ಕರ್ನಾಟಕ

ಮಧ್ಯರಾತ್ರಿ ಔಷಧ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಆರೋಗ್ಯ ಸಚಿವ ಯು.ಟಿ. ಖಾದರ್

Pinterest LinkedIn Tumblr

khadar

ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ಬಹುಕೋಟಿ ಔಷಧ ಖರೀದಿ ಅವ್ಯವಹಾರಗಳ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಆರೋಗ್ಯ ಸಚಿವ ಯು.ಟಿ. ಖಾದರ್ ನಿನ್ನೆ ಮಧ್ಯರಾತ್ರಿ ಔಷಧ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಗರದ ಮಾಗಡಿ ರಸ್ತೆಯಲ್ಲಿರುವ ಔಷಧ ಉಗ್ರಾಣಗಳಿಗೆ ಅಧಿಕಾರಿಗಳ ಜೊತೆ ನಿನ್ನೆ ರಾತ್ರಿ 12 ಗಂಟೆಗೆ ತೆರಳಿದ ಸಚಿವ ಯು.ಟಿ. ಖಾದರ್, ಔಷಧ ಸಂಗ್ರಹ, ಲೆಕ್ಕ, ದಾಸ್ತಾನು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿದರು.

ಕಂಪ್ಯೂಟರೀಕರಣ
ಔಷಧ ಉಗ್ರಾಣಕ್ಕೆ ದಿಢೀರ್ ಭೇಟಿಯ ಬಗ್ಗೆ ಸಂಪರ್ಕಿಸಿದ `ಸಂಜೆವಾಣಿ’ಗೆ ಮಾಹಿತಿ ನೀ‌ಡಿದ ಸಚಿವ ಯು.ಟಿ. ಖಾದರ್, ನಿನ್ನೆ ರಾತ್ರಿ ಔಷಧ ಗೋದಾಮುಗಳಿಗೆ ಭೇಟಿ ನೀಡಿ ದಾಸ್ತಾನು ಪರಿಶೀಲಿಸಿದ್ದೇನೆ. ಎಲ್ಲವೂ ಸರಿಯಾಗಿದೆ ಎಂದರು.

ಔಷಧಗಳ ಖರೀದಿ, ವಿಲೇವಾರಿಯನ್ನು ಕಂಪ್ಯೂಟರೀಕರಣಗೊಳಿಸಲು ನಿರ್ಧರಿಸಲಾಗಿದೆ. ಇನ್ನು 6 ತಿಂಗಳಲ್ಲಿ ಈ ಕಂಪ್ಯೂಟರೀಕರಣ ಕಾರ್ಯ ಮುಗಿಯಲಿದೆ ಎಂದರು.

ಈ ಕಂಪ್ಯೂಟರೀಕರಣದಿಂದ ಯಾವ ಔಷಧಿಗಳನ್ನು ಯಾವ ಜಿಲ್ಲೆಗಳಿಗೆ, ತಾಲೂಕುಗಳಿಗೆ ಅಲ್ಲಿಂದ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿದೆ. ಯಾವ ಔಷಧ ಯಾವ ಆಸ್ಪತ್ರೆಯಲ್ಲಿ ಎಷ್ಟು ದಾಸ್ತಾನು ಇದೆ. ಎಲ್ಲವೂ ಗೊತ್ತಾಗಲಿದೆ ಎಂದರು.

ಈಗ ಔಷಧ ಖರೀದಿ ನಂತರ ಯಾವ ಜಿಲ್ಲೆಗೆ ಎಷ್ಟು ಔಷಧ ಹೋಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳು ತಕ್ಷಣಕ್ಕೆ ಲಭ್ಯವಾಗುವುದಿಲ್ಲ. ಕಂಪ್ಯೂಟರೀಕರಣಗೊಂಡರೆ ಎಲ್ಲವೂ ಕುಳಿತಲ್ಲೇ ಸಿಗಲಿದೆ. ಇದರಿಂದ ಔಷಧ ಇಲ್ಲ ಎಂದು ನೆಪ ಹೇಳಲು ಸಾಧ್ಯವಿಲ್ಲ ಎಂದರು.

ಅವಧಿ ಮೀರಿದ ಔಷಧ ನಾಶ
ರಾಜ್ಯದ ನಾನಾ ಔಷಧ ಉಗ್ರಾಣಗಳಲ್ಲಿ ಸುಮಾರು 10 ಕೋಟಿ ರೂ. ಬೆಲೆಬಾಳುವ ಅವಧಿ ಮೀರಿದ ಔಷಧಗಳ ದಾಸ್ತಾನು ಇದ್ದು, ಕಳೆದ 15 ವರ್ಷಗಳಿಂದ ಈ ಔಷಧಿಗಳನ್ನು ನಾಶಪ‌ಡಿಸುವ ಕೆಲಸ ಆಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವಧಿ ಮೀರಿದ ಔಷಧಗಳನ್ನು ಪರಿಸರಕ್ಕೆ ಹಾನಿಯಾಗದಂತೆ ನಾಶಪ‌ಡಿಸಲು ನೀತಿಯನ್ನು ಜಾರಿ ಮಾಡಲಾಗಿದೆ ಎಂದು ಸಚಿವ ಖಾದರ್ ಹೇಳಿದರು.

ರಾಜ್ಯದ ವಿವಿಧ ಔಷಧ ಗೋದಾಮುಗಳಲ್ಲಿ ಸಂಗ್ರಹವಾಗಿರುವ ಔಷಧಗಳನ್ನು 6 ತಿಂಗಳಲ್ಲಿ ನಾಶಪ‌ಡಿಸುವ ಕೆಲಸ ಸಂಪೂರ್ಣಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಈ ಅವಧಿ ಮೀರಿದ ಔಷಧಗಳನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ತೊಂದರೆಯಾಗದಂತೆ ನಾಶಪ‌ಡಿಸುವ ಕಾರ್ಯ ನಡೆಯಲಿದೆ ಎಂದರು.

Comments are closed.