾಗೂ ಆತನ ಮೂವರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಹೀನಕೃತ್ಯ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರದಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದ ಗಿರೀಶ್, ಶಿವಕುಮಾರ್, ಶಶಿಧರ್ ಮತ್ತು ರಮೇಶ್ ಬಾಬು ಅವರನ್ನು ಅತ್ಯಾಚಾರ ಆರೋಪದಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಗಿರೀಶ್‌ನಿಗೆ ಕೆಲವು ತಿಂಗಳ ಹಿಂದೆ ಮೊಬೈಲ್ ಮೂಲಕ ಯುವತಿಯೊಬ್ಬಳ ಪರಿಚಯ ಬೆಳೆದಿದ್ದು, ನಿರಂತರವಾಗಿ ಆಕೆಯೊಂದಿಗೆ ಮಾತನಾಡುತ್ತಿದ್ದ. ಮೂರು ದಿನಗಳ ಹಿಂದೆ ಆಕೆಯನ್ನು ಚಿಕ್ಕಬಳ್ಳಾಪುರದ ದಿಣ್ಣೆ ಹೊಸಹಳ್ಳಿಯ ಮನೆಯೊಂದಕ್ಕೆ ಆಕೆಯನ್ನು ಕರೆತಂದು ಅತ್ಯಾಚಾರವೆಸಗಿದ್ದಾನೆ. ಬಳಿಕ ತನ್ನ ಮೂವರು ಗೆಳೆಯರನ್ನು ಕರೆಸಿ ಅವರಿಗೂ ಅತ್ಯಾಚಾರವೆಸಗಲು ಅನುವು ಮಾಡಿಕೊಟ್ಟಿದ್ದಾನೆ.
ಆಟೋವೊಂದರಲ್ಲಿ ಯುವತಿಯೊಬ್ಬಳನ್ನು ಕೂರಿಸಿಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಟೋ ಚಾಲಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.ತಕ್ಷಣ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಜೆಡಿಎಸ್ ದಲಿತ ಮುಖಂಡನ ಕಾರಿಗೆ ಬೆಂಕಿ
ಬೆಂಗಳೂರು,ಮೇ.೨೫-ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ಮನೆಯ ಮುಂಭಾಗ ನಿಲ್ಲಿಸಿದ್ದ ಜೆಡಿಎಸ್ ರಾಜ್ಯ ಪರಿಶಿಷ್ಟಜಾತಿ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವಿ. ನರಸಿಂಹಮೂರ್ತಿ ಅವರ ಫಾರ್ಚುನರ್ ಕಾರಿಗೆ ನಿನ್ನೆ ಮಧ್ಯರಾತ್ರಿ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ನಾಗಪುರದ ಕದಂಬ ಹೊಟೇಲ್ ಬಳಿ ವಾಸಿಸುತ್ತಿದ್ದ ನರಸಿಂಹ ಮೂರ್ತಿ ಅವರು ಮನೆ ಮುಂದೆ ಫಾರ್ಚುನರ್ ಕಾರು ನಿಲ್ಲಿಸಿ ಮಲಗಿದ್ದು ಮಧ್ಯರಾತ್ರಿ ೧.೩೦ರ ವೇಳೆ ದುಷ್ಕರ್ಮಿಗಳು ಕಾರಿಗೆ ಬೆಂಕಿಹಚ್ಚಿ ಪರಾರಿಯಾಗಿದ್ದಾರೆ ಅಕ್ಕಪಕ್ಕದ ಮನೆಯವರು ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ನರಸಿಂಹ ಮೂರ್ತಿ ಅವರಿಗೆ ವಿಷಯ ತಿಳಿಸಿ ಎಲ್ಲರೂ ಸೇರಿ ಬೆಂಕಿ ನಂದಿಸಿದ್ದಾರೆ.
ಕಾರಿನ ಹಿಂಭಾಗಕ್ಕೆ ಪೂರ್ಣವಾಗಿ ೨ ದಿನಗಳ ಹಿಂದೆಯಷ್ಟೆ “ಹೆಚ್.ಡಿ.ಕುಮಾರಣ್ಣ ೨೦೧೮ರ ಮುಖ್ಯಮಂತ್ರಿ ಎಂಬ ಕಾರಿನ ಸ್ಟಿಕ್ಕರ್ ಅಂಟಿಸಿ ಭಾವಚಿತ್ರ ಹಾಕಿದ್ದು ಅದನ್ನು ಸಹಿಸದ ದುಷ್ಕರ್ಮಿಗಳು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ನರಸಿಂಹ ಮೂರ್ತಿ ಅವರು ದೂರಿದ್ದಾರೆ.
ಹೆಚ್.ಡಿ. ಕುಮಾರಣ್ಣ ೨೦೧೮ರ ಮುಖ್ಯಮಂತ್ರಿ ಎಂಬ ಸ್ಟಿಕ್ಕರ್ ರಾಜ್ಯಾದ್ಯಂತ ೧ ಲಕ್ಷ ವಾಹನಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಅಂಟಿಸುವ ಮೂಲಕ ಅಭಿಯಾನ ಆರಂಭಿಸುವುದಾಗಿ ಹೇಳಿದ್ದರಿಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ನರಸಿಂಹ ಮೂರ್ತಿ ಅವರು ಮಹಾಲಕ್ಷ್ಮಿ ಲೇಔಟ್ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಅರಸೀಕೆರೆ ಬಳಿ ರಸ್ತೆ ಅಪಘಾತ: ಬೆಂಗಳೂರಿನ ಇಬ್ಬರ ದುರ್ಮರಣ
ಅರಸಿಕೆರೆ, ಮೇ ೨೫- ತಾಲೂಕಿನ ಬೆಂಡೆಕೆರೆ ಗ್ರಾಮದ ಬಳಿ ಸರ್ಕಾರಿ ಬಸ್ ಮತ್ತು ಸ್ಯಾಂಟ್ರೊ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಬೆಂಗಳೂರಿನ ಬನ್ನೇರುಘಟ್ಟದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಮಾವುತನಹಳ್ಳಿಯಿಂದ ಅರಸಿಕೆರೆಗೆ ಬರುತ್ತಿರುವ ಸರ್ಕಾರಿ ಬಸ್ ಮತ್ತು ಅರಸಿಕೆರೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಸ್ಯಾಂಟ್ರೊ ಕಾರನ್ನು ಹಿಂದಿಕ್ಕುವ ಭರದಲ್ಲಿ ಈ ಅಪಘಾತ ಸಂಭವಿಸಿದೆ.
ಶ್ರೀನಿವಾಸ ಗೌಡ ಮತ್ತು ಸುರೇಶ್ ಬಾಬು ಎಂಬ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಲೀಲಾವತಿ ಎಂಬ ಮಹಿಳೆ ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಾಣವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಸದಾನಂದ ತಿಪ್ಪಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೈದ್ಯರ ಬ್ಯಾಗ್ ಕಸಿದು ಪರಾರಿ
ಬೆಂಗಳೂರು,ಮೇ.೨೫-ಆಟೋದಲ್ಲಿ ಹೋಗುತ್ತಿದ್ದ ವೈದ್ಯರೊಬ್ಬರ ನಗದು ಮೊಬೈಲ್ ಇನ್ನಿತರ ದಾಖಲೆಗಳಿದ್ದ ಬ್ಯಾಗ್‌ನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕಸಿದು ಪರಾರಿಯಾಗಿರುವ ದುರ್ಘಟನೆ ಯಶವಂತಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಯಶವಂತಪುರದ ಬಳಿಯ ಫಾಂಟಿಸಿಟಿಕಲ್ ಸೆಮಿನರಿ ಚರ್ಚ್ ರಸ್ತೆಯಲ್ಲಿ ರಾತ್ರಿ ೮.೪೫ರ ವೇಳೆ ಡಾ.ಅನೂಪ್ ಅವರು ಆಟೋದಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಅವರ ಬ್ಯಾಗ್‌ನ್ನು ಕಸಿದು ಪರಾರಿಯಾಗಿದ್ದಾನೆ.
ಬ್ಯಾಗ್‌ನಲ್ಲಿ ೪ಸಾವಿರ ನಗದು ಮೊಬೈಲ್ ಇನ್ನಿತರ ದಾಖಲೆಗಳಿದ್ದವು ಎಂದು ನೀಡಿರುವ ದೂರು ದಾಖಲಿಸಿಕೊಂಡಿರುವ ಯಶವಂತಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಶಿಕ್ಷಣದ ಭರವಸೆ ಬಾಲಕಿಗೆ ಹಿಂಸೆ ಮಹಿಳೆ ಬಂಧನ
ಬೆಂಗಳೂರು, ಮೇ ೨೫- ಉತ್ತಮ ಶಿಕ್ಷಣ ನೀಡುವುದಾಗಿ ದೂರದ ಹರಿಯಾಣದಿಂದ ಟೈಲರೊಬ್ಬರ ಅಪ್ರಾಪ್ತ ವಯಸ್ತಿನ ಬಾಲಕಿಯನ್ನು ಕರೆತಂದು ಹಿಂಸೆ ನೀಡುತ್ತಿದ್ದ ಮಹಿಳೆಯೊಬ್ಬಳನ್ನು ಬಂಧಿಸಿರುವ ಕೋರಮಂಗಲ ಠಾಣೆ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಮಂಡಳಿಗೆ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೀಪ್ತಿ ಅಲೆಕ್ಸಾಂಡರ್ ಬಂಧಿತ ಮಹಿಳೆ. ಆಕೆಗೆ ನ್ಯಾಯಾಲಯ ಜಾಮೀನು ನೀಡಿ,ಬಿಡುಗಡೆ ಮಾಡಿದೆ. ದೀಪ್ತಿ ಅಲೆಕ್ಸಾಂಡರ್ ಹರ್ಯಾಣದಿಂದ ಮಗುವನ್ನು ದತ್ತು ಪಡೆದು ನಗರಕ್ಕೆ ಕರೆ ತಂದಿದ್ದಳು. ಕೋರಮಂಗಲದ ಸ್ಥಳೀಯ ಶಾಲೆಯೊಂದಕ್ಕೆ ಆಕೆಯನ್ನು ಸೇರಿಸಿದ್ದಳು. ಆದರೆ ಆಕೆಯೊಂದಿಗೆ ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಿದ್ದ ದೀಪ್ತಿ, ಆಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಳು. ಇದನ್ನು ಸ್ಥಳೀಯ ನಿವಾಸಿಯೊಬ್ಬರು ಪ್ರಶ್ನಿಸಿದಾಗ ಆಕೆಗೆ ದೀಪ್ತಿ ಮಾತಿನಚಕಮಕಿ ನಡೆಸಿ ಹಲ್ಲೆ ನಡೆಸಿದ್ದಾಳೆ. ಈ ಬಗ್ಗೆ ಹಲ್ಲೆಗೊಳಗಾದ ನಯನಾ ಹಾಜ್ರಾ ಕೋರಮಂಗಲ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ೯ ವರ್ಷದ ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಮಂಡಳಿಗೆ ಸೇರಿಸಿದ್ದಾರೆ.

Comments are closed.